ಬೆಂಗಳೂರು: ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘವು (ಕೆಎಆರ್‌ಡಿ) ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿರುವುದರಿಂದ ರಾಜ್ಯದಾದ್ಯಂತ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
ಸುಮಾರು ನಾಲ್ಕು ಸಾವಿರ ಸ್ಥಾನಿಕ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಜಿಲ್ಲಾ ಕೇಂದ್ರಗಳಲ್ಲಿ ರೋಗಿಗಳು ಚಿಕಿತ್ಸೆ ದೊರೆಯದೆ ತೊಂದರೆ ಅನುಭವಿಸಿದರು. ತುರ್ತು ಚಿಕಿತ್ಸೆ ಲಭ್ಯವಿತ್ತು. ಹೊರ ರೋಗಿಗಳ ವಿಭಾಗ ಹಾಗೂ ತುರ್ತು ಅಲ್ಲದ ಸೇವೆಗಳು ಇರಲಿಲ್ಲ.
ಪರಿಣಾಮ ಆಸ್ಪತ್ರೆಯಲ್ಲಿನ ಹಲವು ವಿಭಾಗಗಳ ಎದುರು ರೋಗಿಗಳು ಸರದಿ ಸಾಲಿನಲ್ಲಿ ನಿಂತಿದ್ದರು. ವೈದ್ಯರ ಪ್ರತಿಭಟನೆಯ ಮಾಹಿತಿಯಿಲ್ಲದೆ ಬೇರೆ ಊರುಗಳಿಂದ ಬಂದ ರೋಗಿಗಳು, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಮಸ್ಯೆ ಎದುರಿಸಿದರು. ಕೆಲ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 700ಕ್ಕೂ ಹೆಚ್ಚು ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಗರದ ವಾಣಿ ವಿಲಾಸ, ವಿಕ್ಟೋರಿಯಾ, ಮಿಂಟೊ, ಬೌರಿಂಗ್ ಮತ್ತು ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಚಿಕಿತ್ಸೆ ಪಡೆದುಕೊಳ್ಳಲು ಕಷ್ಟವಾಯಿತು..
ಬೇಡಿಕೆ: ವಿದ್ಯಾರ್ಥಿ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ವರ್ಷದಿಂದ ಮನವಿ ಸಲ್ಲಿಸಿದ್ದೇವೆ. ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಡಾ. ಸಿರೀಶ್ ಶಿವರಾಮಯ್ಯ ಹೇಳಿದರು.
‘ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ಅಧಿಕವಿದೆ. ಹೆಚ್ಚು ಪ್ರವೇಶ ಶುಲ್ಕ ಪಡೆದು, ಕಡಿಮೆ ವಿದ್ಯಾರ್ಥಿ ವೇತನ ನೀಡುವ ಮೂಲಕ ವಂಚಿಸಲಾಗುತ್ತಿದೆ’ ಎಂದು ಆರೋಪಿಸಿದರು.