ಶನಿವಾರ, ಆಗಸ್ಟ್ 13, 2022
26 °C
ಕಾರ್ಮಿಕರ ಕೊರತೆಯಿಂದ ಕೆಐಎ ಮೂಲಸೌಕರ್ಯ ಅಭಿವೃದ್ಧಿ ನಿಧಾನಗತಿ * ಪ್ರಯಾಣಿಕರ ಸಂಖ್ಯೆಯೂ ಕ್ಷೀಣ

ಟರ್ಮಿನಲ್‌ –2 ನಿರ್ಮಾಣ ಕಾರ್ಯ ವರ್ಷ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ವಿಳಂಬವಾಗಲಿದೆ. ಕಾರ್ಮಿಕರ ಕೊರತೆ ಇರುವುದರಿಂದ ಕೆಐಎನ ಎರಡನೇ ಟರ್ಮಿನಲ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು ಒಂದು ವರ್ಷ ವಿಳಂಬವಾಗಲಿದೆ. 

‘ಲಾಕ್‌ಡೌನ್‌ನಿಂದ ನಮ್ಮ ಹಲವು ಯೋಜನೆಗಳು ವಿಳಂಬವಾಗುವ ಸಾಧ್ಯತೆ ಇದೆ. 2021ಕ್ಕೆ ಟರ್ಮಿನಲ್‌–2 ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ನಮ್ಮ ಮುಂದಿತ್ತು. ಆದರೆ, ಈ ಗಡುವು ಕನಿಷ್ಠ 6 ತಿಂಗಳುಗಳಿಂದ 12 ತಿಂಗಳು ವಿಸ್ತರಣೆ ಆಗಲಿದೆ. ತವರು ಜಿಲ್ಲೆ ಮತ್ತು ರಾಜ್ಯಕ್ಕೆ ತೆರಳಿರುವ ಕಾರ್ಮಿಕರು ಮರಳಿದ ನಂತರ ನಿರ್ಮಾಣ ಕಾರ್ಯ ಚುರುಕುಗೊಳ್ಳಲಿದೆ’ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹರಿ ಮರಾರ್‌ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

‘ದ್ವಿಪಥ ರಸ್ತೆಯನ್ನು ಐದು ಪಥವಾಗಿ ವಿಸ್ತರಿಸುವ ಯೋಜನೆಯೂ ಇದೆ. ಸದ್ಯ, 2,300 ಕಾರ್ಮಿಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಮೂಲಸೌಕರ್ಯ ಬೇಡಿಕೆಯೂ ಕಡಿಮೆಯಾಗಿದೆ. ಹೀಗಾಗಿ, ಕಾರ್ಮಿಕರ ಕೊರತೆಯಿಂದ ಹೆಚ್ಚು ತೊಂದರೆಯಾಗುವುದಿಲ್ಲ’ ಎಂದೂ ಅವರು ಹೇಳಿದರು. 

2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಎರಡನೇ ಟರ್ಮಿನಲ್‌ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವರ್ಷಕ್ಕೆ 2.5 ಕೋಟಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಎಲ್‌ ಆ್ಯಂಡ್‌ ಟಿ ಕಂಪನಿಯು ಇದರ ನಿರ್ಮಾಣ ಗುತ್ತಿಗೆ ಪಡೆದಿದ್ದು, ₹3,035 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಿದೆ. 

ನಿತ್ಯ 1,300 ಜನ ಪ್ರಯಾಣ: ‘ಲಾಕ್‌ಡೌನ್‌ ಕಾರಣದಿಂದ ವಿಮಾನಯಾನ ಪ್ರಯಾಣಿಕರ ಸಂಖ್ಯೆಯೂ ಕ್ಷೀಣಿಸಿದೆ. ಸಾಮಾನ್ಯ ದಿನಗಳಲ್ಲಿ ಕೆಐಎನಿಂದ 700ಕ್ಕೂ ಹೆಚ್ಚು ವಿಮಾನಗಳು ಸಂಚಾರ ನಡೆಸುತ್ತಿದ್ದವು. ಈಗ ನಿತ್ಯ 130 ವಿಮಾನಗಳು ಮಾತ್ರ ಸಂಚರಿಸುತ್ತಿವೆ. (ಆಗಮನ–ನಿರ್ಗಮನ) ಪ್ರತಿ ದಿನ ಸರಾಸರಿ 1,300 ಪ್ರಯಾಣಿಕರು ಸಂಚರಿಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

‘ಕೇಂದ್ರ ಮತ್ತು ರಾಜ್ಯಸರ್ಕಾರದ ನಿರ್ದೇಶನದಂತೆ ಪ್ರಯಾಣಿಕರ ಕ್ವಾರಂಟೈನ್‌ಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ದಿನಕ್ಕೆ ಅಂದಾಜು 60ರಿಂದ 70 ಪ್ರಯಾಣಿಕರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ’ ಎಂದು ಅವರು ಹೇಳಿದರು. 

‘ಲಾಕ್‌ಡೌನ್‌ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಬಿಐಎಎಲ್‌ನ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿಲ್ಲ. ಶೀಘ್ರದಲ್ಲಿಯೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು, ಎಲ್ಲವೂ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು