ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರಿಗೆ ನಗರ ನಕ್ಸಲ್ ಎಂಬ ಹಣೆಪಟ್ಟಿ: ನಾಗಮೋಹನ್ ದಾಸ್

Last Updated 31 ಡಿಸೆಂಬರ್ 2020, 17:23 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾರಾಷ್ಟ್ರದ ಪುಣೆ ಬಳಿಯ ಭೀಮಾ ಕೋರೆಗಾಂವ್‍ ವಿಜಯೋತ್ಸವದಲ್ಲಿಭಾಗವಹಿಸಿದವರನ್ನು ‘ನಗರ ನಕ್ಸಲ’ರೆಂದು ಜೈಲಿನಲ್ಲಿ ಇಡಲಾಗಿದೆ’ ಎಂದುಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ‘203ನೇ ಭೀಮಾ ಕೋರೆಗಾಂವ್ ಸ್ಮರಣೆ’ ಕಾರ್ಯಕ್ರಮದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಶೋಷಿತ ವರ್ಗಗಳ ಸ್ವಾಭಿಮಾನದ ಸಂಕೇತವಾಗಿ ಭೀಮಾ ಕೋರೆಗಾಂವ್’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಎಲ್ಲಿಯವರೆಗೆ ಜಾತಿ ಆಧಾರಿತ ಅಸಮಾನತೆ, ದೌರ್ಜನ್ಯ, ದಬ್ಬಾಳಿಕೆ, ಬೌದ್ಧಿಕ ದಿವಾಳಿತನ ಇರುವುದೋ, ಅಲ್ಲಿಯವರೆಗೆ ಸಮಾನತೆಗಾಗಿ ಹಂಬಲ, ವಿಮೋಚನೆಗಾಗಿ ಹೋರಾಟ, ಜ್ಞಾನ ಮತ್ತು ಶಾಂತಿಗಾಗಿ ಹುಡುಕಾಟ ಇದ್ದೇ ಇರುತ್ತದೆ’ ಎಂದರು.

‘ಸಂವಿಧಾನದ ಕಾರಣದಿಂದ ಅಸ್ಪೃಶ್ಯರು, ಹಿಂದುಳಿದವರು, ಬುಡಕಟ್ಟು ಜನರು, ಮಹಿಳೆಯರು ಹಾಗೂ ಇತರೆ ಅವಕಾಶವಂಚಿತವರ್ಗಗಳಿಗೆ ಇಂದು ಉನ್ನತ ಸ್ಥಾನಗಳು ದೊರಕಿವೆ. ಈ ಅವಕಾಶದಿಂದಲೇ ಇಂದು ದೇಶದಲ್ಲಿದಲಿತ ರಾಷ್ಟ್ರಪತಿಗಳು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಮಂತ್ರಿ ಇರಲು ಸಾಧ್ಯವಾಗಿದೆ’ ಎಂದೂ ಹೇಳಿದರು.

ಹಿರಿಯ ಕವಿ ಡಾ.ಸಿದ್ದಲಿಂಗಯ್ಯ,‘28 ಸಾವಿರದಷ್ಟಿದ್ದ ಪೇಶ್ವೆ ಸೈನಿಕರ ವಿರುದ್ಧ ಮಹರ್ ಎಂಬ ತಳ ಸಮುದಾಯದ 500 ಮಂದಿ ಸೈನಿಕರ ಜಯವು, ಬ್ರಿಟೀಷರ ಪರ ಅಥವಾ ಮೇಲ್ಜಾತಿಯ ವಿರುದ್ಧವಾಗಿರಲ್ಲಿಲ್ಲ. ಅದು ಮಾನವೀಯತೆ ಪರವಾಗಿ ನಡೆದ ಹೋರಾಟವಾಗಿತ್ತು’ ಎಂದರು.

ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಎಸ್. ಸಿದ್ದರಾಜು,‘ಶೋಷಿತರು ಈ ದೇಶದ ಮೂಲ ನಿವಾಸಿಗಳು. ಚಾತುರ್ವರ್ಣ ವ್ಯವಸ್ಥೆಯಿಂದ ದೇಶದ ಶೇ 90ರಷ್ಟು ಮಂದಿ ತಮ್ಮ ನೆಲದಲ್ಲೇ ಪರಕೀಯರಾಗಿದ್ದಾರೆ. ಸಮಾಜದ ಕಟ್ಟಕಡೆಯ ಸಮುದಾಯಗಳಿಗೂಸಾಮಾಜಿಕ ನ್ಯಾಯ ತಲುಪಿಸುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕಿದೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಕೆ.ಆರ್.ವೇಣುಗೋಪಾಲ್,‘ಶೌರ್ಯ ಸಾಹಸಗಳಿಗೆ ಹೆಸರಾದ ಶೋಷಿತ ವರ್ಗಗಳ ಮಹರ್ ರೆಜಿಮೆಂಟ್, ಭಾರತೀಯ ಸೈನ್ಯದಲ್ಲಿ ಇಂದಿಗೂ ಮಹತ್ವ ಪಡೆದುಕೊಂಡಿದೆ’ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಯನ ಕೇಂದ್ರ ನಿರ್ದೇಶಕ ಎನ್.ಸಂಜೀವ ರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT