ಬುಧವಾರ, ಆಗಸ್ಟ್ 10, 2022
23 °C
ಆರ್‌ಎಸ್‌ಎಸ್‌ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡರೇ ಮೇಯರ್‌?

ಪ್ರಶಸ್ತಿ ಕೊಟ್ಟು, ಪುರಸ್ಸ್ಕೃತರ ಪಟ್ಟಿಯಿಂದ ಹೆಸರು ಕೈಬಿಟ್ಟ ಪಾಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯು ‘ಮರ್ಸಿ ಏಂಜಲ್ಸ್‌’ ಸಂಸ್ಥೆಯ ಡಾ.ಥಹಾ ಮತೀನ್‌ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ, ನಂತರ ಪ್ರಶಸ್ತಿ ಪುರಸ್ಕೃತರ ಪಟ್ಟಿಯಿಂದ ಅವರ ಹೆಸರು ಕೈಬಿಟ್ಟಿದೆ.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕುಟುಂಬದವರು ಶವಸಂಸ್ಕಾರಕ್ಕೆ ಮುಂದೆ ಬಾರದಿದ್ದಾಗ ‘ಮರ್ಸಿ ಏಂಜಲ್ಸ್‌’ ಸಂಸ್ಥೆಯ ಸ್ವಯಂಸೇವಕರು ಅವುಗಳ ಅಂತ್ಯಕ್ರಿಯೆ ನಡೆಸಿದ್ದರು.  ಗುರುವಾರ ಬೆಳಿಗ್ಗೆ 33 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿದಾಗ ಈ ಸಂಸ್ಥೆಯ ಡಾ.ಥಹಾ ಮತೀನ್‌ ಅವರೂ ಪ್ರಶಸ್ತಿ ಸ್ವೀಕರಿಸಿದ್ದರು. ಬೆಳಿಗ್ಗೆ ಮಾಧ್ಯಮದವರಿಗೆ ಬೆಳಿಗ್ಗೆ ನೀಡಿದ್ದ ಪಟ್ಟಿಯಲ್ಲಿ ಈ ಸಂಸ್ಥೆಯ ಡಾ.ಥಹಾ ಮತೀನ್‌ ಹೆಸರು ಇತ್ತು. ಆದರೆ, ಪಾಲಿಕೆ ಸಂಜೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗಿದೆ.

ಪ್ರಶಸ್ತಿ ನೀಡುವಾಗ ಆರ್‌ಎಸ್‌ಎಸ್‌ನವರಿಗೆ ಆದ್ಯತೆ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸುವಾಗ ಉಪಮುಖ್ಯಮಂತ್ರಿ ಡಾ.ಸಿ.ಎಸ್‌.ಅಶ್ವತ್ಥನಾರಾಯಣ ಅವರು ‘ಮರ್ಸಿ ಏಂಜಲ್ಸ್‌’ ಸಂಸ್ಥೆಗೂ ಪ್ರಶಸ್ತಿ ನೀಡಿರುವ ಬಗ್ಗೆ ಉಲ್ಲೇಖಿಸಿದ್ದರು.

ಮರ್ಸಿ ಏಂಜಲ್ಸ್‌ ಸಂಸ್ಥೆ ಹೆಸರು ಕೈಬಿಟ್ಟಿದ್ದಕ್ಕೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌ ಆಕ್ಷೇಪ ವ್ಯಕ್ತಪಡಿಸಿದರು. ‘ಮೇಯರ್‌ ಅವರು ಆರ್‌ಎಸ್‌ಎಸ್‌ನವರ ಮಾತು ಕೇಳಿ ಥಹಾ ಮತೀನ್‌ ಹೆಸರನ್ನು ಕೈಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಮೇಯರ್‌ ಹಾಗೂ ಉಪಮುಖ್ಯಮಂತ್ರಿ ಅವರೇ ಪ್ರಶಸ್ತಿ ನೀಡಿ, ಬಳಿಕ ಪುರಸ್ಕೃತರ ಪಟ್ಟಿಯಿಂದ ಸಂಸ್ಥೆ ಹೆಸರು ಕೈಬಿಟ್ಟು ಪ್ರಯೋಜನವೇನು. ಇಂತಹ ನಡವಳಿಕೆ ಮೇಯರ್ ಘನತೆಗೆ ತಕ್ಕುದಲ್ಲ. ಇದನ್ನು ಖಂಡಿಸುತ್ತೇನೆ’ ಎಂದು ವಾಜಿದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಎಂ.ಗೌತಮ್‌ ಕುಮಾರ್‌, ‘ನಾನು ಸಹಿ ಹಾಕಿದ ಪಟ್ಟಿಯಲ್ಲಿ ಮರ್ಸಿ ಏಂಜೆಲ್ಸ್‌ನ ಥಹಾ ಮತೀನ್‌ ಹೆಸರು ಇರಲಿಲ್ಲ. ಸರ್ಕಾರೇತರ ಸಂಸ್ಥೆಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲು ಬರುವುದಿಲ್ಲ ಎಂಬ ಕಾರಣಕ್ಕೆ ಸಂಸ್ಥೆಯ ಹೆಸರನ್ನು ಕೈಬಿಡಲಾಗಿತ್ತು. ನಿನ್ನೆ ಕೌನ್ಸಿಲ್‌ ಸಭೆ ಮುಗಿಯುವಾಗ ರಾತ್ರಿ 7.30 ಆಗಿತ್ತು. ಕೊನೆಯ ಕ್ಷಣದಲ್ಲಿ ಉಂಟಾದ ಗೊಂದಲದಿಂದಾಗಿ ಈ ರೀತಿಯಾಗಿದೆ’ ಎಂದು ಸಮಜಾಯಿಷಿ ನೀಡಿದರು.

‘ಅಧಿಕೃತವಾಗಿ 32 ಮಂದಿಗೆ ಮಾತ್ರ ಪ್ರಶಸ್ತಿ ನೀಡಿರುವುದರಿಂದ ಮರ್ಸಿ ಏಂಜೆಲ್ಸ್‌ ಸಂಸ್ಥೆಗೆ ₹ 50 ಸಾವಿರ ಮೊತ್ತ ನೀಡಲು ಬರುವುದಿಲ್ಲ’ ಎಂದು ಮೇಯರ್‌ ತಿಳಿಸಿದರು.

**

32 ಮಂದಿಯಲ್ಲಿ ಕೊರೋನಾ ಯೋಧರು 6 ಮಂದಿ ಮಾತ್ರ. ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ವಿವಿಧ ಕ್ಷೇತ್ರಗಳ ಹೋರಾಟಗಾರರು ಎಂದು ಪರಿಗಣಿಸಿ ಪ್ರಶಸ್ತಿ ನೀಡಿದ್ದು ಖಂಡನೀಯ.
ಅಬ್ದುಲ್‌ ವಾಜಿದ್‌, ಬಿಬಿಎಂಪಿ ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು