ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಸವಾಲುಗಳಿಗೆ ಸನ್ನದ್ಧವೇ ಬಿಬಿಎಂಪಿ ಕಾಯ್ದೆ?

ಪರಿಣಾಮಕಾರಿ, ಪಾರದರ್ಶಕ ಆಡಳಿತಕ್ಕೆ ಪೂರಕವಾಗಿಲ್ಲ ಕಾಯ್ದೆ * ಬಲಹೀನ ಅಂಶಗಳ ಬದಲಾವಣೆ ಅಗತ್ಯ
Last Updated 10 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ಆಡಳಿತಕ್ಕೆ ಪ್ರತ್ಯೇಕ ಕಾಯ್ದೆ ಬೇಕು ಎಂಬ ಬೇಡಿಕೆಯೇನೋ ಈಡೇರಿದೆ. ಆದರೆ, ಸರ್ಕಾರ ಜಾರಿಗೆ ತಂದಿರುವ ‘ಬಿಬಿಎಂಪಿ ಕಾಯ್ದೆ 2020’ ಈ ಮಹಾನಗರದ ಆಡಳಿತವು ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟುಗಳ ಶಮನಗೊಳಿಸಲು ನೆರವಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ.

ಬಿಬಿಎಂಪಿ ಕಾಯ್ದೆಯನ್ನು ಆಳವಾಗಿ ಅವಲೋಕಿಸಿದರೆ ನಿರಾಸೆಯಾಗುತ್ತದೆ. ಹೊಸ ಶತಮಾನದ ನಿರೀಕ್ಷೆಗಳನ್ನು ಪೂರೈಸುವುದಕ್ಕೆ ಹಾಗೂ ಕಾಲದೊಂದಿಗೆ ಹೆಜ್ಜೆ ಹಾಕುವುದಕ್ಕೆ ಈ ಕಾಯ್ದೆ ಸಮರ್ಥವಾಗಿಲ್ಲ. ಇಂದಿನ ಡಿಜಿಟಲ್‌ ಯುಗದಲ್ಲಿ ದೇಶದ ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಂತಹ ಮಹಾನಗರದ ಆಡಳಿತವನ್ನು ಇನ್ನಷ್ಟು ಜನಸ್ನೇಹಿ ಹಾಗೂ ತಂತ್ರಜ್ಞಾನ ಸ್ನೇಹಿಯಾಗಿ ರೂಪಿಸುವ ಅಗತ್ಯವಿದೆ. ಇದಕ್ಕೆ ಸಂಪೂರ್ಣ ನವೀನವಾದ ಹಾಗೂ ಹೊಸ ಹೊಳಹುಗಳಿಂದ ಕೂಡಿದ ಕಾಯ್ದೆಯ ಅಗತ್ಯವಿದೆ ಎನ್ನುತ್ತಾರೆ ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಗರಾಡಳಿತ ತಜ್ಞರು.

ಬಿಬಿಎಂಪಿಯ ಕಾಯ್ದೆಯ ಪ್ರಮುಖ ಕೊರತೆಗಳೇನು, ಇದರಿಂದ ಭವಿಷ್ಯದಲ್ಲಿ ಏನೆಲ್ಲ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಕಾಯ್ದೆಯಲ್ಲೇ ಕೆಲವು ಅಂಶಗಳನ್ನು ಸೇರಿಸಿಕೊಳ್ಳುವುದರಿಂದ ಏನು ಪ್ರಯೋಜನಗಳಾಗಲಿವೆ ಎಂಬುದನ್ನು ಸಂಸ್ಥೆಯ ನಿರ್ದೇಶಕರಾದ ಪಿ.ಜಿ.ಶಣೈ ಹಾಗೂ ಸಿ.ಆರ್‌. ರವೀಂದ್ರ ಇಲ್ಲಿ ವಿವರಿಸಿದ್ದಾರೆ.

ನೂತನ ಬಿಬಿಎಂಪಿ ಕಾಯ್ದೆಯು ಪಾಲಿಕೆಯ ಆರ್ಥಿಕ ಸ್ವಾವಲಂಬನೆ ಮತ್ತು ನಾಗರಿಕ ಸೇವೆಗಳ ಸುಧಾರಣೆಗಾಗಿ ಅಳವಡಿಸಿರುವ ಉಪವಿಧಿಗಳು ಅಸಮರ್ಪಕವಾಗಿವೆ. ಹೊಸ ಕಾಯ್ದೆಯಲ್ಲಿ ಕೆಎಂಸಿ ಕಾಯ್ದೆಯ ನಿಬಂಧನೆಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ಪಾಲಿಕೆಯ ಆರ್ಥಿಕ ಸ್ವಾವಲಂಬನೆ ಮತ್ತು ಸ್ಥಳೀಯ ಸ್ವಯಂ ಆಡಳಿತವನ್ನು ಸಶಕ್ತಗೊಳಿಸುವ ಹಾಗೂ ಜನಜೀವನ ಮಟ್ಟ ಸುಧಾರಣೆಗೆ ಕೈಗೊಳ್ಳಬಹುದಾದ ಅಂಶಗಳನ್ನು ಅಳವಡಿಸಿಕೊಂಡು ಸಮರ್ಥ ಕಾನೂನು ಚೌಕಟ್ಟು ರೂಪಿಸದೆ ಹೋದರೆ ಸಮರ್ಥ ಆಡಳಿತ ವ್ಯವಸ್ಥೆ ರೂಪಿಸುವ ಉದ್ದೇಶ ಸಾಕಾರ ಬಲು ಕಷ್ಟ ಎನ್ನುತ್ತಾರೆ ರವೀಂದ್ರ.

ಆಸ್ತಿ ಮಾರಾಟಕ್ಕೆ ಅವಕಾಶ ಆತಂಕಕಾರಿ

ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಪಾಲಿಕೆಯ ಯಾವುದೇ ಸ್ಥಿರಾಸ್ತಿಯನ್ನು ಸರ್ಕಾರದ ಅನುಮೋದನೆ ಪಡೆದು ಹರಾಜು ಅಥವಾ ಮಾರಾಟ ಮಾಡಲುಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 130ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದನ್ನು ಕೈಬಿಡುವುದು ಸೂಕ್ತ. ಸ್ಥಿರಾಸ್ತಿ ಮಾರಾಟ ಅಥವಾ ಹರಾಜನ್ನು ಸಂಪೂರ್ಣ ನಿಷೇಧಿಸಬೇಕು. ಮುಖ್ಯ ಆಯುಕ್ತರಿಗೆ ನೀಡಿರುವ ಈ ಅಧಿಕಾರವನ್ನು ಸಾರ್ವಜನಿಕ ಮಾರುಕಟ್ಟೆ, ಶಾಪಿಂಗ್‌ ಕಾಂಪ್ಲೆಕ್ಸ್‌, ವಾಹನ ನಿಲುಗಡೆ ತಾಣ ಮತ್ತಿತರ ವಾಣಿಜ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೆ, ಮಾರಾಟದ ಬದಲು ದೀರ್ಘ ಕಾಲದ ಬಾಡಿಗೆ ನೀಡುವುದಕ್ಕೆ ಮಾತ್ರ ಸೀಮಿತಗೊಳಿಸದಿದ್ದರೆ ಭವಿಷ್ಯದಲ್ಲಿ ಒಂದೊಂದೇ ಆಸ್ತಿಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸುತ್ತಾರೆ ಪಿ.ಜಿ.ಶೆಣೈ.

ನಗರ ಯೋಜನೆ ಮತ್ತು ಸುಧಾರಣೆಗಳು: ನಗರದ ಸರ್ವತೋಮುಖ ಬೆಳವಣಿಗೆಯ ಬುನಾದಿ ಇರುವುದು ನಗರ ಯೋಜನೆಯಲ್ಲಿ. ಈ ವಿಭಾಗದ ಕಾರ್ಯಗಳನ್ನು ನಿರೂಪಿಸುವ ಸೆಕ್ಷನ್‌ಗಳು ಕಟ್ಟಡ ನಿರ್ಮಾಣ ನಿಯಂತ್ರಿಸುವುದಕ್ಕೆ ಸೀಮಿತವಾಗಿವೆ. ನಗರದ ಜನರ ನಿತ್ಯ ಗೋಳಾಗಿರುವ ಸಂಚಾರ ಸಮಸ್ಯೆ ನಿವಾರಣೆಗಾಗಿ ಸಂಚಾರ ಎಂಜಿನಿಯರಿಂಗ್‌ ಸೇವೆಗಳ ಕಾರ್ಯಾಚರಣೆ ಹಾಗೂ ಸಾರಿಗೆ ಸೌಲಭ್ಯಗಳ ನಿರ್ವಹಣೆ, ರಸ್ತೆ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣ, ಸುರಕ್ಷಿತ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಯೋಜನೆಗಳ ರೂಪರೇಷೆಗಳನ್ನು ಈ ವಿಭಾಗದ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತರಬೇಕು. ನಗರದ ವ್ಯವಸ್ಥಿತ ಅಭಿವೃದ್ಧಿಗೆ ಪೂರಕವಾದ ನಿಯಮಗಳನ್ನು ಹಾಗೂ ಸಂಚಾರ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಯೋಜನೆ ರೂಪಿಸಲು ನೆರವಾಗುವ ಅಂಶಗಳನ್ನುಈ ಕಾಯ್ದೆಯಲ್ಲೇ ಅಡಕಗೊಳಿಸಬೇಕು ಎಂದು ಸಲಹೆ ನೀಡುತ್ತಾರೆ ರವೀಂದ್ರ.

ಕಟ್ಟಡ ನಿಬಂಧನೆ ಉಪವಿಧಿಗಳು ನಗರದ ಶಿಸ್ತುಬದ್ಧ ಬೆಳವಣಿಗೆ ದೃಷ್ಟಿಯಿಂದ ಮಹತ್ವದ್ದು. ಆದರೆ, ಸಶಕ್ತ ಬೈ–ಲಾ ರೂಪಿಸುವುದಕ್ಕೆ ಕಾಯ್ದೆಯಲ್ಲೇ ರೂಪರೇಷೆ ಕಲ್ಪಿಸುವ ಅಗತ್ಯವಿದೆ. ಕಾಯ್ದೆಯು ಇಂತಹ ಬೈಲಾಗಳಿಗೆ ಆಧಾರ ಕಲ್ಪಿಸುವ ಅಸ್ಥಿಪಂಜರದಂತಿರಬೇಕು ಎಂದು ಪ್ರತಿಪಾದಿಸುತ್ತಾರೆ ಅವರು.

ರಸ್ತೆ ವಿಸ್ತರಣೆಯೂ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ ನಗರಾಡಳಿತದ ಇನ್ನೊಂದು ಬಲುಮುಖ್ಯ ಸವಾಲು. ಕೇಂದ್ರ ಸರ್ಕಾರ ರೂಪಿಸಿದ 2013ರ ಭೂಸ್ವಾಧೀನ ಕಾಯ್ದೆ ಅನುಸರಿಸಿ ಭೂಸ್ವಾಧೀನ ನಡೆಸಬೇಕು ಎಂದು ಕಾಯ್ದೆಯ ಸೆಕ್ಷನ್‌ 131 (2)ರಲ್ಲಿ ಹೇಳಲಾಗಿದೆ. ಭೂಸ್ವಾಧೀನಕ್ಕೆ ಪರ್ಯಾಯ ಮಾರ್ಗವಾದ ಅಭಿವೃದ್ಧಿ ಹಕ್ಕು ವರ್ಗಾವಣೆಗೆ (ಟಿಡಿಆರ್‌) ಸಂಬಂಧಿಸಿದಂತೆ 1961ರ ಕರ್ನಾಟಕ ಪಟ್ಟಣ ಮತ್ತು ಗ್ರಾಮೀಣ ಯೋಜನೆ ಕಾಯ್ದೆಯ (ಕೆಟಿಸಿಪಿ ಕಾಯ್ದೆ) ನಿಬಂಧನೆಗಳನ್ನು ಹೊಸ ಕಾಯ್ದೆಯಲ್ಲಿ ಅಳವಡಿಸಿ ನೇರವಾಗಿ ಭೂಸ್ವಾಧೀನ ನಡೆಸುವ ಅಧಿಕಾರವನ್ನು ಪಾಲಿಕೆಗೆ ನೀಡಬೇಕಾದ ಅಗತ್ಯವಿದೆ. ಬಹುತೇಕ ಕಾಮಗಾರಿಗಳ ವಿಳಂಬಕ್ಕೆ ಪ್ರಮುಖ ಕಾರಣವೇ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಎದುರಾಗುವ ತೊಡಕುಗಳು. ಇವುಗಳನ್ನು ನಿವಾರಿಸಲು ಶಕ್ತಿ ನೀಡುವ ಸೆಕ್ಷನ್‌ಗಳು ಹೊಸ ಕಾಯ್ದೆ ಇಲ್ಲದೇ ಹೋದರೆ ನವನಗರ ನಿರ್ಮಾಣದ ಕನಸಿಗೆ ಕಸುವು ತುಂಬುವುದು ಕಷ್ಟ ಎಂಬುದು ಅವರ ಅಂಬೋಣ.

ಪರಂಪರೆ ಸಂರಕ್ಷಣೆ ನಿಬಂಧನೆಯನ್ನು ಬಿಬಿಎಂಪಿ ಕಾಯ್ದೆಯಲ್ಲಿ ಅಳವಡಿಸಿರುವುದು ಒಳ್ಳೆಯದೇ. ಆದರೆ, 1961ರರ ಕೆಟಿಸಿಪಿ ಕಾಯ್ದೆಯ ಅಂಶಗಳನ್ನು ಯಥಾವತ್‌ ನಕಲು ಮಾಡಲಾಗಿದೆ. ಪಾರಂಪರಿಕ ಕಟ್ಟಡಗಳ ಮರುನಿರ್ಮಾಣಕ್ಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯ ಪರಂಪರೆ ಸಂರಕ್ಷಣಾ ತಾಂತ್ರಿಕ ಸಮಿತಿ ಅನುಮತಿ ಪಡೆಯಬೇಕು ಎಂಬ ಅಂಶ ಹೊಸ ಕಾಯ್ದೆಯಲ್ಲಿದೆ. ನಗರ ಗತ ವೈಭವವನ್ನು ಉಳಿಸಿಕೊಂಡು ಅದರ ತಳಹದಿಯ ಮೇಲೆ ಅಭಿವೃದ್ಧಿಯ ರೂಪರೇಷೆ ತಯಾರಿಸಲು ಖಚಿತ ನಿಯಮಗಳನ್ನು ಕಾಯ್ದೆಯ ಅಳವಡಿಸಿಕೊಳ್ಳಬಹುದಾಗಿತ್ತು.

ಆಸ್ತಿ ತೆರಿಗೆ– ಮತ್ತೊಂದು ವೈಫಲ್ಯ

ವಾರ್ಷಿಕ ಆಸ್ತಿ ತೆರಿಗೆಯ ಮೌಲ್ಯದ ಲೆಕ್ಕಾಚಾರ ಮಾಡುವ ಕುರಿತು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 144ರಲ್ಲಿ ವಿವರಿಸಲಾಗಿದೆ. ಇದು ಕೆಎಂಸಿ ಕಾಯ್ದೆಯ ಸೆಕ್ಷನ್‌ 108 ಎಯ ಉಪವಿಧಿಗಳನ್ನು ಇಲ್ಲಿ ಯಥಾವತ್‌ ಭಟ್ಟಿ ಇಳಿಸಲಾಗಿದೆ. ತೆರಿಗೆ ಮೌಲ್ಯ ಲೆಕ್ಕಾಚಾರಕ್ಕೆ ವಾರ್ಷಿಕ ಬಾಡಿಗೆ ಮೌಲ್ಯದ ಆಧಾರದಲ್ಲಿ ಘಟಕ ಪ್ರದೇಶಧ ಮೌಲ್ಯ ವ್ಯವಸ್ಥೆ (ಯೂನಿಟ್‌ ಏರಿಯಾ ವ್ಯಾಲ್ಯು) ಅಳವಡಿಸಿಕೊಳ್ಳಲಾಗಿದೆ. ಆದರೆ, ರಾಜ್ಯದ ಇತರ ಪೌರಾಡಳಿತ ಸಂಸ್ಥೆಗಳು ಈಗಾಗಲೇ 1957ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಸೆಕ್ಷನ್‌ 45 ಬಿ ಅಡಿ ಬಂಡವಾಳ ಮೌಲ್ಯ ವ್ಯವಸ್ಥೆ ಅಳವಡಿಸಿಕೊಂಡಿವೆ. ಇದು ಬಿಬಿಎಂಪಿ ಸಂಪನ್ಮೂಲ ಕ್ರೋಡೀಕರಣಕ್ಕೆ ಹೊಡೆತ ನೀಡಲಿದೆ ಎಂದು ವಿಶ್ಲೇಷಿಸುತ್ತಾರೆ ಶೆಣೈ.

ಹಣಕಾಸು –ನಿಯಂತ್ರಣ ಸುಧಾರಣೆ ಅಗತ್ಯ: ಹಣಕಾಸಿನ ಶಿಸ್ತು ಮತ್ತು ಕಾರ್ಯಕ್ಷಮತೆ ನಿರ್ವಹಣೆಗೆ ಕಾಯ್ದೆಯಲ್ಲಿ ಹೊಸ ನಿಬಂಧನೆಗಳನ್ನು ಕಲ್ಪಿಸಲಾಗಿದೆ. ಈ ಕಾಯ್ದೆಗಳು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2003ರ ಮಾನದಂಡಗಳನ್ನು ಅನ್ವಯಿಸಲಾಗಿದೆ. ಈ ನಿಬಂಧನೆಗಳ ಜೊತೆಗೆ ಹಣಕಾಸು ಮಾರುಕಟ್ಟೆಯಲ್ಲಿ ಬಿಬಿಎಂಪಿಯ ವಿಶ್ವಾಸಾರ್ಹತೆ ಹೆಚ್ಚಿಸಲು ಹೆಚ್ಚಿನ ಕ್ರಮದ ಅಗತ್ಯವಿದೆ. ಹಣಕಾಸಿನ ಸಂಪೂರ್ಣ ವ್ಯವಸ್ಥೆಯನ್ನು ಡಿಜಿಟಲ್‌ ವೇದಿಕೆಯಲ್ಲಿ ನಿರ್ವಹಿಸುವಂತಾಗಬೇಕು. ಲೆಕ್ಕ ಪರಿಶೋಧಕ ಮಾನದಂಡಗಳ ಮೇಲೆ ಬಂಡವಾಳ ವೆಚ್ಚ ಮತ್ತು ಕಾರ್ಯನಿರ್ವಹಣೆಯ ವೆಚ್ಚಗಳ ನಿಯಂತ್ರಣಕ್ಕೆ ಬಿಬಿಎಂಪಿ ಬಜೆಟ್‌ನಲ್ಲೇ ಆರ್ಥಿಕ ಶಿಸ್ತು ತರಲು ಇನ್ನಷ್ಟು ಬಿಗಿ ನಿಯಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬುದು ತಜ್ಞರ ಅಭಿಮತ.

***

ಬಿಬಿಎಂಪಿ ಕಾಯ್ದೆ ಪರಿಪೂರ್ಣವಾಗಿಲ್ಲ. ಇದು ಅನೇಕ ಕೊರತೆಗಳನ್ನು ಹೊಂದಿದೆ. ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಾದರೂ ಮನಸ್ಸು ಮಾಡಬೇಕು

ಪಿ.ಜಿ.ಶೆಣೈ,ನಿರ್ದೇಶಕ, ಸೆಂಟರ್ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌

ಮೊದಲೇ ನಗರ ಆಡಳಿತ ತಜ್ಞರ ಅನುಭವ ಪಡೆಯುತ್ತಿದ್ದರೆ ಬಿಬಿಎಂಪಿ ಕಾಯ್ದೆಯನ್ನು ಇನ್ನಷ್ಟು ಶಕ್ತಿಯುತವಾಗಿ ರೂಪಿಸಬಹುದಿತ್ತು. ಇನ್ನೂ ಕಾಲ ಮಿಂಚಿಲ್ಲ. ಈ ಕಾಯ್ದೆಯನ್ನು ಬಲಪಡಿಸದಿದ್ದರೆ ಬೆಂಗಳೂರು ಮುಂದಕ್ಕೆ ಹೋಗುವ ಬದಲು ಹಿಂದಡಿ ಇಡಲಿದೆ.

ಸಿ.ಆರ್.ರವೀಂದ್ರ,ನಿರ್ದೇಶಕ, ಸೆಂಟರ್ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌

ಬಿಬಿಎಂಪಿ ಕಾಯ್ದೆ– ಬಡಕಲು ಬಿಂಬ?

ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರು ಮಹಾನಗರದ ಆಡಳಿತ ವ್ಯವಸ್ಥೆಯನ್ನು ನಿರೂಪಿಸಲು ಸದೃಢ ಹಾಗೂ ಸಶಕ್ತವಾದ ಕಾಯ್ದೆಯ ಅಗತ್ಯವಿದೆ. ಬದಲಾಗುತ್ತಿರುವ ಈ ನಗರದಲ್ಲಿ ಎದುರಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಿ ಸಮರ್ಥ ಆಡಳಿತ ನೀಡಲು 1976ರ ಕರ್ನಾಟಕ ಪೌರನಿಗಮಗಳ ಕಾಯ್ದೆ (ಕೆಎಂಸಿ) ಕಸುವು ಹೊಂದಿಲ್ಲ ಎಂಬ ಕಾರಣಕ್ಕಾಗಿಯೇ ಸರ್ಕಾರ ‘ಬಿಬಿಎಂಪಿ ಕಾಯ್ದೆ 2020’ ಅನ್ನು ಜಾರಿಗೊಳಿಸಿದೆ. ಆದರೆ, ಈ ಕಾಯ್ದೆಯನ್ನು ಆಳವಾಗಿ ಅವಲೋಕಿಸಿದರೆ ನಗರವು ಎದುರಿಸುತ್ತಿರುವ ಹೊಸ ಸವಾಲುಗಳನ್ನು ಮಣಿಸುವಂತಹ ಪ್ರಮುಖವಾದ ಯಾವುದೇ ಅಂಶಗಳು ಕಾಣಿಸುತ್ತಿಲ್ಲ. ಕೆಎಂಸಿ ಕಾಯ್ದೆಯಲ್ಲಿದ್ದ ಹಲವಾರು ನ್ಯೂನತೆಗಳು ಹೊಸ ಕಾಯ್ದೆಯಲ್ಲೂ ಮುಂದುವರೆದಿವೆ. ಈ ಕೊರತೆಗಳನ್ನು ನೀಗಿಸಿ ನಗರಕ್ಕೆ ಪ್ರಬಲ ಕಾಯ್ದೆ ರೂಪಿಸದಿದ್ದರೆ ಭವಿಷ್ಯದಲ್ಲಿ ಹಲವಾರು ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಕಾನೂನು ಮತ್ತು ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿರುವ ತಜ್ಞರು. ಬಿಬಿಎಂಪಿ ಕಾಯ್ದೆಯ ಕೊರತೆಗಳೇನು, ಅದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳೇನು ಎಂಬ ವಿಶ್ಲೇಷಣೆ ಇಲ್ಲಿದೆ.

ಬೆಂಗಳೂರು ‘ಆಡಳಿತ’ದ ಪ್ರಮುಖ ಹೆಜ್ಜೆಗಳು...

ಬೆಂಗಳೂರಿನ ನಗರಾಡಳಿತಕ್ಕೆ 150ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ನಗರ ಆಡಳಿತ ಬೆಳೆದು ಬಂದ ಹೆಜ್ಜೆಗಳು ಇಲ್ಲಿವೆ.

1862ರಮಾರ್ಚ್ 27ರಂದು ಹಳೆಯ ನಗರದ ಒಂಬತ್ತು ಪ್ರಮುಖ ನಾಗರಿಕರನ್ನು ಒಳಗೊಂಡ ಮುನ್ಸಿಪಲ್ ಬೋರ್ಡ್ ಅನ್ನು ರಚಿಸಲಾಗಿತ್ತು.

1850ರ ಪಟ್ಟಣಗಳ ಸುಧಾರಣಾ ಕಾಯ್ದೆಯಡಿ ರಚನೆಗೊಂಡ ಈ ಮುನ್ಸಿಪಲ್ ಬೋರ್ಡನ್ನು ಹೊಸ ಕಂಟೋನ್ಮೆಂಟ್ ಪ್ರದೇಶದ ಆಡಳಿತಕ್ಕಾಗಿ ರೂಪಿಸಲಾಗಿತ್ತು.

1881ರಲ್ಲಿ ಬೆಂಗಳೂರು ನಗರ ಪುರಸಭೆ ಮತ್ತು ಬೆಂಗಳೂರು ನಾಗರಿಕ ಮತ್ತು ಮಿಲಿಟರಿ ನಿಲ್ದಾಣ ಮುನ್ಸಿಪಾಲಿಟಿ (ಕಂಟೋನ್ಮೆಂಟ್) ಎಂಬ ಎರಡು ಸ್ವತಂತ್ರ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.

1882ರಲ್ಲಿ ಆಸ್ತಿ ತೆರಿಗೆಯನ್ನು ಪರಿಚಯಿಸಲಾಯಿತು. ಪೊಲೀಸ್ ಮತ್ತು ಸ್ಥಳೀಯ ಸುಧಾರಣೆಯ ಮೇಲೆ ಹೆಚ್ಚಿನ ಅಧಿಕಾರ ನೀಡಲಾಯಿತು.

1913ರಲ್ಲಿ ಗೌರವ ಅಧ್ಯಕ್ಷರನ್ನು ಪರಿಚಯಿಸಲಾಯಿತು.

1926 ರಲ್ಲಿನಿಯೋಜಿತ ಮುನ್ಸಿಪಲ್ ಕಮಿಷನರ್ ಅವರನ್ನು ಕಂಟೋನ್ಮೆಂಟ್ ಮಂಡಳಿಯ ಕಾರ್ಯನಿರ್ವಾಹಕ ಪ್ರಾಧಿಕಾರಿ ಎಂದು ಪರಿಚಯಿಸಲಾಯಿತು.

1949ರಲ್ಲಿ ಎರಡು ಮುನ್ಸಿಪಲ್ ಬೋರ್ಡ್‌ಗಳನ್ನು ವಿಲೀನಗೊಳಿಸಿ ಬೆಂಗಳೂರು ಸಿಟಿ ಕಾರ್ಪೊರೇಷನ್ ಕಾಯ್ದೆಯಡಿ ಬೆಂಗಳೂರು ಸಿಟಿ ಕಾರ್ಪೊರೇಷನ್‌ ರಚಿಸಲಾಯಿತು. ಮೇಯರ್ ಕಚೇರಿಯನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

1950 ರಲ್ಲಿ ಸಿಟಿ ಕಾರ್ಪೊರೇಷನ್‌ಗೆ ಮೊದಲ ಚುನಾವಣೆ ನಡೆಯಿತು.

2007ರಲ್ಲಿ ಬಿಬಿಎಂಪಿಯನ್ನು ರಚಿಸಲಾಯಿತು.

2010ರಲ್ಲಿ ಬಿಬಿಎಂಪಿಗೆ ಮೊದಲ ಚುನಾವಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT