ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಮುದಾಯ ಒಡೆಯಲು ಸರ್ಕಾರದಿಂದಲೇ ಕುಮ್ಮಕ್ಕು: ದೇವನೂರ ಮಹಾದೇವ ಆರೋಪ

Last Updated 3 ಏಪ್ರಿಲ್ 2022, 8:42 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ದ್ವೇಷ ಹೆಚ್ಚಿಸಿ ಜನ ಸಮುದಾಯಗಳನ್ನು ಒಡೆಯಲು ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.

ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನ ಶಾಂತಿ ನಗರ( ಮಹದೇವ ಪುರ ರಿಂಗ್ ರಸ್ತೆ) ದಲ್ಲಿರುವ ಸೈಯ್ಯದ್ ರಿಜ್ವಾನ್ ಅವರ ಅಂಗಡಿಯಲ್ಲಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ ಮಾಂಸ ಖರೀದಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಓದಿ...ಮೈಸೂರಿನಲ್ಲಿಮುಸ್ಲಿಮರ ಅಂಗಡಿಯಿಂದ ಮಾಂಸ ಖರೀದಿ: ದೇವನೂರು ಮಹದೇವ ನೇತೃತ್ವ

ವೋಟ್ ಬ್ಯಾಂಕಿಗಾಗಿ ಜನರನ್ನು ಒಡೆದು, ದ್ವೇಷವನ್ನು ಎಲ್ಲೆಡೆ ಹಬ್ಬಿಸಿದೆ. ದ್ವೇಷವೇ ಸರ್ಕಾರಕ್ಕೆ ಎನರ್ಜಿ ಡ್ರಿಂಕ್ಸ್ ಆಗಿದೆ ಎಂದರು.
ವಿರೋಧ ಪಕ್ಷಗಳು ಮಂಕಾಗಿ ಕುಳಿತಿರುವ ಈ ಹೊತ್ತಿನಲ್ಲಿ ಎಲ್ಲ ಹದಿನೆಂಟು ಜಾತಿಗಳಲ್ಲೂ ವಿವೇಕ ಇರುವವರು ಮಾತನಾಡಬೇಕು, ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.

ಹಳೆ ಪೇಪರ್, ಖಾಲಿ ಸೀಸ ಕೊಳ್ಳುತ್ತಿದ್ದ ಹೊಟ್ಟೆಪಾಡಿನ ಜನರು ಕಲುಷಿತ ವಾತಾರಣಕ್ಕೆ ಹೆದರಿ ಹೊರಗಡೆ ಕಾಣಿಸುತ್ತಿಲ್ಲ. ಇವರಿಂದ ಪರಿಸರ ಉಳಿಯುತ್ತಿತ್ತು. ಮಠಗಳಲ್ಲಿರುವ ಮರಿಗಳು(ಶಿಷ್ಯಂದಿರು) ಈ ಕೆಲಸ ಮಾಡಲಿ.‌ಕನಿಷ್ಠ ದೇಶಸೇವೆಯಾದರೂ ಆಗುತ್ತದೆ ಎಂದು ಹೇಳಿದರು.

ಜಾತ್ರೆಗಳಲ್ಲಿ ಮುಸ್ಲಿಮರನ್ನು ನಿಷೇಧಿಸುವ ಮೂಲಕ ಬಡವರ ಹೊಟ್ಟೆಗೆ ಒಡೆಯಲಾಗಿದೆ. ಇದು ಧರ್ಮ ಅಲ್ಲ. ಇಂದು ಧರ್ಮದ ಮುಖವಾಡದಲ್ಲಿ ಅಧರ್ಮವೇ ಕುಣಿದು ಕುಪ್ಪಳಿಸುತ್ತಿದೆ. ಜನಸಮುದಾಯದ ವಿವೇಕವನ್ನು ಕಡಿಮೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಂಸ ತಿನ್ನದವರೇ ಮಾಂಸ ಕತ್ತರಿಸುವುದರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಹಾಗೆ ಕತ್ತರಿಸಬಾರದು ಹೀಗೆ ಕತ್ತರಿಸಬಾರದು ಎಂದು ಅಪ್ಪಣೆ ಕೊಡಿಸಲು ಅವರು ಯಾರು ಎಂದು ಪ್ರಶ್ನಿಸಿದ ಅವರು ತಿನ್ನೋದೆ ಪ್ರಾಣಿ ವಧೆ ಮಾಡಿ, ಮಾನವತೆ ಪ್ರಶ್ನೆ ಎಲ್ಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT