ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಕ್ಷೇತ್ರಗಳಿಗೆ ‘ಜನಸೇವಕ’ ವಿಸ್ತರಣೆ: ನಾಳೆಯಿಂದ ಜಾರಿ

ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ * ನಾಗರಿಕರಿಗೆ 53 ವಿವಿಧ ಸೇವೆ ಒದಗಿಸುವ ಉದ್ದೇಶ
Last Updated 2 ಫೆಬ್ರುವರಿ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ಜನರ ಮನೆ ಬಾಗಿಲಿಗೇಸಕಾಲ ಸೇವೆಯನ್ನು ಒದಗಿಸುವ ‘ಜನಸೇವಕ’ ಯೋಜನೆ ಮಂಗಳವಾರದಿಂದ (ಫೆ.4) ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಣೆಗೊಳ್ಳಲಿದೆ.

ವರ್ಷದ ಹಿಂದೆ (2–3–2019) ನಗರದ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ಜನಸೇವಕ’ ಆರಂಭವಾಗಿತ್ತು. ಇದುವರೆಗೆ30 ಸಾವಿರಕ್ಕಿಂತಲೂ ಹೆಚ್ಚು ಸೇವೆಗಳನ್ನು ನಾಗರಿಕರಿಗೆ ತಲುಪಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಬಹಳಷ್ಟು ನೆರವಿಗೆ ಬಂದಿದೆ.ಇಲ್ಲಿ ದೊರೆತ ಯಶಸ್ಸಿನ ಹಿನ್ನೆಲೆಯಲ್ಲಿ ರಾಜಾಜಿನಗರ, ಮಹಾದೇವಪುರ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಸೇವೆ ಆರಂಭವಾಗಲಿದೆ.

‘ನಗರದ ಸಂಚಾರ ದಟ್ಟಣೆ, ಅನಾರೋಗ್ಯ ಸಹಿತ ಹಲವಾರು ಕಾರಣಗಳಿಗೆ ಜನರಿಗೆ ಕಚೇರಿಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಜನಸೇವಕ ಈ ಸಮಸ್ಯೆಗೆ ಬಹಳ ದೊಡ್ಡ ಉತ್ತರ ದೊರಕಿಸಿಕೊಟ್ಟಿದೆ.
ಪರೀಕ್ಷೆ ಮಾಡಿ ಆಯ್ಕೆ ಮಾಡಿದಂತಹ ಖಾಸಗಿ ವ್ಯಕ್ತಿಗಳನ್ನು ಹೊರಗುತ್ತಿಗೆ ರೂಪದಲ್ಲಿ ಸೇವೆಗೆ ಬಳಸಿಕೊಂಡು ಈ ಕೆಲಸ ಮಾಡಲಾಗುತ್ತಿದೆ. ಜನಸೇವಕರು ಲಂಚಕ್ಕೆ ಪೀಡಿಸಿದರೆ ಕರೆ ಕೇಂದ್ರಕ್ಕೆ ಕರೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಜನರಿಗೆ ಸುಲಭವಾಗಿ ಸೇವೆ ಸಲ್ಲಿಸುವ ವ್ಯವಸ್ಥೆ ಟಿ.ದಾಸರಹಳ್ಳಿ ಕ್ಷೇತ್ರದಲ್ಲಿ ಆಗಿದೆ. ಹೀಗಾಗಿ ಇದನ್ನು ಇತರ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಲಾಗುತ್ತಿದೆ’ ಎಂದು ಜನಸೇವಕ ಯೋಜನಾ ನಿರ್ದೇಶಕ ವರಪ್ರಸಾದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಒಂದು ವಾರ್ಡ್‌ಗೆ ಒಬ್ಬ ಜನಸೇವಕನನ್ನು ನಿಯೋಜಿಸಿದ್ದೇವೆ. ಅಧಿಕ ಕರೆ ಬರುವಲ್ಲಿ ಇಬ್ಬರನ್ನು ನಿಯೋಜಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಟೆಂಡರ್‌ ಕರೆದು ಜನಸೇವಕರ ಸೇವೆ ಪಡೆಯುವ ಚಿಂತನೆ ಇದೆ. ಇದರಿಂದ ಒಂದಷ್ಟು ಉದ್ಯೋಗವೂ ಸೃಷ್ಟಿಯಾದಂತಾಗುತ್ತದೆ’ ಎಂದು ಅವರು ವಿವರಿಸಿದರು.

ಬಳಕೆ ಹೇಗೆ:ನಾಗರಿಕರು ಸಹಾಯ ಕರೆ ಕೇಂದ್ರಕ್ಕೆ ಕರೆ ಮಾಡಿ (080-44554455) ತಮಗೆ ಬೇಕಾದ ಸೇವೆಗಾಗಿ ಮನವಿ ಸಲ್ಲಿಸಬೇಕು.ಕೇಂದ್ರದ ಸಿಬ್ಬಂದಿ ಜನರು ನೀಡಬೇಕಾದ ಅಗತ್ಯ ದಾಖಲಾತಿ, ಸೇವಾ ಶುಲ್ಕ ಸಹಿತ ಅಗತ್ಯದ ಮಾಹಿತಿ ನೀಡುತ್ತಾರೆ. ದಾಖಲೆಗಳು ಲಭ್ಯವಾದ ಬಳಿಕ ನಿಗದಿತ ಸಮಯದಲ್ಲಿ ಮನೆಬಾಗಿಲಿಗೆ ಬಂದು ದಾಖಲೆಗಳನ್ನು ನೀಡಿ ಹೋಗುತ್ತಾರೆ.

ಮೊಬೈಲ್‌ ಆ್ಯಪ್‌ ಮೂಲಕ ಅಥವಾ ಆನ್‌ಲೈನ್‌ ಮೂಲಕ ಸಹ ಜನರು ಈ ಸೇವೆ ಬಳಸಿಕೊಳ್ಳಬಹುದಾಗಿದ್ದು, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಸೇವೆ ಲಭ್ಯ ಇದೆ.

ಜನಸೇವಕರ ಕಾರ್ಯ ವಿಧಾನ

*ಸಮಯ ನಿಗದಿಯಾದ ನಂತರ, ನಿಯೋಜಿತ ಜನ ಸೇವಕ ಸಿಬ್ಬಂದಿ, ನಾಗರಿಕರು ಕೋರಲಾದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಮನೆಗೆ ಭೇಟಿ ನೀಡುತ್ತಾರೆ. ನಾಗರಿಕರು ಅರ್ಜಿಯನ್ನು ಭರ್ತಿ ಮಾಡಲು ಸಹಕರಿಸುತ್ತಾರೆ. ಅಗತ್ಯವಿದ್ದಲ್ಲಿ ಯಾವುದೇ ದಾಖಲಾತಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುತ್ತಾರೆ.

*ಸೇವೆಗೆ ತಗಲುವ ಇಲಾಖಾ ಶುಲ್ಕದ ಜೊತೆಗೆ ಸೇವಾ ಶುಲ್ಕ ಸಂಗ್ರಹಿಸುತ್ತಾರೆ

*ನಾಗರಿಕರಿಗೆ ಮೊಬೈಲ್ ಎಸ್‌ಎಂಎಸ್ಸಂದೇಶದ ಮೂಲಕ ಸ್ವೀಕೃತಿ ಕಳುಹಿಸಲಾಗುತ್ತದೆ

*ಸಂಬಂಧಿತ ಇಲಾಖೆಯಿಂದ ಅರ್ಜಿಯ ಮೇಲೆ ಕ್ರಮ ಕೈಗೊಂಡ ನಂತರ ಜನಸೇವಕ ಸಿಬ್ಬಂದಿ ಪ್ರಮಾಣ ಪತ್ರ / ನಿರಾಕ್ಷೇಪಣಾ ಪತ್ರ / ಅನುಮತಿ / ಪರವಾನಗಿಯನ್ನು ನಾಗರಿಕರ ಮನೆಗೆ ತಲುಪಿಸುತ್ತಾರೆ.

*ಸೇವಾವಿತರಣೆಯಲ್ಲಿ ಅಗತ್ಯ ಸುಧಾರಣೆಯನ್ನು ತರುವ ಸಲುವಾಗಿ ಸೇವೆ ವಿತರಣೆ ಪೂರ್ಣವಾದ ನಂತರ ನಾಗರಿಕರಿಂದ ಸಲಹೆ/ಅಭಿಪ್ರಾಯವನ್ನು ಪಡೆಯಲಾಗುತ್ತದೆ

ಹಲವಾರು ಬಗೆಯಲ್ಲಿ ಲಾಭ

ನಾಗರಿಕರು ಸೇವೆಗಳನ್ನು ಪಡೆಯುವ ಸಲುವಾಗಿ ತಮ್ಮ ಸಮಯ ಹಾಗೂ ಹಣವನ್ನು ವ್ಯಯ ಮಾಡಿ ಸರ್ಕಾರಿ ಕಚೇರಿಗಳಿಗೆ ಅಥವಾ ಸೇವಾ ಕೇಂದ್ರಗಳಿಗೆ ಅಲೆದಾಡುವ ಅಗತ್ಯ ಇಲ್ಲ.ಸೇವೆಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಬೇಕಿಲ್ಲ.

ಬೆಳಿಗ್ಗೆ 8ರಿಂದ ರಾತ್ರಿ 8ರ ನಡುವೆ ತಮಗೆ ಅನುಕೂಲವೆನಿಸಿದ ಸಮಯದಲ್ಲಿ ಸೇವೆ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT