ಶುಕ್ರವಾರ, ಜನವರಿ 24, 2020
21 °C

ಅಶ್ಲೀಲ ಚಿತ್ರಕ್ಕೆ ಮಕ್ಕಳ ಬಳಕೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ರಾಜ್ಯದಾದ್ಯಂತ ಒಟ್ಟು 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳದೇ ಹೋದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರನ್ನೇ (ಡಿಜಿ- ಐಜಿಪಿ) ಕೋರ್ಟ್‌ಗೆ ಕರೆಯಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ಸರ್ಕಾರಕ್ಕೆ ಎಚ್ಚರಿಸಿದೆ.

ರಾಜ್ಯದಲ್ಲಿ ಬಾಲ ನ್ಯಾಯ (ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ಹೈಕೋರ್ಟ್‌ನ ಸ್ವಯಂ ಪ್ರೇರಿತ ಹಾಗೂ ಬಚಪನ್‌ ಬಚಾವೊ ಸ್ವಯಂ ಸೇವಾ ಸಂಸ್ಥೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪೊಲೀಸರ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ಈ ವಿಷಯದಲ್ಲಿ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಆಘಾತಕಾರಿಯಾಗಿದೆ. ತನಿಖೆಯನ್ನೇ ನಡೆಸದೆ ಏನೂ ನಡೆದೇ ಇಲ್ಲ ಎಂದು ಹೇಳುವುದನ್ನು ಹೇಗೆ ನಂಬುವುದು, ಈ ರೀತಿ ಹೇಳುವುದಾದರೆ ಹಿರಿಯ ಅಧಿಕಾರಿಯೇ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶಿಸಬೇಕಾಗುತ್ತದೆ’ ಎಂದು ಹೇಳಿತು.

‘ಯಾವ ಕ್ರಮ ಕೈಗೊಳ್ಳಲಿದ್ದೀರಿ ಎಂಬುದನ್ನು ಮುಂದಿನ ವಿಚಾರಣೆ ವೇಳೆಗೆ ತಿಳಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ. 

‘ಚಿಕ್ಕಬಳ್ಳಾಪುರದಲ್ಲಿ ಕೆಲ ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ ಮತ್ತು ರಾಜ್ಯದಾದ್ಯಂತ ಒಟ್ಟು 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಪ್ರಕರಣಗಳಲ್ಲಿ ಪೊಲೀಸರು ಒಂದೇ ಒಂದು ಎಫ್‌ಐಆರ್‌ ಕೂಡಾ ದಾಖಲಿಸದೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿದ್ದಾರೆ’ ಎಂದು ಬಚಪನ್‌ ಬಚಾವೊ ಆಂದೋಲನ (ಬಿಬಿಎ) ಸಂಸ್ಥೆ, ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ತಿಳಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು