ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 1.38 ಲಕ್ಷಕ್ಕೆ ಏರಿಕೆ

Last Updated 3 ಸೆಪ್ಟೆಂಬರ್ 2020, 20:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 3,189 ಕೋವಿಡ್ ಪ್ರಕರಣಗಳು ಗುರುವಾರ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.38 ಲಕ್ಷ ದಾಟಿದೆ.

ಸೋಂಕಿತರಲ್ಲಿ ಮತ್ತೆ 29 ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ. ಇದರಿಂದಾಗಿ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 2,066ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ದರ ಇಳಿಕೆಯತ್ತ ಮುಖ ಮಾಡಿದ್ದು, ಸದ್ಯ ಶೇ 1.50ರಷ್ಟಿದೆ. ಕೆಲ ದಿನಗಳಿಂದ ಪ್ರತಿನಿತ್ಯ ಸರಾಸರಿ 25 ಸಾವಿರ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಒಟ್ಟು ಪರೀಕ್ಷೆಗಳ ಸಂಖ್ಯೆ 10 ಲಕ್ಷದ ಗಡಿ ಸಮೀಪಿಸಿದೆ.

ಸದ್ಯ ಸೋಂಕು ದೃಢ ಪ್ರಮಾಣ ಶೇ 14.74 ರಷ್ಟಿದ್ದು, 10 ದಿನಗಳಲ್ಲಿ 29,408 ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ಕೋವಿಡ್ ಪೀಡಿತರಲ್ಲಿ 2,631 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 96 ಸಾವಿರ ದಾಟಿದೆ. ಒಟ್ಟು ಸೋಂಕಿತರಲ್ಲಿ ಶೇ 69.04ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸದ್ಯ 276 ರೋಗಿಗಳು ಐಸಿಯುವಿನಲ್ಲಿ ಇದ್ದಾರೆ.

ಹೊರವಲಯದಲ್ಲಿ ಹೆಚ್ಚಳ

ಶೇ 50 ರಷ್ಟು ವಲಸೆ ಕಾರ್ಮಿಕರು ವಿವಿಧೆಡೆಯಿಂದ ನಗರಕ್ಕೆ ಮರಳಿದ್ದಾರೆ. ಇದೇ ವೇಳೆ, ನಗರದ ಹೊರವಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ವಲಸೆ ಕಾರ್ಮಿಕರ ಬರುವಿಕೆಗೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಯಾವುದೇ ಸಂಬಂಧವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಹಿಂದೆ ಕಡಿಮೆ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದ್ದರಿಂದ ಪ್ರಕರಣಗಳ ಸಂಖ್ಯೆ 150ರಿಂದ 180ರ ಆಸುಪಾಸಿನಲ್ಲಿತ್ತು. ಆದರೆ, ಈಗ ವಲಯದಲ್ಲಿ ನಿತ್ಯ 2ಸಾವಿರಕ್ಕೂ ಅಧಿಕ ಪರೀಕ್ಷೆ ನಡೆಸಲಾಗುತ್ತಿದೆ. ಆದ್ದರಿಂದ ಪ್ರತಿನಿತ್ಯ 300ರಿಂದ 380 ಪ್ರಕರಣಗಳು ಪತ್ತೆಯಾಗುತ್ತಿವೆ’ ಎಂದು ಮಹದೇವಪುರ ವಲಯದ ಆರೋಗ್ಯ ವೈದ್ಯಾಧಿಕಾರಿ ಡಾ. ಸುರೇಂದ್ರ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಕೋವಿಡ್‌ ವಾರ್‌ ರೂಮ್ ಮಾಹಿತಿಯ ಪ್ರಕಾರ ಮಾ.8ರಿಂದ ಆ.18ರವರೆಗೆ ಮಹದೇವಪುರ ವಲಯದಲ್ಲಿ 6,361 ಪ್ರಕರಣಗಳು ವರದಿಯಾಗಿದ್ದವು. ಆದರೆ, ಆ.25ರಿಂದ ಆ.31ರವರೆಗೆ ಏಳು ದಿನಗಳ ಅವಧಿಯಲ್ಲಿ 985 ಪ್ರಕರಣಗಳು ವರದಿಯಾಗಿವೆ.

ನಗರದ ಕೋವಿಡ್ ಪ್ರಕರಣಗಳ ಅಂಕಿ–ಅಂಶ

ಒಟ್ಟು ಪ್ರಕರಣಗಳು; 1,38,701

ಗುಣಮುಖರಾದವರು; 96,194

ಸಕ್ರಿಯ ಪ್ರಕರಣಗಳು; 40,440

ಮೃತಪಟ್ಟವರು; 2,066

ಈ ದಿನದ (ಸೆ.4) ಏರಿಕೆ; 3,189

ಗುಣಮುಖರು; 2,631

ಮೃತಪಟ್ಟವರು; 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT