ಸೋಮವಾರ, ಮಾರ್ಚ್ 1, 2021
23 °C
210ನೇ ‘ಫ‌ಲಪುಷ್ಪ ಪ್ರದರ್ಶನ’ಕ್ಕೆ ಚಾಲನೆ

ಸಸ್ಯಕಾಶಿಯಲ್ಲಿ ‘ಒಡೆಯರ ದರ್ಬಾರ್’ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತುಂತುರು ಮಳೆಯ ನಡುವೆಯೇ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 210ನೇ ‘ಫ‌ಲಪುಷ್ಪ ಪ್ರದರ್ಶನ’ಕ್ಕೆ ಶುಕ್ರವಾರ ಚಾಲನೆ ದೊರೆಯಿತು. 

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘವು ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಜಯಚಾಮರಾಜ ಒಡೆಯರ್‌ ಅವರಿಗೆ ಅರ್ಪಿಸಿದ್ದು, ಬಗೆ ಬಗೆಯ ಹೂವಿನಲ್ಲಿ ಅರಮನೆಯ ದರ್ಬಾರ್ ಅರಳಿ ನಿಂತಿದೆ. 

ಮೈಸೂರಿನ ಪ್ರಮೋದಾದೇವಿ ಒಡೆಯರ್ ಅವರು ಜಯಚಾಮರಾಜ ಒಡೆಯರ್‌ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಮೋಡಕವಿದ ವಾತಾವರಣ ಮನೆ ಮಾಡಿದ್ದರಿಂದ ಪ್ರದರ್ಶನದ ಪ್ರಥಮ ದಿನ ವೀಕ್ಷಕರ ಸಂಖ್ಯೆ ಕಡಿಮೆ ಇತ್ತು.

ಮೈಸೂರು ಅರಮನೆಯ ಆವರಣದಲ್ಲಿ ಸ್ವತಃ ಜಯಚಾಮರಾಜ ಒಡೆಯರ್ ನಿರ್ಮಾಣ ಮಾಡಿಸಿದ್ದ ಮಂಟಪವನ್ನು ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಪುಷ್ಪಗಳಿಂದ ಯಥಾವತ್ತಾಗಿ ಮಾಡಲಾಗಿದೆ. 40X40 ಅಡಿ ಅಳತೆಯ ಪ್ರದೇಶದಲ್ಲಿ 5 ಅಡಿ ಎತ್ತರದ ಮೆಟ್ಟಿಲುಗಳು, 10 ಅಡಿ ಎತ್ತರದ ಕಂಬಗಳು, 3 ಅಡಿ ಎತ್ತರದ ಚಾವಣಿ, 5 ಅಡಿ ಎತ್ತರದ ಸ್ವರ್ಣಮಯ ಗೋಪುರ ಹಾಗೂ 2 ಅಡಿ ಎತ್ತರದ ಕಳಶವನ್ನು ಒಳಗೊಂಡಿದೆ. ಈ ಮಂಟಪದೊಳಗಿನ ಶ್ವೇತವರ್ಣದ ಒಡೆಯರ್‌ ಅವರ ಪ್ರತಿಮೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. 

2.5 ಲಕ್ಷ ಹೂವುಗಳಿಂದ ನಿರ್ಮಿಸಿರುವ ಮಂಟಪಕ್ಕೆ ಮೊದಲ ದಿನವೇ ಮನಸೋತ ವೀಕ್ಷಕರು, ಆಪ್ತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. 

ಮಂಟಪದ ಹಿಂಭಾಗದಲ್ಲಿರುವ ಸಿಂಹಾಸನ ಹಾಗೂ ಗುಲಾಬಿ ಹೂವುಗಳಿಂದ ನಿರ್ಮಿಸಲಾಗಿರುವ ಆನೆಗಳು ಪ್ರದರ್ಶನದ ಮತ್ತೊಂದು ವಿಶೇಷವಾಗಿದೆ. ಸುಮಾರು ನಾಲ್ಕು ಅಡಿ ಎತ್ತರದ ಸಿಂಹಾಸನವನ್ನು ನಿರ್ಮಿಸಲಾಗಿದೆ. ಮರ, ಫ್ಯಾಬ್ರಿಕ್, ಬಣ್ಣ ಮತ್ತು ಕುಷನ್ ಬಳಸಿ ತಯಾರಿಸಲಾಗಿದೆ. ಇದರ ಮುಂಭಾಗ ಪುಷ್ಪಾಲಂಕೃತ ಅಂಬಾರಿ ಹೊತ್ತ ಆನೆಗಳು ಹಾಗೂ ದರ್ಬಾರ್ ಸಂದರ್ಭದಲ್ಲಿ ಇರುತ್ತಿದ್ದ ಮಂದಿ ಮಾಗದರ ಪ್ರತಿಕೃತಿಗಳನ್ನೂ ನಾನಾ ವರ್ಣದ ಪುಷ್ಪ ಜೋಡಣೆಯ ನಡುವೆ ಪ್ರದರ್ಶಿಸಲಾಗಿದೆ. 5 ಅಡಿ ಅಗಲ ಹಾಗೂ 6 ಅಡಿ ಎತ್ತರದ ಎರಡು ಆನೆಗಳು ಪ್ರದರ್ಶನಕ್ಕೆ ಬಂದವರನ್ನು ಸ್ವಾಗತಿಸುತ್ತಿವೆ. 

ಸೇವಂತಿಗೆ, ಬಿಗೋನಿಯಾ, ಡೇಲಿಯಾ, ಪೆಟೂನಿಯಾ, ಆರ್ಕಿಡ್ಸ್, ಪೆಂಟಾಸ್, ಗುಲಾಬಿ, ಜೆರ್‌ಬೆರಾ, ಸೈಕ್ಲೋಮನ್, ಕಾಸ್‌ಮಾಸ್, ಸೆಂಚೂರಿಯಾ ಜೊತೆಗೆ ಅಪರೂಪದ ಪುಷ್ಪಗಳು ಹಾಗೂ ಎಲೆ ಜಾತಿಯ ಗಿಡಗಳು ಕಣ್ಮನ ಸೂರೆಗೊಳ್ಳುತ್ತಿವೆ.‌

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಲಾಲ್‌ಬಾಗ್ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದ ಆಸ್ತಿಯಾಗಿದೆ. ಜಯಚಾಮರಾಜೇಂದ್ರ ಒಡೆಯರ್ ಬಗ್ಗೆ ತಿಳಿದುಕೊಳ್ಳಲು ಇದು ಉತ್ತಮ ಅವಕಾಶ. ಸ್ವಾತಂತ್ರ್ಯ ಬರುವ ಮುನ್ನ ಮೈಸೂರು ರಾಜ್ಯ ಎಷ್ಟು ಮುಂದುವರೆದಿತ್ತು ಎನ್ನುವುದು ಅವರು ಕೈಗೊಂಡ ಯೋಜನೆಗಳೇ ಹೇಳುತ್ತವೆ. ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರದರ್ಶನ ವೀಕ್ಷಿಸಬೇಕು’ ಎಂದರು. 

‘ಒಡೆಯರ ಸಾಧನೆ ಅನಾವರಣ’

ಫಲಪುಷ್ಪ ಪ್ರದರ್ಶನದಲ್ಲಿ ಜಯಚಾಮರಾಜ ಒಡೆಯರ್ ಅವರ ಸಾಧನೆ ಹಾಗೂ ಜೀವನ ಅನಾವರಣಗೊಂಡಿದೆ. ಗಾಜಿನ ಮನೆಯ ಒಂದು ಬದಿ ಹೂವಿನಲ್ಲಿ ವೀಣೆ, ತಬಲಾ ಸೇರಿದಂತೆ ವಿವಿಧ ಸಂಗೀತ ವಾದ್ಯಗಳ ಮಾದರಿಗಳನ್ನು ತಯಾರಿಸಲಾಗಿದೆ.

ದರ್ಬಾರ್‌ ಮಾದರಿಯ ಮುಂಭಾಗದಲ್ಲಿ ಒಡೆಯರ್‌ ಕಾಲದ ನೀರಾವರಿ ಯೋಜನೆ, ವಿದ್ಯುತ್‌ ಕ್ಷೇತ್ರಕ್ಕೆ ಕೊಡುಗೆ, ಪಂಚವಾರ್ಷಿಕ ಯೋಜನೆ, ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಯ ಮಾದರಿ ನಿರ್ಮಿಸಲಾಗಿದೆ. ಗಾಜಿನ ಮನೆಯ ಎಲ್ಲೆಡೆ ಒಡೆಯರ್ ಅವರ ಅಪರೂಪದ ಚಿತ್ರಗಳು ಮಾಹಿತಿ ಸಹಿತ ಇವೆ. ಬಾಲ್ಯ, ವಿದ್ಯಾಭ್ಯಾಸ, ಮದುವೆ, ದಸರಾ ಮೆರವಣಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳು ಕಾಣಸಿಗುತ್ತವೆ.

‘ಆ.18ರ ವರೆಗೆ ಪ್ರದರ್ಶನ‘

ಫಲಪುಷ್ಪ ಪ್ರದರ್ಶನಕ್ಕೆ ಆರು ಲಕ್ಷ ಹೂವುಗಳನ್ನು ಬಳಸಲಾಗಿದ್ದು, ಆ.18ರವರೆಗೆ ಪ್ರದರ್ಶನ ನಡೆಯಲಿದೆ. ವಯಸ್ಕರಿಗೆ ₹70 ಹಾಗೂ ಮಕ್ಕಳಿಗೆ ₹20 ನಿಗದಿಪಡಿಸಲಾಗಿದ್ದು, ಉದ್ಯಾನದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಟಿಕೆಟ್‌ ಲಭ್ಯವಿರುತ್ತವೆ. ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6.30ರವರೆಗೆ ಪ್ರದರ್ಶನ ಇರಲಿದೆ.

**
ಫಲಪುಷ್ಪ ಪ್ರದರ್ಶನದ ಆಕರ್ಷಣೆಗಳು

ಜಯಚಾಮರಾಜ ಒಡೆಯರ್ ಪುತ್ಥಳಿ

ಮೈಸೂರಿನ ಜಯಚಾಮರಾಜ ವೃತ್ತದ ಮಾದರಿ

ಪುಷ್ಪ ಸಿಂಹಾಸನ ಮತ್ತು ಆನೆಗಳು

ಸಂಗೀತ ವಾದ್ಯಗಳ ಮಾದರಿಗಳ ಪುಷ್ಪ ಪ್ರದರ್ಶನ

ಮೈಸೂರು ಸಂಸ್ಥಾನದ ಅಭಿವೃದ್ಧಿ ಕಾರ್ಯಗಳ ಅನಾವರಣ

ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ

ಗಾಜಿನ ಮನೆಯಲ್ಲಿ ಹೂವಿನ ಪಿರಮಿಡ್‌ಗಳು

ಇಂಡೋ–ಅಮೆರಿಕನ್‌ ಹೂಗಳ ಪ್ರದರ್ಶನ

ವರ್ಟಿಕಲ್ ಗಾರ್ಡನ್‌ ಮಾದರಿಯ ಪ್ರದರ್ಶನ

ಮೈಸೂರು ಬ್ಯಾಂಡ್‌ ವಾದನ, ಬಿಎಸ್‌ಎಫ್ ಬ್ಯಾಂಡ್‌, ಮದ್ರಾಸ್‌ ಬ್ಯಾಂಡ್‌ಗಳ ಹಿಮ್ಮೇಳ

**

ಹೂವಿನಲ್ಲಿ ನಿರ್ಮಿಸಿರುವ ಮಂಟಪ ಮನಮೋಹಕವಾಗಿದೆ. ಅರಮನೆಯಲ್ಲಿನ ಹಳೆಯ ದಿನಗಳು ನೆನಪಿಗೆ ಬರುತ್ತಿವೆ. ಅಧಿಕಾರಿಗಳು ಹಾಗೂ ಕಲಾವಿದರಿಗೆ ಅಭಿನಂದನೆಗಳು
- ಪ್ರಮೋದಾ ದೇವಿ, ಮೈಸೂರು ಸಂಸ್ಥಾನ

**

ಫಲಪುಷ್ಪ ಪ್ರದರ್ಶನ ಪ್ರತಿಬಾರಿಯೂ ವಿಭಿನ್ನವಾಗಿರುತ್ತದೆ. ಹಾಗಾಗಿ ತಪ್ಪದೆಯೇ ಬರುತ್ತಿರುವೆ. ಹೊಸ ಲೋಕಕ್ಕೆ ಬಂದಂತೆ ಆಗುತ್ತಿದೆ
- ಸರೋಜಾ, ವಿಜಯನಗರ

**

ಪ್ರಥಮ ಬಾರಿಗೆ ಫಲಪುಷ್ಪ ಪ್ರದರ್ಶನಕ್ಕೆ ಬಂದಿರುವೆ. ಮಂಟಪ ಹಾಗೂ ಆನೆಗಳು ಹೂವಿನಲ್ಲಿ ಸುಂದರವಾಗಿ ಮೂಡಿ ಬಂದಿದೆ. ಉತ್ತಮವಾದ ಪರಿಕಲ್ಪನೆ
- ವೀರೇಶ್, ಬಸವೇಶ್ವರನಗರ

**

ಗೆಳತಿಯರೆಲ್ಲ ಜೊತೆಯಾಗಿ ಬಂದಿದ್ದೇವೆ. ಈ ಪ್ರದರ್ಶನ ಅದ್ಭುತವಾಗಿದೆ. ಪ್ರದರ್ಶನ ಮುಕ್ತಾಯವಾಗುವುದರೊಳಗೆ ಉಳಿದ ಗೆಳತಿಯರ ಜತೆಗೆ ಇನ್ನೊಮ್ಮೆ ಬರುತ್ತೇನೆ
–ನೂರ್, ಬಿಷಪ್ ಕಾಟನ್ ಕಾಲೇಜು ವಿದ್ಯಾರ್ಥಿನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು