ಶನಿವಾರ, ಮೇ 28, 2022
27 °C
ಕಾರ್ಯಕ್ರಮದಲ್ಲಿ ಲೇಖಕಿ ದಯಾ ಗಂಗನಘಟ್ಟ ಅಭಿಪ್ರಾಯ

ಬೆರಕೆ ಸೊಪ್ಪಿನ ಗುಣಗಳ ಒಳಗೊಂಡ ಕೃತಿ: ದಯಾ ಗಂಗನಘಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಶವರೆಡ್ಡಿ ಹಂದ್ರಾಳ ಅವರ ‘ಬೆರಕೆ ಸೊಪ್ಪು’ ಕೃತಿಯು ಈ ಸೊಪ್ಪಿನ ಹಾಗೆ ವಿಭಿನ್ನ ಗುಣಗಳನ್ನು ಒಳಗೊಂಡಿದ್ದು, ‌ರಸವತ್ತತೆಯಿಂದ ಕೂಡಿದೆ’ ಎಂದು ಲೇಖಕಿ ದಯಾ ಗಂಗನಘಟ್ಟ ಅಭಿಪ್ರಾಯಪಟ್ಟರು.

ಸಪ್ನ ಬುಕ್‌ ಹೌಸ್‌ ಹಾಗೂ ಸಿ.ಜಿ.ಚಾರಿಟಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅವರು ಕೇಶವರೆಡ್ಡಿ ಅವರ ‘ಬೆರಕೆ ಸೊಪ್ಪು’ ಪ್ರಬಂಧ ಸಂಕಲನ ಹಾಗೂ ‘ಮೃಗತೃಷ್ಣ’ ಕಾದಂಬರಿ ಬಿಡುಗಡೆ ಮಾಡಿದರು.

ಕೃತಿಗಳ ಕುರಿತು ಅವರು ಮಾತನಾಡಿದ ದಯ ಗಂಗನಘಟ್ಟ, ‘ಸಂಕ್ರಾಂತಿ ಹಬ್ಬದ ಸಡಗರ ಹಾಗೂ ಜನರ ಬವಣೆಗಳ ಕುರಿತು ಮಾತನಾಡುತ್ತಲೇ ಲೇಖಕರು ಪುನೀತ್‌ ರಾಜ್‌ಕುಮಾರ್‌ ಮರಣದ ಬಗ್ಗೆಯೂ ಹೇಳುತ್ತಾರೆ. ಇದ್ದಕ್ಕಿದ್ದಂತೆಯೇ ಸಾಮಾಜಿಕ ಸಂರಚನೆಯತ್ತ ಹೊರಳುತ್ತಾರೆ. ಹಳ್ಳಿಗಾಡಿನ ಗಟ್ಟಿಗಿತ್ತಿ ಮಹಿಳೆಯರ ಕುರಿತು ಮಾತನಾಡುತ್ತಲೇ ತಮ್ಮ ಪತ್ನಿಯ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಚಿಂತನೆಯನ್ನೂ ಮೆಲುಕು ಹಾಕಿದ್ದಾರೆ’ ಎಂದು ತಿಳಿಸಿದರು.

‘ಮೃಗತೃಷ್ಣ ಕಾದಂಬರಿಯಲ್ಲಿ ಕೇರಳದ ರಾಜಕೀಯ ತಲ್ಲಣಗಳು, ದೇಶದ ರಾಜಕೀಯ ವ್ಯವಸ್ಥೆ ಮೇಲೆ ಆ ರಾಜ್ಯ ಬೀರುತ್ತಿದ್ದ ಪ್ರಭಾವ, ಅಲ್ಲಿನ ಅಧಿಕಾರಶಾಹಿ ವ್ಯವಸ್ಥೆಯ ಚಿತ್ರಣವಿದೆ’ ಎಂದರು.

ಕೇಶವರೆಡ್ಡಿ ಹಂದ್ರಾಳ, ‘ನಮ್ಮದು ಪ್ರೇಮ ವಿವಾಹ. 1986ರ ಒಂದು ದಿನ ಸಂಜೆ ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ಇದ್ದಕ್ಕಿದ್ದಂತೆ ಕೋಮುಗಲಭೆ ಶುರುವಾಗಿತ್ತು. ಗುಂಪೊಂದು ಮಾರಕಾಸ್ತ್ರದೊಂದಿಗೆ ಜನರತ್ತ ನುಗ್ಗಿ ಬಂದಿತ್ತು. ಆಗ ‍ಪತ್ನಿಯನ್ನು ಭುಜದ ಮೇಲೆ ಎತ್ತಿಕೊಂಡು ಮನೆಯವರೆಗೂ ಓಡಿದ್ದೆ. ಅಂದಿನಿಂದ ಆಕೆ ನನ್ನನ್ನು ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದಳು’ ಎಂದು ಸ್ಮರಿಸಿದರು.

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಜನಪದ ತಜ್ಞ ಕಾಳೇಗೌಡ ನಾಗವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ‘ಚಂದ್ರಮ’ ಆಲ್ಬಮ್‌ ಬಿಡುಗಡೆ ಮಾಡಲಾಯಿತು. ಪೌರಕಾರ್ಮಿಕ ಮಹಿಳೆಯರನ್ನೂ ಸನ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು