ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ದತ್ತಾಂಶ ಮಾರಾಟ ಪ್ರಕರಣ: ದೆಹಲಿ ‘ಡೊಮೈನ್’, ಖಾತೆದಾರನ ಸುಳಿವು

Published 28 ಏಪ್ರಿಲ್ 2023, 5:05 IST
Last Updated 28 ಏಪ್ರಿಲ್ 2023, 5:05 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ದತ್ತಾಂಶ ಮಾರಾಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, ದತ್ತಾಂಶ ಮಾರಾಟಕ್ಕೆ ಇರಿಸಿದ್ದ ಜಾಲತಾಣದ ಡೊಮೈನ್‌ (ಹೆಸರು) ದೆಹಲಿ ವಿಳಾಸದಲ್ಲಿ ನೋಂದಣಿಯಾಗಿರುವ ಸಂಗತಿ ಪತ್ತೆ ಮಾಡಿದ್ದಾರೆ.

ದತ್ತಾಂಶ ಲಭ್ಯವಿದ್ದ ಜಾಲತಾಣ ಹಾಗೂ ಸರ್ವರ್‌ ಬಗ್ಗೆ ತಾಂತ್ರಿಕ ಪುರಾವೆ ಕಲೆಹಾಕುತ್ತಿರುವ ಪೊಲೀಸರು, ಪ್ರಕರಣದ ಬಗ್ಗೆ ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವ ತಯಾರಿ ನಡೆಸುತ್ತಿದ್ದಾರೆ.

‘ಬೆಂಗಳೂರು ದಕ್ಷಿಣ ಸೇರಿದಂತೆ ನಗರದ ಹಲವು ವಿಧಾನಸಭಾ ಕ್ಷೇತ್ರಗಳ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿರುವ ಕಂಪನಿ, ಎಲ್ಲ ಮಾಹಿತಿಯನ್ನು ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಿದೆ. ಅದೇ ಮಾಹಿತಿಯನ್ನು ₹ 25,000 ಬೆಲೆಗೆ ಜಾಲತಾಣದ ಮೂಲಕ ಮಾರಾಟಕ್ಕೆ ಇರಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2023ರ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ ದತ್ತಾಂಶವನ್ನು ಕೇವಲ ₹ 25,000ಕ್ಕೆ ಖರೀದಿಸಿ, ಗೆಲುವು ನಿಮ್ಮದಾಗಿಸಿಕೊಳ್ಳಿ’ ಎಂಬುದಾಗಿ ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸುತ್ತಿದೆ. ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಪಡೆಯುವ ವ್ಯಕ್ತಿಗಳು, ಜಾಲತಾಣದಲ್ಲಿ ಲಾಗಿನ್ ಆಗಿ ಹಣ ಪಾವತಿಸಿ ದತ್ತಾಂಶ ಡೌನ್‌ಲೋಡ್‌ ಮಾಡಿಕೊಳ್ಳುವ ವ್ಯವಸ್ಥೆ ಇದಾಗಿದೆ’ ಎಂದು ಮೂಲಗಳು ತಿಳಿಸಿವೆ.

‘6.50 ಲಕ್ಷ ಮತದಾರರ ಮಾಹಿತಿ ಜಾಲತಾಣದಲ್ಲಿ ಲಭ್ಯವಿದೆ. 3,45,089 ಪುರುಷರು, 2,93,000 ಮಹಿಳೆಯರು ಹಾಗೂ 5,630 ಇತರರ ವೈಯಕ್ತಿಕ ಮಾಹಿತಿ ಪಟ್ಟಿ ಇಲ್ಲಿದೆ. ಸಾಮೂಹಿಕ ಎಸ್‌ಎಂಎಸ್, ಆಡಿಯೊ ಕರೆ, ವಾಟ್ಸ್‌ಆ್ಯಪ್ ಸಂದೇಶ, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಹಾಗೂ ಲಿಂಕ್ಡ್‌ಇನ್‌ ಸಾಮಾಜಿಕ ಮಾಧ್ಯಮ ಖಾತೆಗಳ ಮಾಹಿತಿ ಇದೆ. ಕನ್ನಡ, ತಮಿಳು ಹಾಗೂ ಇಂಗ್ಲಿಷ್‌ನಲ್ಲೂ ದತ್ತಾಂಶವಿರುವುದು ಪರಿಶೀಲನೆಯಿಂದ ಗಮನಕ್ಕೆ ಬಂದಿದೆ’ ಎಂದಿವೆ.

ದೆಹಲಿ ವಿಳಾಸ ಬಳಕೆ: ‌‘ಮತದಾರರ ದತ್ತಾಂಶ ಮಾರಾಟ ಪ್ರಕರಣ ಸೂಕ್ಷ್ಮವಾದದ್ದು. ಹೀಗಾಗಿ, ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸಲಾಗಿದೆ. ಜಾಲತಾಣದ ಹೆಸರನ್ನು ಸದ್ಯಕ್ಕೆ ಬಹಿರಂಗಪಡಿಸಲಾಗದು’ ಎಂದು ಮೂಲಗಳು ತಿಳಿಸಿವೆ.

‘ದತ್ತಾಂಶ ಲಭ್ಯವಿರುವ‘ಡೊಮೈನ್’ (ಜಾಲತಾಣದ ಹೆಸರು) ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. 2023ರ ಏಪ್ರಿಲ್‌ನಲ್ಲಿ ದೆಹಲಿ ವಿಳಾಸದಲ್ಲಿ ಡೊಮೈನ್ ಖರೀದಿಸಿರುವುದಕ್ಕೆ ಪುರಾವೆಗಳು ಸಿಕ್ಕಿವೆ.’ ‘ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಪೇಸ್) ವ್ಯವಸ್ಥೆ ಮೂಲಕ ಹಣ ವರ್ಗಾವಣೆ ಮಾಡಿಸಿ
ಕೊಂಡು ದತ್ತಾಂಶ ಮಾರಲಾಗಿದೆ. ಇದಕ್ಕಾಗಿ ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ ಖಾತೆಗಳನ್ನು ಬಳಸಲಾಗಿದೆ. ಮೂರು ಬ್ಯಾಂಕ್‌ನ ಖಾತೆಗಳು ಒಂದೇ ವ್ಯಕ್ತಿ ಹೆಸರಿನಲ್ಲಿರುವ ಸುಳಿವು ಲಭ್ಯವಾಗಿದೆ. ಆ ವ್ಯಕ್ತಿ ಎಲ್ಲಿದ್ದಾನೆ ? ಆತನ ಹಿನ್ನೆಲೆ ಏನು ? ಎಂಬುದನ್ನು ತಿಳಿಯಲಾಗುತ್ತಿದೆ. ಆತನ ಪತ್ತೆಗಾಗಿ ವಿಶೇಷ ತಂಡವೊಂದು ಈಗಾಗಲೇ ಹುಡುಕಾಟ ಆರಂಭಿಸಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT