ಮಂಗಳವಾರ, ಮಾರ್ಚ್ 21, 2023
30 °C

ಸಾರಿಗೆ ಬಸ್‌ಗಳ ಮೇಲೆ ಖಾಸಗಿ ಆಸ್ಪತ್ರೆಗಳ ಕೋವಿಡ್ ದರಪಟ್ಟಿ ಪ್ರಕಟಿಸಿ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನಿಗದಿಪಡಿಸಿರುವ ದರದ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸಾಧ್ಯವಾದರೆ ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ದರ ಪಟ್ಟಿ ಪ್ರಕಟಿಸುವಂತೆ ತಿಳಿಸಿದೆ.

ಕೋವಿಡ್‌ ಸಂಬಂಧಿಸಿದ ವಿಷಯಗಳ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅರವಿಂದಕುಮಾರ್ ನೇತೃತ್ವದ ವಿಭಾಗೀಯ ಪೀಠ, ಈ ಸೂಚನೆ ನೀಡಿದೆ.

‘ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರವನ್ನು ಕೆಲ ಆಸ್ಪತ್ರೆಗಳಲ್ಲಿ ಪಡೆಯಲಾಗುತ್ತಿದೆ. ತಿಳಿವಳಿಕೆ ಕೊರತೆಯಿಂದ ಜನ ಕೂಡ ಕೇಳಿದಷ್ಟು ಹಣ ಪಾವತಿಸುತ್ತಿದ್ದಾರೆ’ ಎಂದು ಅರ್ಜಿದಾರರು ಆರೋಪಿಸಿದರು. ‘ದರ ಪಟ್ಟಿ ಬಗ್ಗೆ ಪ್ರಚಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸಿ’ ಎಂದು ಸರ್ಕಾರಕ್ಕೆ ಪೀಠ ಆದೇಶಿಸಿತು.

‘ಗೌರಿ ಗಣೇಶ ಹಬ್ಬ ಆಚರಣೆ ವಿಷಯದಲ್ಲಿ ತಜ್ಞರು ನೀಡಿರುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಕೇರಳದಿಂದ ಬರುವ  ಪ್ರಯಾಣಿಕರ ವಿಷಯದಲ್ಲೂ ನಿಗಾ ವಹಿಸಲಾಗುತ್ತಿದೆ’ ಎಂದು ಸರ್ಕಾರದ ಪರ ವಕೀಲರು ವಿವರಿಸಿದರು. ‘ಬೆಂಗಳೂರಿನಲ್ಲಿ ವಾರ್ಡ್ ಮಟ್ಟದ ಎಲ್ಲಾ ಅಧಿಕಾರಿಗಳೂ ಕೋವಿಡ್ ಕುರಿತ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಪೀಠ ತಿಳಿಸಿತು.

ಸೆಪ್ಟೆಂಬರ್‌ಗೆ 22.5 ಲಕ್ಷ ಡೋಸ್ ಕೋವಿಡ್ ಲಸಿಕೆ ಲಭ್ಯವಿದೆ. ಎರಡನೇ ಅಲೆಯಷ್ಟೇ ತೀವ್ರವಾಗಿ ಮೂರನೇ ಅಲೆ ಬಂದರೆ 1,200 ಟನ್ ಆಮ್ಲಜನಕದ ಅಗತ್ಯವಿದೆ ಎಂದು ಸರ್ಕಾರ ವಿವರಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು