ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ನಿಂದ 128 ಭಾಷೆಗಳ ಆಪೋಷನ: ಡಾ.ಚಂದ್ರಶೇಖರ ಕಂಬಾರ

Last Updated 7 ನವೆಂಬರ್ 2022, 20:26 IST
ಅಕ್ಷರ ಗಾತ್ರ

ಬೆಂಗಳೂರು: ದಲಿತರೂ ಸೇರಿದಂತೆ ಎಲ್ಲ ವರ್ಗದ ಜನರಿಗೆ ಅಕ್ಷರ ಕಲಿಯುವ ಅವಕಾಶ ಕಲ್ಪಿಸಿದ್ದು ಮೆಕಾಲೆ ಶಿಕ್ಷಣ ನೀತಿಯ ಹೆಗ್ಗಳಿಕೆಯಾದರೂ, ದೇಶದ 128 ಭಾಷೆಗಳ ಅಸ್ಮಿತೆಯನ್ನೇ ಆಪೋಷನ ತೆಗೆದುಕೊಂಡಿದ್ದು ಕಳವಳಕಾರಿ ವಿಚಾರ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಬಿಎಂಎಸ್‌ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸೋಮವಾರ ಹಮ್ಮಿಕೊಂಡಿದ್ದ ನುಡಿ ಸಂಭ್ರಮ–ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಎರಡು ಕ್ರಾಂತಿಗಳಾಗಿವೆ. ಒಂದು ವಚನ ಕ್ರಾಂತಿ, ಮತ್ತೊಂದು ಮೆಕಾಲೆ ಶಿಕ್ಷಣ ಕ್ರಾಂತಿ. ಮೊದಲು ದೇವರನ್ನು ಸಂಸ್ಕೃತದಲ್ಲೇ ಮಾತ ನಾಡಿಸುವ ಪರಿಪಾಟವಿತ್ತು. ಸ್ಥಳೀಯ ಭಾಷೆಯಲ್ಲೇ ದೇವರ ಜತೆ ಸಂಭಾಷಣೆ ನಡೆಸುವ ಸಾಮರ್ಥ್ಯವನ್ನು ವಚನ ಚಳವಳಿ ಸಾಮಾನ್ಯರಿಗೂ ನೀಡಿತು. ಮೆಕಾಲೆ ಶಿಕ್ಷಣ ನೀತಿ ಕೋಟ್ಯಂತರ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡಿತು. ಜನ್ಮವೃತ್ತಾಂತದ ಸುತ್ತ ಇದ್ದ ಜ್ಞಾನವನ್ನು ಇತಿಹಾಸದತ್ತ ತಿರುಗಿಸಿತು. ಎಲ್ಲ ಭಾಷೆಯ ಜನರೂ ಇಂಗ್ಲಿಷ್‌ ದಾಸರಾಗಿದ್ದಾರೆ. ಪ್ರಾದೇಶಿಕ ಭಾಷೆಗಳ ವಿನಾಶಕ್ಕೂ ಕಾರಣರಾಗುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಭಾರತದಂತಹ ವೈವಿಧ್ಯದ ರಾಷ್ಟ್ರ ವನ್ನು ಜಗತ್ತಿನ ಎಲ್ಲೂ ಕಾಣಲು ಸಾಧ್ಯವಿಲ್ಲ. 33 ಕೋಟಿ ದೇವರು, 64 ಸಾವಿರ ಜಾತಿಗಳು, 128 ಭಾಷೆಗಳು, 8 ಕ್ಯಾಲೆಂಡರ್‌ ಒಳಗೊಂಡ ಈ ನೆಲದಲ್ಲಿ ಎಲ್ಲರೂ ಆನಂದಮಯವಾಗಿ ಬದುಕುತ್ತಿರುವುದೇ ದೊಡ್ಡ ಪವಾಡ. ಇಂತಹ ಪವಾಡವನ್ನು ಪ್ರತ್ಯಕ್ಷವಾಗಿ ಕಾಣಲು ವಿದೇಶಗಳ ಹಲವರು ದೇಶಕ್ಕೆ ಬಂದಿದ್ದಾರೆ. ಉಳಿದ ಎಲ್ಲ ವೈವಿಧ್ಯ ಇಂದು ಜೀವಂತವಾಗಿದ್ದರೂ, ಭಾಷಾ ವೈವಿಧ್ಯ ವಿನಾಶದತ್ತ ಸಾಗಿದೆ ಎಂದರು.

ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿ, ‘ಬಿಎಂಎಸ್‌ ಕಾಲೇಜಿನಲ್ಲಿ ಇಂದಿಗೂ ಕನ್ನಡದ ವಾತಾವರಣ ಜೀವಂತವಾಗಿರುವುದು ಸಂತಸದ ವಿಷಯ. ಕವಿತೆಗಳಿಗೆ ಎಲ್ಲ ಕಾಲಮಾನವನ್ನೂ ಒಗ್ಗೂಡಿಸುವ ಶಕ್ತಿ ಇದೆ. ಕನ್ನಡದ ಭಾವಗೀತೆ, ಸ್ವರಸಂಪತ್ತು ಹೃದಯ ತಣಿಸುತ್ತದೆ. ಮನಸ್ಸಿಗೆ ಆಹ್ಲಾದ ಮೂಡಿಸುತ್ತದೆ’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌, ಬಿಎಂಎಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅವಿರಾಮ್‌ ಶರ್ಮ, ಪ್ರಾಂಶುಪಾಲ ಪಂಕಜ್‌ ಚೌದರಿ, ಬಿ.ಎಸ್‌.ರಾಗಿಣಿ ನಾರಾಯಣ್‌, ಪ್ರಾಧ್ಯಾಪಕಿ ಸೌಮ್ಯಾ ಉಪಸ್ಥಿತರಿದ್ದರು.

ತಾವೇ ಬರೆದ ಹಾಡಿಗೆ ತಲೆದೂಗಿದ ಕವಿ
ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಬರೆದ ‘ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು’ ಹಾಡನ್ನು ವಿದ್ಯಾರ್ಥಿನಿ ಸುನಿಧಿ ಹಾಡಿದರು. ಅವರ ಹಾಡು ಮುಗಿಯುವವರೆಗೂ, ಧ್ಯಾನಸ್ಥ ಸ್ಥಿತಿಯಲ್ಲಿ ಆಲಿಸಿದ ಕವಿ ಎಚ್‌ಎಸ್‌ವಿ ಭಾವುಕರಾದರು.

‘ಬರೆಯುವಾಗ ಸಾಮಾನ್ಯ ಕವಿತೆಯಾಗಿರುತ್ತದೆ. ಭಾವ, ಸಂಗೀತ ಬೆರೆತು ಹಾಡಾಗಿ ಹೊಮ್ಮಿದಾಗ ಆಗುವ ಆನಂದವೇ ಬೇರೆ. ಇದು ಒಂದು ರೀತಿ ಕವಿಯ ಸ್ವಾರ್ಥವೂ ಹೌದು’ ಎಂದು ಪ್ರತಿಕ್ರಿಯಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೊಳ್ಳುಕುಣಿತ, ಡಿ.ಎಸ್‌.ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ಕಂಬಾರರು ಬರೆದ ಕವಿತೆಯ ಹಾಡುಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT