ಮಂಗಳವಾರ, ಜೂನ್ 28, 2022
25 °C
ಮಳೆಗಾಲ ಪೂರ್ವ ಸಿದ್ಧತೆ ಪರಿಶೀಲನೆ: ಕೆರೆ ವಿಭಾಗದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

ಕಲ್ಕೆರೆ | 2 ಅಡಿಗಳಷ್ಟು ನೀರು ಬರಿದು ಮಾಡಿ: ಗೌರವ್‌ ಗುಪ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಅನಾಹುತ ಸಂಭವಿಸುವುದನ್ನು ತಪ್ಪಿಸಲು ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಪರಿಶೀಲಿಸಲು ಕೆ.ಆರ್‌.ಪುರ ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಹೆಬ್ಬಾಳ ಕಣಿವೆಯ ವಿವಿಧ ಪ್ರದೇಶಗಳಿಗೆ  ಬುಧವಾರ ಭೇಟಿ ನೀಡಿದರು.

ಕಳೆದ ವರ್ಷ ಗಂಟೆಗೆ 80 ರಿಂದ 90 ಮಿ.ಮೀ ಮಳೆಯಾದಾಗ ಹೆಣ್ಣೂರು ಮುಖ್ಯ ರಸ್ತೆ ಬಳಿ ಹೆಬ್ಬಾಳ ಕಣಿವೆ ತುಂಬಿ ಸಾಯಿ ಲೇಔಟ್, ಗೆದ್ದಲಹಳ್ಳಿ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಈ ಬಾರಿ ಇಂತಹ ಅನಾಹುತ ತಡೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯ ಆಯುಕ್ತರು ಬಿಬಿಎಂಪಿ ರಾಜಕಾಲುವೆ ಹಾಗೂ ಕೆರೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕಲ್ಕೆರೆ ಕೆರೆ ಪರಿಶೀಲನೆ: 183 ಎಕರೆಗಳಷ್ಟು ಪ್ರದೇಶಗಳಲ್ಲಿ ವ್ಯಾಪಿಸಿರುವ ಕಲ್ಕೆರೆ ಕೆರೆ ಹೆಬ್ಬಾಳ ಕಣಿವೆ ಪ್ರದೇಶದಲ್ಲಿದೆ. ಹೊರಮಾವು ಬಳಿ ಜಲಮಂಡಳಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಶುದ್ಧೀಕರಣಗೊಳ್ಳುವ ತ್ಯಾಜ್ಯ ನೀರನ್ನು ಈ ಜಲಕಾಯಕ್ಕೆ ಹರಿಸಲಾಗುತ್ತದೆ. ಸದಾ ತುಂಬಿರುವ ಈ ಕೆರೆ ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಗೆ ಕಾರಣವಾಗುತ್ತಿದೆ.

‘ಮಳೆಗಾಲಕ್ಕೆ ಪೂರ್ವಭಾವಿಯಾಗಿ ಕಲ್ಕೆರೆಯಲ್ಲಿ ಎರಡು ಅಡಿ ನೀರನ್ನು ಬರಿದು ಮಾಡಿದರೆ, ಮಳೆ ನೀರು ಕೆರೆಯಲ್ಲಿ ಸಂಗ್ರಹವಾಗಲು ಅವಕಾಶವಾಗುತ್ತದೆ. ಈ ಕುರಿತು ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯ ಆಯುಕ್ತರು ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಟಿ.ಮೋಹನ್ ಕೃಷ್ಣ ಅವರಿಗೆ ಸೂಚನೆ ನೀಡಿದರು.

ಕಲ್ಕೆರೆಯಲ್ಲಿ ಮಳೆ ನೀರು ಪೂರ್ಣವಾಗಿ ಸಂಗ್ರಹವಾಗುವಂತೆ ಮಾಡುವ ಸಲುವಾಗಿ ನೀರು ತರುವ ತೂಬುಗಳು ಮತ್ತು ತಿರುವು ಗಾಲುವೆಗಳ ಕಾಮಗಾರಿ ನಡೆಯುತ್ತಿದೆ. 1,800 ಮೀಟರ್ ಉದ್ದದ ತಿರುವುಗಾಲುವೆ ನಿರ್ಮಿಸಲಾಗುತ್ತಿದ್ದು, 400 ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ.

‘ಬಾಕಿ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಮಗಾರಿಯಿಂದಾಗಿ, ಮಳೆಗಾಲದ ವೇಳೆ ನೀರು ಹರಿಯಲು ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ರಾಂಪುರ ಕೆರೆ ಪರಿಶೀಲನೆ: 187 ಎಕರೆ ವಿಸ್ತೀರ್ಣದ ರಾಂಪುರ ಕೆರೆಯನ್ನು ‘ಮುಖ್ಯಮಂತ್ರಿಯವರ ಶುಭ್ರ ಬೆಂಗಳೂರು ಯೋಜನೆ’ಯಡಿ ₹ 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಬಿಬಿಎಂಪಿ ಕ್ರಮಕೈಗೊಂಡಿದೆ. ಈ ಕಾಮಗಾರಿಯನ್ನು ಭೈರತಿ ಬಸವರಾಜು ಹಾಗೂ ಗೌರವ್ ಗುಪ್ತ ಪರಿಶೀಲನೆ ನಡೆಸಿದರು. ‘ಮಳೆಗಾಲದ ಒಳಗೆ ಕೆರೆಯ ಅಂಗಳದ ಹೂಳನ್ನು ಸಂಪೂರ್ಣವಾಗಿ ತೆರವು ಮಾಡಬೇಕು ಹಾಗೂ ತಿರುವುಗಾಲುವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ಭೈರತಿ ಬಸವರಾಜು, ‘ಸರ್ವಜ್ಞನಗರ, ಸಿ.ವಿ.ರಾಮನ್ ನಗರ ಹಾಗೂ ಹೆಬ್ಬಾಳದ ಕಡೆಯಿಂದ ಮಳೆಗಾಲದಲ್ಲಿ ಹೆಬ್ಬಾಳ ಕಣಿವೆಗೆ ಸಾಕಷ್ಟು ನೀರು ಹರಿದು ಬರುತ್ತದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಆಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕು’ ಎಂದು ಮುಖ್ಯ ಆಯುಕ್ತರಿಗೆ ಸೂಚಿಸಿದರು.

‘ಹೆಬ್ಬಾಳ ಕಣಿವೆ ಮೂಲಕ ಕಲ್ಕೆರೆ, ರಾಂಪುರ ಕೆರೆಗಳಿಗೆ ಮಳೆನೀರು ಹರಿದು ಹೋಗಲಿದೆ. ಗಂಟೆಗೆ 60 ಮಿ.ಮೀ ಮಳೆಯಾದಾಗ ಈ ಕಣಿವೆಯ ತಗ್ಗು ಪ್ರದೇಶಗಳಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. 80 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ಸಮಸ್ಯೆ ಆಗಲಿದೆ. ಇಲ್ಲಿನ ರೈಲ್ವೆ ಸೇತುವೆ ಕಿರಿದಾಗಿರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದರ ವಿಸ್ತರಣೆಗೆ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸಲಾಗಿದ್ದು, ಅವರು ಅನುಮತಿ ನೀಡಿದ್ದಾರೆ. ಸೇತುವೆಯ ಅಗಲ ಹೆಚ್ಚಿಸಿದರೆ ಗಂಟೆಗೆ 130 ಮಿ.ಮೀ  ಮಳೆಯಾದರೂ ಸಮಸ್ಯೆಯಾಗದು’ ಎಂದು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್ ಮಾಹಿತಿ ನೀಡಿದರು.

ವಲಯ ಆಯುಕ್ತ ಡಿ.ರಂದೀಪ್, ಜಂಟಿ ಆಯುಕ್ತ ವೆಂಕಟಾಚಲಪತಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು