ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರ ಕ್ಷೇತ್ರ ಸ್ಥಿತಿ–ಗತಿ| ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ಗೆ ಭಾರಿ ಪೈಪೋಟಿ

ಕರ್ನಾಟಕ ವಿಧಾನಸಭಾ ಚುನಾವಣೆ– 2023
Last Updated 24 ಜನವರಿ 2023, 22:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಾಜಿನಗರವೂ ಒಂದು. ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿದೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ ತೀವ್ರವಾಗಿದೆ.

1978 ರಿಂದ ಈಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಎರಡೇ ಸಲ (1989 ಮತ್ತು 2004) ಈ ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಜನತಾ ಪಕ್ಷ ಒಮ್ಮೆ ಗೆದ್ದಿತ್ತು. ಸಿಪಿಐನ ಎಂ.ಎಸ್‌.ಕೃಷ್ಣನ್ ಅವರು ಎರಡು ಬಾರಿ ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಸಣ್ಣ ಮತ್ತು ಮಧ್ಯಮ ಗಾತ್ರದ ಸಾಕಷ್ಟು ಕೈಗಾರಿಕೆಗಳಿವೆ. ಹೀಗಾಗಿ ಇಲ್ಲಿ ಕಾರ್ಮಿಕರ ಸಂಖ್ಯೆಯೂ ಹೆಚ್ಚು.

ಮೂಲಸೌಕರ್ಯಗಳ ಸಮಸ್ಯೆಗಳು ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳಿಗಿಂತಲೂ ಇಲ್ಲಿ ಕೊಂಚ ಹೆಚ್ಚಾಗಿಯೇ ಇವೆ. ಅದರಲ್ಲೂ ಪಶ್ಚಿಮಕಾರ್ಡ್‌ ರಸ್ತೆಯಲ್ಲಿ ಮೇಲ್ಸೇತುವೆಗಳು ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಕಡೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಮತ್ತೊಂದೆಡೆ ಲುಲು ಮಾಲ್‌ ಸ್ಥಾಪನೆಗೊಂಡ ಬಳಿಕ ವಾಹನಗಳ ಸಂಚಾರಕ್ಕೆ ಇನ್ನಿಲ್ಲದ ಸಮಸ್ಯೆ ಆಗಿದೆ. ರಸ್ತೆಗಳ ಗುಂಡಿಗಳೂ ಸೇರಿ ಹಲವು ಸಮಸ್ಯೆಗಳು ಕ್ಷೇತ್ರವನ್ನು ಕಾಡುತ್ತಿವೆ.

ಈ ಕ್ಷೇತ್ರವನ್ನು ಐದು ಬಾರಿ ಗೆದ್ದಿರುವ ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ಸಚಿವ ಸ್ಥಾನದಿಂದ ನಿರ್ಗಮಿಸಿದ ಬಳಿಕ ಅವರು ಸುಮ್ಮನೆ ಕುಳಿತಿಲ್ಲ. ಕಳೆದ ಕೆಲವು ತಿಂಗಳಿಂದ ಕ್ಷೇತ್ರದ ಮತದಾರರನ್ನು ತಮ್ಮದೇ ವಿಶಿಷ್ಟ ಶೈಲಿಯ ಮೂಲಕ ಸಂಪರ್ಕಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಈ ಬಾರಿ ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಬಿಜೆಪಿಯಲ್ಲಿ ಹಿಂದೆ ನಗರ ಸಂಘಟನಾ ಕಾರ್ಯದರ್ಶಿ ಆಗಿದ್ದ ರಘುನಾಥ್‌ ಎಸ್‌, ಮಾಜಿ ಕಾರ್ಪೊರೇಟರ್‌ಗಳಾದ ಮಂಜುನಾಥ್‌ ಮತ್ತು ರಂಗಣ್ಣ ಬಿಜೆಪಿ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿರುವವರಲ್ಲಿ ಮುಂಚೂಣಿಯಲ್ಲಿದ್ದಾರೆ. ‘ಸುರೇಶ್‌ ಅವರು ಒಟ್ಟು ಏಳು ಬಾರಿ ಬಿ ಫಾರ್ಮ್‌ ಪಡೆದು ಐದು ಬಾರಿ ಶಾಸಕರಾಗಿದ್ದಾರೆ. ಈ ಬಾರಿ ಹೊಸಬರಿಗೆ ಟಿಕೆಟ್‌ ಕೊಡಬೇಕು. 22 ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡಿರುವ ನನಗೂ ಒಂದು ಬಾರಿ ಅವಕಾಶ ಕೊಡುವ ಬಗ್ಗೆ ಪರಿಗಣಿಸಿ’ ಎಂದು ರಘುನಾಥ್ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ನಲ್ಲೂ ಟಿಕೆಟ್‌ಗೆ ಭಾರೀ ಪೈಪೋಟಿ ನಡೆದಿದೆ. ಮಾಜಿ ಮೇಯರ್‌ ಪದ್ಮಾವತಿ, ಮಂಜುಳಾ ನಾಯ್ಡು, ಭವ್ಯಾ ನರಸಿಂಹಮೂರ್ತಿ ಮತ್ತು ರಘುವೀರಗೌಡ ಎಂಬುವರು ಟಿಕೆಟ್‌ ಆಕಾಂಕ್ಷಿಗಳು. ರಘುವೀರ್ ಅವರು ಈಗಾಗಲೇ ಕ್ಷೇತ್ರದ ಜನರನ್ನು ಧರ್ಮಸ್ಥಳ, ಚಾಮುಂಡಿಬೆಟ್ಟ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಕಳುಹಿಸುವ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡು ವಿಧಾನಪರಿಷತ್‌ ಸದಸ್ಯರಾದವರೊಬ್ಬರು ಈ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನ
ನಡೆಸಿದ್ದಾರೆ. ಟಿಕೆಟ್‌ ಖಾತರಿ ಅದರೆ ಅವರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುವ ಸಾಧ್ಯತೆಯೂ ಇದೆ. ಇವರು ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಜೆಡಿಎಸ್‌ ಈಗಾಗಲೇ ಗಂಗಾಧರಮೂರ್ತಿ ಎಂಬುವರಿಗೆ ಟಿಕೆಟ್‌ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT