ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಈ ಅರಣ್ಯವನ್ನು ‘ಪಾರ್ಕ್’ ಮಾಡಲು ಹೊರಟ ತೋಟಗಾರಿಕೆ ಇಲಾಖೆ!

ಜಾರಕಬಂಡೆ ಕಾವಲ್‌ ಮೀಸಲು ಅರಣ್ಯ ಮೇಲೆ ತೋಟಗಾರಿಕಾ ಇಲಾಖೆ ಕಣ್ಣು l ಪರಿಸರ ಪ್ರೇಮಿಗಳ ಆಕ್ರೋಶ
Last Updated 24 ಅಕ್ಟೋಬರ್ 2021, 20:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಉಳಿದಿರುವ ಅರಣ್ಯ ಪ್ರದೇಶ ಶೇ 2.28ರಷ್ಟು ಮಾತ್ರ. ಇದು ಸರ್ಕಾರಿ ದಾಖಲೆಗಳಲ್ಲಿನ ಲೆಕ್ಕಾಚಾರ. ಆದರೆ, ವಾಸ್ತವದಲ್ಲಿ ಅಷ್ಟೂ ಅರಣ್ಯ ಉಳಿದಿಲ್ಲ. ಅಳಿದುಳಿದ ಅರಣ್ಯ ಪ್ರದೇಶಗಳಲ್ಲಿ ಜಾರಕಬಂಡೆ ಕಾವಲ್‌ನ 632 ಎಕರೆ ಪ್ರದೇಶವೂ ಸೇರಿದೆ. ಈ ವಿಶಾಲವಾದ ನೈಸರ್ಗಿಕ ಕಾಡನ್ನು ಮರಗಳ ಉದ್ಯಾನವನ್ನಾಗಿ ರೂಪಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವುದು ಪರಿಸರ ಕಾರ್ಯಕರ್ತರ ಕಳವಳಕ್ಕೆ ಕಾರಣವಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಿದ್ಧಪಡಿಸಿದ್ದ 2031ರ ನಗರ ಮಹಾಯೋಜನೆಯ ಕರಡಿನ ಪ್ರಕಾರ ಇಡೀ ಬೆಂಗಳೂರು ನಗರ ಜಿಲ್ಲೆಯಲ್ಲಿ 2,190 ಚ.ಕಿ.ಮೀ.ನಷ್ಟು ಅರಣ್ಯ ಭೂಮಿ ಇದೆ. ಅದರಲ್ಲಿ 260 ಚದರ ಕಿ.ಮೀ ವ್ಯಾಪ್ತಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವೂ ಸೇರಿದೆ. ಬೆಂಗಳೂರು ಮಹಾನಗರ ಪ್ರದೇಶವನ್ನಷ್ಟೇ ಪರಿಗಣಿಸಿದರೆ, ಇಲ್ಲಿ ಉಳಿದಿರುವ ಕಾಡಿನ ಪ್ರಮಾಣ ಶೇ 5.5ರಷ್ಟೂ ಆಗದು. ಸರ್ಕಾರಿ ದಾಖಲೆಗಳ ಪ್ರಕಾರ ಗೋವಿಂದಪುರ, ಕಾಡುಗೋಡಿ, ಮಂಡೂರು, ಬಿ.ಎಂ.ಕಾವಲ್‌, ತುರಹಳ್ಳಿ, ಜಾರಕಬಂಡೆ, ಜಾರಕ ಬಂಡೆ ಗಂಧದ ಕಾವಲ್‌, ಮಾರಸಂದ್ರ, ಕುಂಬಾರನಹಳ್ಳಿ, ಮಾದಪ್ಪನಹಳ್ಳಿ ಹಾಗೂ ದೊರೆಸಾನಿ ಪಾಳ್ಯಗಳು ಈ ನಗರದ ಅರಣ್ಯ ಪ್ರದೇಶಗಳು.

ಒಂದು ಕಾಲದಲ್ಲಿ ವನ್ಯಜೀವಿಗಳ ಸಮೃದ್ಧ ನೆಲೆಯಾಗಿದ್ದ ಬೆಂಗಳೂರು ಅಭಿವೃದ್ಧಿಯ ನಾಗಾಲೋಟದಲ್ಲಿ ತನ್ನ ವನ್ಯ ಸಂಪತ್ತನ್ನೆಲ್ಲ ಕಳೆದುಕೊಳ್ಳುತ್ತಾ ಸಾಗಿದೆ. ಬೆಂಗಳೂರಿನ ತುಂಬಾ ಈಗ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಾಂಕ್ರೀಟ್‌ ಕಾಡುಗಳೇ ಕಾಣಿಸುತ್ತವೆ. ದುರ್ಬೀನು ಹಾಕಿ ಹುಡುಕಿದರೂ ಕಾಣಿಸದಷ್ಟರ ಮಟ್ಟಿಗೆ ಕಾಡುಗಳು ಕ್ಷೀಣಿಸಿವೆ. ಪರಿಸ್ಥಿತಿ ಹೀಗಿರುವಾಗ ಮೀಸಲು ಅರಣ್ಯವನ್ನೂ ಅನ್ಯ ಉದ್ದೇಶಕ್ಕೆ ಬಳಸಲು ಸರ್ಕಾರ ಮುಂದಾಗಿರುವುದಕ್ಕೆ ನಗರದ ಪರಿಸರ ಪ್ರೇಮಿಗಳ ಹಾಗೂ ವನ್ಯಜೀವಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿ ಸರ್ಕಾರಿ ದಾಖಲೆಗಳಲ್ಲಿ ಇರುವ ಬಹುತೇಕ ಅರಣ್ಯ ಪ್ರದೇಶಗಳು ಒತ್ತುವರಿಯಾಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಕೆಯಾಗಿವೆ. ಅಳಿದುಳಿದ ಕಾಡುಗಳಲ್ಲಿ ಹೆಚ್ಚು ವಿಶಾಲವಾಗಿರುವುದು ಎಂದರೆ ಜಾರಕ ಬಂಡೆ ಕಾವಲ್‌ ಹಾಗೂ ತುರಹಳ್ಳಿ ಕಿರು ಅರಣ್ಯಗಳು ಮಾತ್ರ. ಈ ಎರಡು ಅರಣ್ಯಗಳ ಮೇಲೆ ಏಕೆ ಸರ್ಕಾರಕ್ಕೆ ಕಣ್ಣು ಎಂದು ಅರ್ಥವಾಗುತ್ತಿಲ್ಲ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು 2002ರ ಜೀವವೈವಿಧ್ಯ ಸಂರಕ್ಷಣೆ ಕಾಯ್ದೆ ಪ್ರಕಾರ ಅರಣ್ಯಗಳನ್ನು ರಕ್ಷಿಸುವ ಹೊಣೆ ಸರ್ಕಾರದ್ದು. ಆದರೆ, ಸರ್ಕಾರವೇ ಈ ನೈಸರ್ಗಿಕ ಕಾಡುಗಳ ಪಾಲಿಗೆ ಖಳನಾಗಲು ಹೊರಟಿದೆ. ಇದು ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವನ್ಯಜೀವಿ ಕಾರ್ಯಕರ್ತರು.

597 ಎಕರೆಗಳಷ್ಟು ವಿಶಾಲವಾಗಿರುವ ತುರಹಳ್ಳಿ ಕಿರು ಅರಣ್ಯದಲ್ಲಿ 400 ಎಕರೆಗಳಷ್ಟು ವಿಶಾಲವಾದ ಮರಗಳ ಉದ್ಯಾನವನ್ನು ನಿರ್ಮಿಸುವ ಯೋಜನೆಯನ್ನು ಸ್ವತಃ ಅರಣ್ಯ ಇಲಾಖೆ 2021ರ ಆರಂಭದಲ್ಲಿ ರೂಪಿಸಿತ್ತು. ಈ ಕಿರು ಅರಣ್ಯಕ್ಕೆ ಸೇರಿದ 40 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಈಗಾಗಲೇ ಒಂದು ವೃಕ್ಷೋದ್ಯಾನವನ್ನು ಅಭಿವೃದ್ಧಿಪಡಿಸಿದೆ. ಮತ್ತೆ ಈ ಕಾಡಿನ 400 ಎಕರೆಯನ್ನು ವೃಕ್ಷೋದ್ಯಾನ ನಿರ್ಮಾಣಕ್ಕೆ ಬಳಸುವ ಪ್ರಸ್ತಾವವನ್ನು ಸ್ಥಳೀಯರು ಹಾಗೂ ವನ್ಯಜೀವಿ ಕಾರ್ಯಕರ್ತರು ಬಲವಾಗಿ ಖಂಡಿಸಿದ್ದರು. ನೂರಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು, 250 ಬಗೆಯ ಕ್ರಿಮಿ–ಕೀಟಗಳು, 25 ಬಗೆಯ ಸರೀಸೃಪಗಳಿಗೆ ನೆಲೆ ಒದಗಿಸಿರುವ ತುರಹಳ್ಳಿ ಕಾಡಿನಲ್ಲಿ ಮಾನವ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸುವ ಯಾವುದೇ ಚಟುವಟಿಕೆಗೆ ಬಳಸಬಾರದು ಎಂದು ಬಲವಾಗಿ ಒತ್ತಾಯಿಸಿದ್ದರು. ಜನರ ಪ್ರತಿರೋಧಕ್ಕೆ ಮಣಿದ ಆಗಿನ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ವೃಕ್ಷೋದ್ಯಾನ ನಿರ್ಮಿಸುವ ಪ್ರಸ್ತಾವವನ್ನು ಕೈಬಿಟ್ಟಿರುವುದಾಗಿ ಪ್ರಕಟಿಸಿದ್ದರು.

ಒಂದು ಕಂಟಕ ದೂರವಾಯಿತು ಎನ್ನುವಾಗಲೇ ಜಾರಕ ಬಂಡೆ ಕಾವಲ್‌ನ ಮೀಸಲು ಅರಣ್ಯವನ್ನು ತೋಟಗಾರಿಕಾ ಇಲಾಖೆ ಮರಗಳ ಉದ್ಯಾನ ನಿರ್ಮಿಸಲು ಮುಂದಾಗಿದೆ. ಈ ಮೀಸಲು ಅರಣ್ಯದ ಒಂದು ಭಾಗದಲ್ಲಿ ಈಗಾಗಲೇ ಟ್ರೀಪಾರ್ಕ್‌ ನಿರ್ಮಾಣವಾಗಿದೆ. ಈ ಮರಗಳ ಉದ್ಯಾನವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಪರಿಶೀಲಿಸಿದ್ದಾರೆ. ಇಲ್ಲಿ ಸುಮಾರು 400 ಎಕರೆಗಳಷ್ಟು ವಿಶಾಲವಾದ ಮರಗಳ ಉದ್ಯಾನವನ್ನು ಲಾಲ್‌ಬಾಗ್‌ ಮಾದರಿಯಲ್ಲಿ ರೂಪಿಸುವ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆ ಸಿದ್ಧಪಡಿಸುತ್ತಿದೆ. ಈ ಬಗ್ಗೆ ತೋಟಗಾರಿಕಾ ಸಚಿವ ಮುನಿರತ್ನ ಅವರು ಇತ್ತೀಚೆಗೆ ಹೇಳಿಕೆಯನ್ನೂ ನೀಡಿದ್ದಾರೆ. ಆದರೆ, ‘ನಮಗಿನ್ನೂ ಈ ಕುರಿತು ಅಧಿಕೃತವಾಗಿ ಯಾವುದೇ ಪ್ರಸ್ತಾವ ಸಲ್ಲಿಕೆ ಆಗಿಲ್ಲ’ ಎನ್ನುತ್ತಾರೆಅರಣ್ಯ ಇಲಾಖೆ ಅಧಿಕಾರಿಗಳು.

‘ಬ್ರಿಟಿಷರ ಕಾಲದಲ್ಲೇ ಮೀಸಲು ಅರಣ್ಯದ ಪರಿಕಲ್ಪನೆ ಜಾರಿಗೆ ಬಂದಿತ್ತು. ವನ್ಯಜೀವಿಗಳಿಗಾಗಿಯೇ ಜಾಗ ಮೀಸಲಿಡಬೇಕು ಎಂಬ ಕಾಳಜಿಯನ್ನು ಬ್ರಿಟಿಷರು ಹೊಂದಿದ್ದರು. ಆದರೆ, ಈಗಿನ ಜನಪ್ರತಿಗಳಿಗೆ ಪರಿಸರದ ಬಗ್ಗೆಯಾಗಲೀ ವನ್ಯಜೀವಿಗಳ ಬಗ್ಗೆಯಾಗಲೀ ಕಿಂಚಿತ್ತೂ ಕಾಳಜಿ ಇಲ್ಲ. ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಗೂ ತನ್ನೇ ಆದ ಪಾತ್ರವಿದೆ. ವನ್ಯಜೀವಿಗಳ ನೆಲೆಯನ್ನು ನಾಶಪಡಿಸಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ’ ಎಂದು ಗೌರವ ವನ್ಯಜೀವಿ ವಾರ್ಡನ್‌ ಎ.ಪ್ರಸನ್ನ ಕುಮಾರ್‌ ಎಚ್ಚರಿಸಿದರು.

‘ಡ್ರ್ಯಾಗನ್‌ ಚಿಟ್ಟೆಗಳು ಸೊಳ್ಳೆಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬೆಂಗಳೂರಿನಲ್ಲಿ ಈ ಚಿಟ್ಟೆಗಳ ಸಂತತಿ ನಶಿಸಿದೆ. ಈ ಚಿಟ್ಟೆಗಳಿಲ್ಲದ ಕಾರಣ ನಗರದಲ್ಲಿ ಸೊಳ್ಳೆ ಹಾವಳಿ ಹೆಚ್ಚಳವಾಗಿದೆ. ಅದೇ ರೀತಿ ಆಹಾರ ಸರಪಣಿಯ ಯಾವುದೇ ಕೊಂಡಿ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ವನ್ಯಜೀವಿ ನೆಲೆ ನಾಶಪಡಿಸಿದರೆ ಅದರ ಪರಿಣಾಮವನ್ನು ಬೇರೆ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿತ ಪಟ್ಟಿಯಲ್ಲಿರುವ ಪ್ರಾಣಿ ಪಕ್ಷಿಗಳಿಗೆ ವಿಶೇಷ ರಕ್ಷಣೆ ಇದೆ. ಈ ಪಟ್ಟಿಯಲ್ಲಿರುವ ರಾಷ್ಟ್ರಪಕ್ಷಿ ನವಿಲು, ನರಿ ಮುಂತಾದ ಅನೇಕ ಪ್ರಾಣಿ ಪಕ್ಷಿಗಳ ನೆಲವೀಡು ಜಾರಕಬಂಡೆ ಕಾವಲ್‌ ಅರಣ್ಯ. ಈ ಮೀಸಲು ಅರಣ್ಯವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

----

ಮೀಸಲು ಅರಣ್ಯ ಸೀಳಿಕೊಂಡು ಸಾಗಲಿದೆ ಪಿ.ಆರ್‌.ಆರ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್‌ ವರ್ತುಲ ರಸ್ತೆಯು (ಪಿಆರ್‌ಆರ್‌) ನಗರದ ಉತ್ತರ ಭಾಗದಲ್ಲಿರುವ ಜಾರಕಬಂಡೆ ಕಾವಲ್‌ ಮೀಸಲು ಅರಣ್ಯವನ್ನು ಸೀಳಿಕೊಂಡು ಸಾಗಲಿದೆ. ಸದ್ಯ ಬಿಡಿಎ ಸಿದ್ಧಪಡಿಸಿರುವ ಪ್ರಸ್ತಾವದ ಪ್ರಕಾರ ಪಿಆರ್‌ಆರ್‌ ಸಲುವಾಗಿ 1.5 ಹೆಕ್ಟೇರ್‌ ಮೀಸಲು ಅರಣ್ಯ ಬಳಕೆ ಆಗಲಿದೆ.

ಜಾರಕ ಬಂಡೆ ಕಾವಲ್‌ ಮೀಸಲು ಅರಣ್ಯದಲ್ಲಿ ಎರಡು ಬ್ಲಾಕ್‌ಗಳಿವೆ. ಎ– ಬ್ಲಾಕ್‌ ಜಾಲಹಳ್ಳಿ ಬಳಿ ಇದ್ದರೆ, ಬಿ– ಬ್ಲಾಕ್‌ ಆವಲಹಳ್ಳಿ ಅರಣ್ಯದ ಬಳಿ ಇದೆ. ಚಿಟ್ಟೆ ಉದ್ಯಾನವನ್ನು ಹೊಂದಿರುವ ಬಿ–ಬ್ಲಾಕ್‌ ಮೂಲಕ ಪಿಆರ್‌ಆರ್‌ ಹಾದುಹೋಗಲಿದೆ. ಪಿಆರ್‌ಆರ್‌ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಬಿ–ಬ್ಲಾಕ್‌ನಲ್ಲಿ ಸುಮಾರು 150 ಮೀಟರ್‌ ಜಾಗವನ್ನು ಇದಕ್ಕಾಗಿ ಕಾಯ್ದಿರಿಸಿದೆ. 16 ವರ್ಷಗಳಿಂದ ಇಲ್ಲಿ ಯಾವುದೇ ಗಿಡ ಮರಗಳನ್ನು ಬೆಳೆಸಿಲ್ಲ.

----

‘ಗೋಮಾಳಗಳಲ್ಲಿ ಉದ್ಯಾನ ನಿರ್ಮಿಸಲಿ’

ಉದ್ಯಾನ ನಿರ್ಮಾಣಕ್ಕೆ ಮೀಸಲು ಅರಣ್ಯವನ್ನು ಬಳಸುವ ಯಾವುದೇ ಅಗತ್ಯ ಇಲ್ಲ, ನಗರದಲ್ಲಿ ಈಗ ಶೇ 0.01 ರಷ್ಟು ನೈಸರ್ಗಿಕ ಕಾಡು ಕೂಡ ಉಳಿದಿಲ್ಲ. ಅಳಿದುಳಿದ ಕಾಡನ್ನು ಉಳಿಸಿಕೊಳ್ಳುವ ಹೊಣೆ ಎಲ್ಲರ ಮೇಲೂ ಇದೆ. ನಗರದಲ್ಲಿ 40 ಸಾವಿರ ಎಕರೆಗಳಷ್ಟು ಗೋಮಾಳವಿದೆ. ಸರ್ಕಾರ ಉದ್ಯಾನ ನಿರ್ಮಾಣ ಮಾಡುವುದಾದರೆ, ಗೋಮಾಳ ಒತ್ತುವರಿ ತೆರವುಗೊಳಿಸಿ, ಅಲ್ಲಿ ನಿರ್ಮಿಸಲಿ.

ಬೆಂಗಳೂರಿನಲ್ಲಿ ಉದ್ಯಾನಗಳಿಗೆ ಕೊರತೆ ಇಲ್ಲ. ಈಗಾಗಲೇ 900ಕ್ಕೂ ಅಧಿಕ ಉದ್ಯಾನಗಳಿವೆ. ಒಂದೇ ಕಡೆ ನೂರಾರು ಎಕರೆ ಉದ್ಯಾನ ನಿರ್ಮಿಸುವ ಬದಲು, ನಗರ ಜಿಲ್ಲಾಡಳಿತವು ಒತ್ತುವರಿ ತೆರವುಗೊಳಿಸಿರುವ 10 ಎಕರೆ, ಐದು ಎಕರೆಗಳಷ್ಟು ಜಾಗಗಳಲ್ಲಿ ಸಣ್ಣ ಉದ್ಯಾನಗಳನ್ನು ನಿರ್ಮಿಸಬಹುದು.

ಅ.ನ.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT