ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ಹೆಚ್ಚಾದ ಬಿಸಿಲ ಝಳ: ಬಸವಳಿದ ಜನ

ನೆತ್ತಿ ಸುಡುತ್ತಿರುವ ಬಿಸಿಲು: ಫೆಬ್ರುವರಿಯಲ್ಲಿ ನಾಲ್ಕನೇ ಬಾರಿಗೆ ಅತ್ಯಧಿಕ ಉಷ್ಣಾಂಶ ದಾಖಲು
Published 19 ಫೆಬ್ರುವರಿ 2024, 23:36 IST
Last Updated 19 ಫೆಬ್ರುವರಿ 2024, 23:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ಒಂದು ವಾರದಿಂದ ಬಿಸಿಲ ಝಳ ಹೆಚ್ಚಿದ್ದು, ಧಗೆಯು ಜನರನ್ನು ಬಸವಳಿಯುವಂತೆ ಮಾಡಿದೆ. ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ತಾಪಮಾನ ಕೊಂಚ ಇಳಿಕೆಯಾಗಿದ್ದರೂ ಮಧ್ಯಾಹ್ನ ಬಿಸಿಲು ನೆತ್ತಿ ಸುಡುತ್ತಿದೆ.

ಈ ವರ್ಷ ಫೆಬ್ರುವರಿ ಕೊನೆಯಲ್ಲೇ ಪ್ರಖರ ಬಿಸಿಲು ಕಾಣಿಸಿಕೊಂಡಿದ್ದು, ಮಾರ್ಚ್‌, ಏಪ್ರಿಲ್‌ ಹಾಗೂ ಮೇನಲ್ಲಿ ಪರಿಸ್ಥಿತಿ ನಿಭಾಯಿಸುವುದು ಹೇಗಪ್ಪಾ ಎಂದು ಜನರು ಹೇಳುವಂತಾಗಿದೆ. ಬೀದಿಬದಿಯ ವ್ಯಾಪಾರಿಗಳು ಸೇರಿ ಹಲವರಿಗೆ ಬೇಸಿಲಿನ ಬೇಗೆ ತಟ್ಟಿದೆ.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ವಾಡಿಕೆಯಷ್ಟು ಮಳೆ ಸುರಿದಿರಲಿಲ್ಲ. ಚಳಿಗಾಲದಲ್ಲೂ ಚಳಿ ತೀವ್ರತೆ ಕಡಿಮೆಯಿತ್ತು. ಹೀಗಾಗಿ, ತೇವಾಂಶದ ಕೊರತೆಯಾಗಿ ಫೆಬ್ರುವರಿ ಮಧ್ಯಭಾಗದಲ್ಲೇ ತಾಪಮಾನ ಹೆಚ್ಚಳವಾಗಿದೆ. ದಿಢೀರ್ ತಾಪಮಾನ ಏರಿಕೆಯಿಂದ ಜನರು ಫ್ಯಾನ್ ಹಾಗೂ ಎ.ಸಿ ಮೊರೆ ಹೋಗುವಂತಾಗಿದೆ. ಹೊರವಲಯದ ಬಡಾವಣೆಗಳಲ್ಲೂ ವಾತಾವರಣ ಬಿಸಿಯೇರಿಸುತ್ತಿದೆ.

ಕಾಂಕ್ರೀಟ್‌, ಡಾಂಬರು ಕಾವಿನ ಜೊತೆಗೆ ವಾತಾವರಣದಲ್ಲಿ ಆಗಿರುವ ಏರುಪೇರಿನಿಂದ ತಾಪಮಾನದಲ್ಲಿ ಏರಿಕೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ನಗರದಲ್ಲಿ ನಿರ್ಮಲ ಆಕಾಶ ಇರಲಿದ್ದು, ಉಷ್ಣಾಂಶದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

–––

ನಾಲ್ಕನೇ ದಾಖಲೆ

ನಗರದಲ್ಲಿ ಭಾನುವಾರ ಗರಿಷ್ಠ ಉಷ್ಣಾಂಶ 34.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಫೆಬ್ರುವರಿಯಲ್ಲಿ ಅತ್ಯಧಿಕ ಉಷ್ಣಾಂಶ ದಾಖಲಾಗುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ 2005ರ ಫೆ.17ರಂದು ಗರಿಷ್ಠ 35.9, 2011 ಹಾಗೂ 2016ರ ಫೆಬ್ರುವರಿಯಲ್ಲಿ ಗರಿಷ್ಠ ಉಷ್ಣಾಂಶ 35.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿ ಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಫೆಬ್ರುವರಿಯಲ್ಲಿ ಸರಾಸರಿ 30.9 ಹಾಗೂ ಮಾರ್ಚ್‌ನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 33.4 ಡಿಗ್ರಿ ಸೆಲ್ಸಿಯಸ್‌ ಇತ್ತು. ಆದರೆ, ಮಳೆ ಕೊರತೆಯಿಂದ ತಾಪಮಾನ ಸಹಜವಾಗಿ ಏರಿಕೆಯಾಗಿದೆ. ಇದೇ ತಿಂಗಳಲ್ಲಿ 7 ಮಿ.ಮೀನಷ್ಟು ಮಳೆ ಆಗಬೇಕಿತ್ತು. ಮಳೆ ಆಗಿಲ್ಲ. ಇನ್ನೂ ಕೆಲವು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯೂ ಇಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಎಲ್‌ ನಿನೊ ವಿದ್ಯಮಾನದಿಂದಾಗಿ ಉಷ್ಣಾಂಶವು ಕೆಲವು ಭಾಗದಲ್ಲಿ ಸಾಮಾನ್ಯಕ್ಕಿಂತ ಏರಿಕೆ ಕಾಣಿಸಲಿದೆ.ಸದ್ಯ ಎಲ್‌ ನಿನೊ ವಿದ್ಯಮಾನ ದುರ್ಬಲವಾಗಿ ಮಧ್ಯಮ ಹಂತಕ್ಕೆ ಬಂದಿದೆ. ಅದರ ಪ್ರಭಾವ ಜೂನ್‌ ವೇಳೆಗೆ ತಗ್ಗುವ ಸಾಧ್ಯತೆಯಿದೆ’ ಎಂದು ಅವರು ಹೇಳುತ್ತಾರೆ.

‘ಬೇಸಿಗೆಯ ದಿನಗಳಲ್ಲಿ ಮಕ್ಕಳು ಹಾಗೂ ವೃದ್ಧರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ದೇಹದಲ್ಲಿ ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕು. ಹೆಚ್ಚು ನೀರು ಕುಡಿಯಬೇಕು’ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಮಾನ ನಿಲ್ದಾಣದ ಸುತ್ತಮುತ್ತ ಅಧಿಕ ತಾಪಮಾನ

ನಗರದಲ್ಲಿ ತಾಪಮಾನ ದಾಖಲಿಸಲು ನಾಲ್ಕು ಕೇಂದ್ರಗಳಿವೆ. ಎಚ್‌.ಎ.ಎಲ್‌ ಏರ್‌ಪೋರ್ಟ್‌ ಕೇಂದ್ರದಲ್ಲಿ ಗರಿಷ್ಠ 32.4 ಬೆಂಗಳೂರು ನಗರ ಕೇಂದ್ರದಲ್ಲಿ 32.6 ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಕೇಂದ್ರದಲ್ಲಿ 33.6 ಜಿ.ಕೆ.ವಿ.ಕೆ ಆವರಣದ ಕೇಂದ್ರದಲ್ಲಿ ಗರಿಷ್ಠ ಉಷ್ಣಾಂಶ 31.4 ಡಿಗ್ರಿ ಸೆಲ್ಸಿಯಸ್‌ ಸೋಮವಾರ ಮಧ್ಯಾಹ್ನ ದಾಖಲಾಗಿತ್ತು.

ಎಳನೀರು ಪೂರೈಕೆಯಲ್ಲಿ ವ್ಯತ್ಯಯ

ತಾಪಮಾನ ಏರಿಕೆ ಆಗುತ್ತಿದ್ದಂತೆಯೇ ಜನರು ತಂಪು ಪಾನೀಯ ಎಳನೀರು ಮಜ್ಜಿಗೆ ಹಣ್ಣಿನ ಜ್ಯೂಸ್‌ ಮೊರೆ ಹೋಗುತ್ತಿದ್ದಾರೆ. ಯುವತಿಯರು ಬಿಸಿಲಿನಿಂದ ಪಾರಾಗಲು ಕೊಡೆಯ ಆಶ್ರಯ ಪಡೆಯುತ್ತಿದ್ದಾರೆ. ‘ಎಳನೀರಿಗೆ ಹೆಚ್ಚಿನ ಬೇಡಿಕೆ ಹೆಚ್ಚಾಗಿದೆ. ಆದರೆ ನಿರೀಕ್ಷೆಯಷ್ಟು ಎಳನೀರು ಪೂರೈಕೆಯಾಗುತ್ತಿಲ್ಲ. ತೆಂಗಿನ ಮರಕ್ಕೆ ಕಪ್ಪುತಲೆ ಹುಳು ರೋಗ ಕಾಣಿಸಿಕೊಂಡಿದ್ದು ಗರಿಗಳ ಒಣಗಿ ಬೀಳುತ್ತಿವೆ. ಏಪ್ರಿಲ್‌ ವೇಳೆಗೆ ಎಳನೀರು ಬೆಲೆ ಮತ್ತಷ್ಟು ಹೆಚ್ಚಲಿದೆ’ ಎಂದು ವ್ಯಾಪಾರಿ ರಿಯಾಜ್‌ ಅಹಮದ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT