ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಹಿಂಪಡೆದಿದ್ದ ರವೀಂದ್ರನಾಥ್‌ಗೆ ಬಡ್ತಿ

Last Updated 31 ಡಿಸೆಂಬರ್ 2020, 21:47 IST
ಅಕ್ಷರ ಗಾತ್ರ

ಬೆಂಗಳೂರು: ‘ಇಲಾಖೆಯ ಕಿರುಕುಳದಿಂದ ಸಂಕಟಪಟ್ಟಿದ್ದೇನೆ’ ಎಂದು ಅಳಲು ತೋಡಿಕೊಂಡು ಹುದ್ದೆಗೆ ರಾಜೀನಾಮೆ ಪತ್ರ ನೀಡಿ, ನಂತರ ವಾಪಸು ಪಡೆದಿದ್ದ ಎಡಿಜಿಪಿ ಡಾ. ಪಿ. ರವೀಂದ್ರನಾಥ್‌ ಅವರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿದೆ. ಅರಣ್ಯ ವಿಭಾಗದ ಎಡಿಜಿಪಿ ಆಗಿದ್ದ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೆಶನಾಲಯದ ಡಿಜಿಪಿ ಆಗಿ ಗುರುವಾರ ವರ್ಗಾವಣೆ ಮಾಡಿದೆ.

ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಜೊತೆಯಲ್ಲೇ ಮತ್ತಷ್ಟು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನು 37 ಐಪಿಎಸ್ ಅಧಿಕಾರಿಗಳಿಗೆ ಬಡ್ತಿಯನ್ನೂ ನೀಡಲಾಗಿದೆ.

ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಡಿಸಿಪಿ ಆಗಿ ಕೆಲಸ ಮಾಡಿದ್ದ ಚೇತನ್‌ಸಿಂಗ್ ರಾಥೋಡ್ ಹಾಗೂ ಎಸ್ಪಿ ಆಗಿದ್ದ ಅಮಿತ್‌ ಸಿಂಗ್‌ ಅವರನ್ನು ಕೇಂದ್ರ ಸೇವೆಗೆ ಕಳುಹಿಸಲಾಗಿದೆ. ಕೇಂದ್ರ ಗುಪ್ತಚರ ಹಾಗೂ ರಾಷ್ಟ್ರೀಯ ತನಿಖಾ ದಳದಲ್ಲಿ (ಎನ್‌ಐಎ) ಅವರು ಕೆಲಸ ಮಾಡಲಿದ್ದಾರೆ.

ವರ್ಗಾವಣೆಯಾದವರು: ಕೆ. ರಾಮಚಂದ್ರರಾವ್ (ಎಡಿಜಿಪಿ, ಮಾನವ ಹಕ್ಕು), ಎಂ. ಚಂದ್ರಶೇಖರ್ (ಐಜಿಪಿ, ಕೇಂದ್ರ ವಿಭಾಗ),ಸೀಮಂತ್‌ಕುಮಾರ್ ಸಿಂಗ್ (ಎಡಿಜಿಪಿ, ಎಸಿಬಿ), ಪವಾರ್ ಪ್ರವೀಣ್ ಮಧುಕರ್ (ಐಜಿಪಿ, ದಕ್ಷಿಣ ವಲಯ, ಮೈಸೂರು), ಎನ್‌. ಸತೀಶ್‌ಕುಮಾರ್ (ಕಮಿಷನರ್, ಕಲಬುರ್ಗಿ), ಎನ್‌. ಶಶಿಕುಮಾರ್ (ಕಮಿಷನರ್, ಮಂಗಳೂರು), ವೈ.ಎಸ್. ರವಿಕುಮಾರ್ (ಡಿಐಜಿಪಿ, ನೇಮಕಾತಿ), ವಿಪುಲ್‌ಕುಮಾರ್ (ನಿರ್ದೇಶಕ, ಪೊಲೀಸ್ ತರಬೇತಿ ಅಕಾಡೆಮಿ), ವಿಕಾಸ್ ಕುಮಾರ್ (ಡಿಐಜಿಪಿ, ಕೆಎಸ್‌ಆರ್‌ಪಿ), ವರ್ಟಿಕಾ ಕಟಿಯಾರ್ (ಎಸ್ಪಿ, ಬೆಂಗಳೂರು ಅಪರಾಧ ದಾಖಲಾತಿ ಘಟಕ) ಹಾಗೂ ರಂಜಿತ್‌ಕುಮಾರ್ ಬಂಡಾರು (ಎಸಿಪಿ, ಭಟ್ಕಳ ಉಪವಿಭಾಗ), ಪ್ರದೀಪ್ ಗುಂಟಿ (ಎಸ್ಪಿ, ಐಎಸ್‌ಡಿ), ಬಿ. ನಿಖಿಲ್ (ಎಸ್ಪಿ, ನಕ್ಸಲ್ ನಿಗ್ರಹ ದಳ, ಕಾರ್ಕಳ), ಹರಿರಾಮ್ ಶಂಕರ್ (ಡಿಸಿಪಿ, ಮಂಗಳೂರು ನಗರ), ಕೆ. ರಾಮರಾಜನ್ (ಡಿಸಿಪಿ, ಹುಬ್ಬಳ್ಳಿ–ಧಾರವಾಡ), ಅಡ್ಡೂರು ಶ್ರೀನಿವಾಸಲು (ಎಸ್ಪಿ, ವೈರ್‌ಲೇಸ್ ಬೆಂಗಳೂರು), ಡಿ. ಆರ್‌.ಶ್ರೀಗೌರಿ (ಎಸ್ಪಿ, ರೈಲ್ವೆ).

‘ಒಂದೇ ತಕ್ಕಡಿಯಲ್ಲಿ ಅಳೆಯುವುದೇ?’
ಬೆಂಗಳೂರು:
ತಮ್ಮ ವರ್ಗಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಡಿ. ರೂಪಾ ಅವರು ಟ್ವೀಟ್ ಮಾಡಿದ್ದಾರೆ.

‘ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಹೇಮಂತ್‌ ನಿಂಬಾಳ್ಕರ್ ವಿರುದ್ಧ ದೋಷಾರೋಪ ಸಲ್ಲಿಸಿದ್ದ ಸಿಬಿಐ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆದ ಡಿಸೆಂಬರ್‌ನಲ್ಲೇ (1 ವರ್ಷ ಆಯಿತು) ಶಿಫಾರಸು ಮಾಡಿದೆ. ಅಷ್ಟಾದರೂ ಶಿಸ್ತುಕ್ರಮ ತೆಗೆದುಕೊಂಡಿಲ್ಲ. ಇದೀಗ ನನ್ನನ್ನೂ ಹಾಗೂ ದೋಷಾರೋಪ ಪಟ್ಟಿ ಎದುರಿಸುತ್ತಿರುವ ಅಧಿಕಾರಿಯನ್ನು ಒಂದೇ ತಕ್ಕಡಿಯಲ್ಲಿ ಅಳೆಯಲಾಗುತ್ತಿದೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT