ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರಧಾಮ ಮಾದರಿಯಲ್ಲಿ ಉದ್ಯಾನ ನಿರ್ಮಿಸಲು ಮನವಿ

ಸರ್ಕಾರಕ್ಕೆ ಮನವಿ ಸಲ್ಲಿಸಿದ ಕನ್ನಡ ಗೆಳೆಯರ ಬಳಗ
Published 9 ಆಗಸ್ಟ್ 2023, 14:08 IST
Last Updated 9 ಆಗಸ್ಟ್ 2023, 14:08 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ನಾಮಕರಣದ ಸುವರ್ಣ ವರ್ಷಾಚರಣೆ ಪ್ರಯುಕ್ತ ನವದೆಹಲಿಯ ‘ಅಕ್ಷರಧಾಮ’ ಮಾದರಿಯಲ್ಲಿ ಇಲ್ಲಿ ‘ಸಮಗ್ರ ಕರ್ನಾಟಕ ದರ್ಶನ ಉದ್ಯಾನ’ ನಿರ್ಮಿಸಬೇಕು’ ಎಂದು ಕನ್ನಡ ಗೆಳೆಯರ ಬಳಗವು ಸರ್ಕಾರಕ್ಕೆ ಮನವಿ ಮಾಡಿದೆ. 

ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ವಿಸ್ತೃತ ವರದಿ ಸಹಿತ ಮನವಿ ಪತ್ರ ಸಲ್ಲಿಸಿದ್ದಾರೆ. 

‘ಪ್ರಥಮ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಈಗ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷದ ಪ್ರಯುಕ್ತ ‘ಸಮಗ್ರ ಕರ್ನಾಟಕ ದರ್ಶನ ಉದ್ಯಾನ’ ನಿರ್ಮಿಸಿ, ಕರ್ನಾಟಕದ ಭವ್ಯ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯದ ಸಮಗ್ರ ಚಿತ್ರಣವನ್ನು ವಿಶ್ವಕ್ಕೆ ಪರಿಚಯಿಸಬೇಕು. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಕನ್ನಡ ರಾಜಧಾನಿಯನ್ನಾಗಿಸುವ ಅಗತ್ಯವಿದ್ದು, ಈ ಸಂಬಂಧ ‘ಕನ್ನಡ ಬೆಂಗಳೂರು; ಸುಂದರ ಬೆಂಗಳೂರು’ ಎಂಬ ಕಾರ್ಯಕ್ರಮ ರೂಪಿಸಬೇಕು. ಎಲ್ಲಾ  ಕನ್ನಡಪರ ಸಂಘ-ಸಂಸ್ಥೆಗಳ ಸಹಕಾರದಿಂದ ಇಡೀ ವರ್ಷ ಕಾರ್ಯಕ್ರಮ ನಡೆಸಿ, ಬೆಂಗಳೂರಿನಲ್ಲಿ ಕನ್ನಡ ಧ್ವನಿ ಗಟ್ಟಿಯಾಗಿ ಕೇಳುವಂತೆ ಮಾಡಬೇಕು’ ಎಂದು ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ. 

‘ರಾಜ್ಯದ ಎಲ್ಲಾ ಕಾಲೇಜು ಮತು ಶಾಲೆಗಳಲ್ಲಿ ಕನ್ನಡ-ಕರ್ನಾಟಕದ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ನಡೆಸಬೇಕು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಜನರನ್ನು ಒಟ್ಟುಗೂಡಿಸಿ, ‘ಕನ್ನಡ ಸಂಪರ್ಕ ಸರಪಳಿ’ ಕಾರ್ಯಕ್ರಮವನ್ನು ರೂಪಿಸಿ, ಕನ್ನಡನಾಡು-ನುಡಿಯ ಬಗ್ಗೆ ಅರಿವು ಮೂಡಿಸಬೇಕು. 1973ರಿಂದ 2023ರವರೆಗೆ ಕರ್ನಾಟಕದ ಬೆಳವಣಿಗೆ ಪರಿಚಯಿಸುವ ಕಿರುಪುಸ್ತಕವನ್ನು ಪ್ರಕಟಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT