ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಐಸಿಯು ಹಾಸಿಗೆ ಇಲ್ಲದೆ ಹೋಗುತ್ತಿದೆ ಪ್ರಾಣ

ಆಮ್ಲಜನಕ ಹಾಸಿಗೆಯೂ ಸಿಗದೆ ಸಾವನ್ನಪ್ಪತ್ತಿದ್ದಾರೆ ರೋಗಿಗಳು
Last Updated 9 ಮೇ 2021, 21:01 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ತಂಡವು ಹಾಸಿಗೆ ಬ್ಲಾಕಿಂಗ್‌ ಹಗರಣವನ್ನು ಬಯಲಿಗೆಳೆದ ನಂತರ ನಗರದಲ್ಲಿ ಐಸಿಯು ಹಾಸಿಗೆಗಳ ಲಭ್ಯತೆ ಹೆಚ್ಚಿರುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಈ ದಾಳಿ ನಡೆದು ಆರು ದಿನ ಕಳೆದರೂ, ವೆಂಟಿಲೇಟರ್, ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳು ರೋಗಿಗಳಿಗೆ ಸಿಗುತ್ತಿಲ್ಲ. ತೀರಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೂ ಹಾಸಿಗೆ ಸಿಗದೆ ಆಸ್ಪತ್ರೆಯ ಆವರಣದಲ್ಲಿ, ಆಂಬುಲೆನ್ಸ್‌ ಒಳಗೇ ಕೊನೆಯುಸಿರು ಎಳೆಯುತ್ತಿದ್ದಾರೆ.

ಪತಿಯನ್ನು ಉಳಿಸಿಕೊಳ್ಳಲು ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಪಟ್ಟ ಪಾಡನ್ನು ಮಹಿಳೆಯೊಬ್ಬರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

‘ನಾವು ಥಣಿಸಂದ್ರದಲ್ಲಿ ವಾಸಿಸುತ್ತಿದ್ದೇವೆ. ಪತಿಗೆ ಎರಡು ದಿನಗಳಿಂದ ಜ್ವರ ಇತ್ತು. ಆರ್‌ಟಿ ಪಿಸಿಆರ್‌ ಪರೀಕ್ಷೆ ಮಾಡಿಸಲೂ ಉದ್ದದ ಸಾಲು ಇತ್ತು. ಶನಿವಾರ ಸಂಜೆ ಸ್ಥಳೀಯ ಕ್ಲಿನಿಕ್‌ನಲ್ಲಿ ಎಕ್ಸ್‌ರೇ ತೆಗೆಸಿದಾಗ, ಆಮ್ಲಜನಕ ಮಟ್ಟ 72ಕ್ಕೆ ಕುಸಿದಿದೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ ಎಂದರು’

‘ಯಾವುದೇ ಆಸ್ಪತ್ರೆಯವರಿಗೆ ವಿಚಾರಿಸಿದರೂ ಬಿಯು ಸಂಖ್ಯೆ ಕೇಳಿದರು. ಕೊನೆಗೆ, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ‘ಸಾರಿ’ (ತೀವ್ರ ಉಸಿರಾಟದ ತೊಂದರೆ) ರೋಗಿಗಳನ್ನು ದಾಖಲಿಸಿಕೊಳ್ಳುತ್ತಾರೆ ಎಂದು ಪರಿಚಯದವರು ಹೇಳಿದರು. ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆ ಕೊಟ್ಟ ರಾಜೀವ್ ಗಾಂಧಿ ಆಸ್ಪತ್ರೆಯವರು ಯಾವುದೇ ಚಿಕಿತ್ಸೆಯನ್ನು ಆರಂಭಿಸಲಿಲ್ಲ. ಆಮ್ಲಜನಕ ಮಟ್ಟ 70ಕ್ಕಿಂತ ಕಡಿಮೆ ಇದೆ. ಇದಕ್ಕೆ ವೆಂಟಿಲೇಟರ್‌ ಇರುವ ಐಸಿಯು ಹಾಸಿಗೆ ಬೇಕು. ನಮ್ಮ ಬಳಿ ಇಲ್ಲ. ಬೇರೆ ಆಸ್ಪತ್ರೆ ನೋಡಿಕೊಳ್ಳಿ ಎಂದರು’

‘ನನ್ನ ಬಳಿ ಇಎಸ್‌ಐ ಗುರುತಿನ ಚೀಟಿ ಇತ್ತು ಎಂಬ ಕಾರಣಕ್ಕೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಪತಿಯನ್ನು ಕರೆದುಕೊಂಡು ಹೋದೆ. ಅಲ್ಲಿ ಆಮ್ಲಜನಕ, ಐಸಿಯು ಸೌಲಭ್ಯದ ಯಾವುದೇ ಹಾಸಿಗೆಯೂ ಇರಲಿಲ್ಲ. ಗ್ಲೂಕೋಸ್‌ ಹಾಕಿಸಿ ಕೂರಿಸಿದರು. ರಾತ್ರಿಯಿಡೀ ಕುರ್ಚಿಯೇ ಮೇಲೆ ಕುಳಿತದ್ದಾಯಿತು’

‘ಐಸಿಯು ಹಾಸಿಗೆ ಬೇಕು ಎಂದರೆ ಬಿಯು ಸಂಖ್ಯೆ ಬೇಕಾಗುತ್ತದೆ ಎಂದರು. ಆಂಟಿಜೆನ್‌ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿತು. ಎಸ್‌ಆರ್‌ಎಫ್‌ ಐಡಿ ಸೃಷ್ಟಿಯಾದರೂ ಬಿಯು ಸಂಖ್ಯೆಗಾಗಿ ನಾಲ್ಕೈದು ತಾಸು ಕಳೆಯಿತು. 104, 108 ಮತ್ತು 1912ಗೆ ಕರೆ ಮಾಡಿದಾಗೊಮ್ಮೆ ಎಲ್ಲ ಮಾಹಿತಿ ತೆಗೆದುಕೊಳ್ಳುತ್ತಿದ್ದರೆ ವಿನಾ ಯಾರೂ ಹಾಸಿಗೆ ವ್ಯವಸ್ಥೆ ಮಾಡಲಿಲ್ಲ’

‘ಯತೀಶ್‌ ಬಾಬು ಎಂಬುವರು ಉಚಿತವಾಗಿ ಆಮ್ಲಜನಕ ವ್ಯವಸ್ಥೆ ಮಾಡಿಕೊಟ್ಟರು. ಭಾನುವಾರ ಬೆಳಿಗ್ಗೆ 8ಗಂಟೆಯ ವೇಳೆಗೆ ಬಿಯು ಸಂಖ್ಯೆ ಸಿಕ್ಕಿತು. ಕೆ.ಸಿ. ಜನರಲ್ ಆಸ್ಪತ್ರೆ, ವಿಕ್ಟೊರಿಯಾ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಅಲೆದರೂ ಐಸಿಯು ಹಾಸಿಗೆ ಸಿಗಲಿಲ್ಲ. ಕೊನೆಗೆ, ಕಾವಲ್ ಬೈರಸಂದ್ರದ ಬಳಿಯ ಬಿ.ಆರ್‌. ಅಂಬೇಡ್ಕರ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೂ ಬೆಡ್‌ ಸಿಗಲಿಲ್ಲ. 12 ಗಂಟೆಯ ವೇಳೆಗೆ ಪತಿ ತೀರಿಕೊಂಡರು’ ಎಂದು ಅವರು ಕಣ್ಣೀರಾದರು.

ಅಸಹಾಯವಾಣಿಗಳು !

‘ಸಾರಿ ರೋಗಿಗಳಿಗೆ ಬಿಯು ಸಂಖ್ಯೆ ಇರುವುದಿಲ್ಲವಾದ್ದರಿಂದ ಅವರಿಗೆ 108ಕ್ಕೆ ಕರೆ ಮಾಡಲು ಹೇಳುತ್ತಾರೆ. ಆದರೆ, ಆಮ್ಲಜನಕ, ಐಸಿಯು ಹಾಸಿಗೆ ಬೇಕಾದರೆ ಬಿಯು ಸಂಖ್ಯೆ ಬೇಕು. ಇದಕ್ಕಾಗಿ 104ಕ್ಕೆ ಕರೆ ಮಾಡಿದರೆ, ಅವರು 1912ಗೆ ಹೇಳಿದರು. 1912ಗೆ ಕರೆ ಮಾಡಿದರೆ 108ಗೆ ಮಾಡಲು ಹೇಳಿದರು. 108 ಸಂಪರ್ಕ ಸಿಗುವುದಕ್ಕೇ ಅರ್ಧ ಗಂಟೆ ಬೇಕು. ಸಿಕ್ಕರೂ ಮಾಹಿತಿ ಕೇಳುತ್ತಾರೆಯೇ ವಿನಾ ಆಗಬೇಕಾದ ಕಾರ್ಯ ಆಗುವುದೇ ಇಲ್ಲ. ರೋಗಿಯ ಸ್ಥಿತಿ ಗಂಭೀರವಾಗಿದೆ, ಬೇಗ ಹಾಸಿಗೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿ 15 ತಾಸುಗಳಾದರೂ ಸ್ಪಂದಿಸಲಿಲ್ಲ. ಪತಿಯ ಅಂತ್ಯಸಂಸ್ಕಾರ ಮಾಡಿ ಬಂದು ಮೂರು ತಾಸಿನ ನಂತರ ಬಿಬಿಎಂಪಿಯಿಂದ ಕರೆ ಮಾಡಿ, ಹಾಸಿಗೆ ಸಿಕ್ಕಿತಾ ಎಂದು ವಿಚಾರಿಸಿದರು’ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದರು.

‘ಮೊದಲು ಔಷಧ ಕೊಡಿ’

‘ಹೋಂ ಐಸೊಲೇಶನ್‌ನಲ್ಲಿರುವ ಯೋಗಕ್ಷೇಮದ ಕುರಿತು ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿ ವಿಚಾರಿಸುತ್ತಾರೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಹೆಸರು, ದೂರವಾಣಿ ಸಂಖ್ಯೆ ಎಲ್ಲ ಕೇಳುತ್ತಾರೆ. ಆದರೆ, ಔಷಧಿ, ಮಾತ್ರೆಗಳು ಬೇಕು ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರೆ, ಅದಕ್ಕೆ ಸಿಬ್ಬಂದಿ ಏನೂ ಹೇಳುವುದಿಲ್ಲ. ಪಿಎಚ್‌ಸಿಗೆ ಹೋಗಿ ಕೇಳಿ ಎನ್ನುತ್ತಾರೆ. ಹೋಂ ಐಸೊಲೇಶನ್‌ನಲ್ಲಿದ್ದವರು ಓಡಾಡಲು ಸಾಧ್ಯವೇ’ ಎಂದು ಮನೆಯಲ್ಲಿಯೇ ಪ್ರತ್ಯೇಕ ಆರೈಕೆಯಲ್ಲಿರುವ ವ್ಯಕ್ತಿಯೊಬ್ಬರು ಪ್ರಶ್ನಿಸಿದರು.

‘ವಿವರಗಳನ್ನು ಸಂಗ್ರಹಿಸುವ ಕೆಲಸವನ್ನು ಮಾತ್ರ ಬಿಬಿಎಂಪಿ ಮಾಡುತ್ತಿದೆ. ಆದರೆ, ರೋಗಿಗಳಿಗೆ ತುರ್ತಾಗಿ ಏನು ಬೇಕು, ಅದಕ್ಕೆ ಯಾವ ವ್ಯವಸ್ಥೆ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತಿಸುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಮೊದಲು ಔಷಧ ಕೊಡಿ’

‘ಹೋಂ ಐಸೊಲೇಶನ್‌ನಲ್ಲಿರುವ ಯೋಗಕ್ಷೇಮದ ಕುರಿತು ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿ ವಿಚಾರಿಸುತ್ತಾರೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಹೆಸರು, ದೂರವಾಣಿ ಸಂಖ್ಯೆ ಎಲ್ಲ ಕೇಳುತ್ತಾರೆ. ಆದರೆ, ಔಷಧಿ, ಮಾತ್ರೆಗಳು ಬೇಕು ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರೆ, ಅದಕ್ಕೆ ಸಿಬ್ಬಂದಿ ಏನೂ ಹೇಳುವುದಿಲ್ಲ. ಪಿಎಚ್‌ಸಿಗೆ ಹೋಗಿ ಕೇಳಿ ಎನ್ನುತ್ತಾರೆ. ಹೋಂ ಐಸೊಲೇಶನ್‌ನಲ್ಲಿದ್ದವರು ಓಡಾಡಲು ಸಾಧ್ಯವೇ’ ಎಂದು ಮನೆಯಲ್ಲಿಯೇ ಪ್ರತ್ಯೇಕ ಆರೈಕೆಯಲ್ಲಿರುವ ವ್ಯಕ್ತಿಯೊಬ್ಬರು ಪ್ರಶ್ನಿಸಿದರು. ‘ವಿವರಗಳನ್ನು ಸಂಗ್ರಹಿಸುವ ಕೆಲಸವನ್ನು ಮಾತ್ರ ಬಿಬಿಎಂಪಿ ಮಾಡುತ್ತಿದೆ. ಆದರೆ, ರೋಗಿಗಳಿಗೆ ತುರ್ತಾಗಿ ಏನು ಬೇಕು, ಅದಕ್ಕೆ ಯಾವ ವ್ಯವಸ್ಥೆ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತಿಸುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT