ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಕರ್ನಾಟಕ ಶಾಖೆಯಿಂದ ಚುನಾವಣೆ ಪ್ರಣಾಳಿಕೆ

ಆರೋಗ್ಯ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸುವಂತೆ ಜನಪ್ರತಿನಿಧಿಗಳಿಗೆ ಮನವಿ
Published 17 ಏಪ್ರಿಲ್ 2024, 15:44 IST
Last Updated 17 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಯುಕ್ತ ಭಾರತೀಯ ವೈದ್ಯಕೀಯ ಸಂಘದ (ಐಎಎಂ) ಕರ್ನಾಟಕ ಶಾಖೆಯು ಚುನಾವಣೆ ಪ್ರಣಾಳಿಕೆ ಸಿದ್ಧಪಡಿಸಿದ್ದು, ಆರೋಗ್ಯ ಕ್ಷೇತ್ರಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿನಾಯಿತಿ, ಹೆಚ್ಚಿನ ಅನುದಾನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದೆ. 

ಆರೋಗ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡುವ ಜತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಒಟ್ಟು 64 ಪುಟಗಳನ್ನು ಹೊಂದಿದ್ದು, ರೋಗವಾರು ಕೂಡ ಚಿಕಿತ್ಸೆ ಸೇರಿ ವಿವಿಧ ಸುಧಾರಣಾ ಕ್ರಮಗಳಿಗೆ ಒತ್ತಾಯಿಸಲಾಗಿದೆ. 

ಆಧುನಿಕ ವೈದ್ಯಕೀಯ ವಿಜ್ಞಾನದ ಶುದ್ಧತೆಯನ್ನು ಕಾಪಾಡಬೇಕು. ಎಲ್ಲ ವೈದ್ಯಕೀಯ ವಿಜ್ಞಾನಗಳನ್ನು ಒಳಗೊಂಡ ಸಮಗ್ರ ಚಿಕಿತ್ಸಾ ಪ್ರಕಾರವು ರೋಗಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮುಂದಿನ ದಿನಗಳಲ್ಲಿ ಜನರ ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆಯಿದೆ. ಆದ್ದರಿಂದ ಎಲ್ಲ ವೈದ್ಯಕೀಯ ಪದ್ಧತಿಗಳನ್ನು ಒಟ್ಟುಗೂಡಿಸಿ ನೋಡುವ ಬದಲು ಪ್ರತ್ಯೇಕಿಸಿ, ರೋಗಿಗೆ ಚಿಕಿತ್ಸೆಯ ಆಯ್ಕೆ ಒದಗಿಸಲು ಕ್ರಮವಹಿಸಬೇಕು ಎಂದು ಐಎಂಎ ಕರ್ನಾಟಕ ಶಾಖೆ ತಿಳಿಸಿದೆ. 

ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ತಡೆಗೆ ಕ್ರಮವಹಿಸಬೇಕು. ವೈದ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು ವೈದ್ಯರನ್ನು ಸೋಲಿಸಿದಂತೆಯೇ ಸರಿ. ಆದ್ದರಿಂದ ಸದ್ಯ ವೈದ್ಯರ ರಕ್ಷಣೆಗೆ ಇರುವ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ‘ಕ್ಲಿನಿಕಲ್‌ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್‌’ನಿಂದ ಸಣ್ಣ ಹಾಗೂ ಮಧ್ಯಮ ಆಸ್ಪತ್ರೆಗಳನ್ನು ಹೊರಗಿಡಬೇಕು. ಆರೋಗ್ಯ ಕ್ಷೇತ್ರದ ಮೇಲೆ ಜಿಎಸ್‌ಟಿ ಹಾಕುವುದೆಂದರೆ ಕಾಯಿಲೆಗೆ ತೆರಿಗೆ ಹಾಕಿದಂತೆ. ಅನಾರೋಗ್ಯ ಪೀಡಿತ ವ್ಯಕ್ತಿಯ ಚಿಕಿತ್ಸೆ ಮೇಲೆ ತೆರಿಗೆ ಹಾಕುವುದು ಖಂಡಿತವಾಗಿಯೂ ನ್ಯಾಯ ಸಮ್ಮತವಲ್ಲ. ಈ ಬಗ್ಗೆಯೂ ಕ್ರಮವಹಿಸಬೇಕು ಎಂದು ಹೇಳಿದೆ. 

ಹೆಣ್ಣು ಭ್ರೂಣ ಹತ್ಯೆ ತಡೆಗೆ ಸರ್ಕಾರ ಕ್ರಮವಹಿಸಬೇಕು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‍ಡಿಟಿ) ಅಡಿ ವೈದ್ಯರ ಮೇಲೆ ಅನಗತ್ಯ ಕಿರುಕುಳ ನೀಡಬಾರದು. ಆಯುಷ್ಮಾನ್ ಯೋಜನೆಯ ಸುಧಾರಣೆಗೆ ಕ್ರಮವಹಿಸಬೇಕು. ವೈದ್ಯಾಧಿಕಾರಿಗಳ ಸಂಖ್ಯೆಯನ್ನು ಜನಸಂಖ್ಯೆ ಆಧಾರಿತವಾಗಿ ಹೆಚ್ಚಿಸಬೇಕು ಎಂದು ಆಗ್ರಹಿಸಿದೆ.

‘ಈ ಪ್ರಣಾಳಿಕೆಯನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ. ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಕ್ಷೇತ್ರವನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು’ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಶ್ರೀನಿವಾಸ್ ಎಸ್. ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT