ಶನಿವಾರ, ಜುಲೈ 24, 2021
26 °C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಕ್ರೋಶ

ರಾಜ್ಯದ ಕಾನೂನು ವಿರೋಧಿಸುವವರು ಇಲ್ಲಿರಲು ಅರ್ಹರಲ್ಲ: ಟಿ.ಎಸ್. ನಾಗಾಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತರುವ ಅಧಿನಿಯಮವನ್ನು ವಿರೋಧಿಸುವವರು ರಾಜ್ಯದಲ್ಲಿ ಇರಲು ಅರ್ಹರಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿರುವ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕನ್ನಡ ಭಾಷಾ ಕಲಿಕಾ ಕಾಯ್ದೆ ವಿರುದ್ಧ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಇದನ್ನು ಖಂಡಿಸಿರುವ ನಾಗಾಭರಣ, ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಬುಧವಾರ ಸಲ್ಲಿಸಿದರು.

‘ಈ ಕಾಯ್ದೆಯಲ್ಲಿ ಮಕ್ಕಳ ಮೇಲೆ ಭಾಷಾ ಕಲಿಕೆಯನ್ನು ಹೇರುತ್ತಿಲ್ಲ. ಬದಲಿಗೆ ಸಂವಿಧಾನಬದ್ಧವಾಗಿ ಹಂತ ಹಂತವಾಗಿ ಮಕ್ಕಳನ್ನು ಭಾಷೆಯ ಕಲಿಕೆಯಲ್ಲಿ ತೊಡಗಿಸಲಾಗುತ್ತಿದೆ. ಕನ್ನಡ ಭಾಷಾ ಕಲಿಕಾ ಕಾಯ್ದೆ-2017ರ ಅನ್ವಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ, ಕೇಂದ್ರ ಪಠ್ಯ ಕ್ರಮದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಇಲ್ಲಿ ನೆಲೆಸಿರುವ ಹೊರ ರಾಜ್ಯದ ಕೆಲ ಪೋಷಕರು ಆಕ್ಷೇಪ ವ್ಯಕ್ತಪಡಿಸಿ, ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಆರಂಭಿಸಿರುವುದು ದುರಾದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕನ್ನ ಭಾಷೆ ಕಲಿಕೆಯ ಮಹತ್ವವನ್ನು ರಾಜ್ಯದಲ್ಲಿ ನೆಲೆಸಿರುವ ಜನರು ಅರ್ಥೈಸಿಕೊಳ್ಳಬೇಕು. ಇದನ್ನು ತಪ್ಪಾಗಿ ಗ್ರಹಿಸಿ, ಭಾಷಾ ಸೌಹಾರ್ದಕ್ಕೆ ತೊಡಕುಂಟಾಗದಂತೆ ಪೋಷಕರು ನಡೆದುಕೊಳ್ಳಬೇಕು. ಸರ್ಕಾರವು ಕನ್ನಡ ಕಲಿಕಾ ಅಧಿನಿಯಮವನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು