ಕೆ.ಆರ್.ಪುರ: ‘ಶಾಸಕ ಅರವಿಂದ ಲಿಂಬಾವಳಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಕಾಂಗ್ರೆಸ್‌ನವರು ಒಬ್ಬ ಮಹಿಳೆ ಮೂಲಕ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ’ ಎಂದು ಬಿಜೆಪಿಯ ಮಹದೇವಪುರ ನಗರ ಮಂಡಲ ಘಟಕದ ಅಧ್ಯಕ್ಷ ಮನೋಹರ್‌ರೆಡ್ಡಿ ಪ್ರತಿಕ್ರಿಯಿಸಿದರು.
ಕೆ.ಆರ್.ಪುರ ಸಮೀಪದ ಮಾರತ್ತಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ರಾಜಕಾಲುವೆ ಒತ್ತುವರಿ ಮಾಡಿಕೊಂಡು ನೂರಾರು ಮನೆಗಳಿಗೆ ನೀರು ನುಗ್ಗಲು ಕಾರಣರಾದ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ರುತ್ ಸಗಾಯಿ ಮೇರಿ ಪರ ನಿಂತಿರುವ ಕಾಂಗ್ರೆಸ್‌ನವರು, ಶಾಸಕ ಅರವಿಂದ ಲಿಂಬಾವಳಿ ತಪ್ಪು ಮಾಡಿದ್ದಾರೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಸತ್ಯಾಂಶ ಅರಿಯದೆ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಪ್ರಚಾರವಾಗುತ್ತಿದೆ. ಇದು ನಿಲ್ಲಬೇಕು’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಮಹಿಳಾ ಅಧ್ಯಕ್ಷೆ ಪುಷ್ಪ, ಮುಖಂಡರಾದ ಜಯಚಂದ್ರರೆಡ್ಡಿ, ಸುರೇಶ್, ರಾಜೇಶ್, ಲೋಕೇಶ್ ಮತ್ತಿತರರಿದ್ದರು.