ಬೆಂಗಳೂರು: ವಂಚನೆ ಪ್ರಕರಣದಲ್ಲಿ ದೂರು ನೀಡಿದ್ದ ಯುವತಿಗೆ ಕೊಡಿಗೇಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎನ್.ರಾಜಣ್ಣ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿಪ್ರಸಾದ್ ಅವರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಸೋಮವಾರ ವರದಿ ಸಲ್ಲಿಸಿದ್ದಾರೆ.
‘ಇನ್‌ಸ್ಪೆಕ್ಟರ್ ರಾಜಣ್ಣ ವಿರುದ್ಧ ಯುವತಿ ದೂರು ನೀಡಿದ್ದರು. ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಕೆಲ ಪುರಾವೆಗಳೂ ಸಿಕ್ಕಿವೆ. ಎಸಿಪಿ ವರದಿಯನ್ನು ಪರಿಶೀಲಿಸಿ ಕಮಿಷನರ್ ಅವರಿಗೆ ಸಲ್ಲಿಸಲಾಗಿದೆ. ಕಮಿಷನರ್ ಅವರೇ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಡಿಸಿಪಿ ಲಕ್ಷ್ಮಿಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಏನಿದು ಪ್ರಕರಣ: ‘ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವೀರೇಂದ್ರ ಬಾಬು ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತ, ಯುವತಿ ಬಳಿ ₹ 15 ಲಕ್ಷ ಸಾಲ ಪಡೆದಿದ್ದ. ಅದನ್ನು ವಾಪಸು ಕೊಡದೇ ಸತಾಯಿಸುತ್ತಿದ್ದ. ಈ ಬಗ್ಗೆ ಯುವತಿ, ಕೊಡಿಗೇಹಳ್ಳಿ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರು ನೀಡಲು ಬಂದಿದ್ದ ವೇಳೆ ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಇನ್‌ಸ್ಪೆಕ್ಟರ್ ರಾಜಣ್ಣ ಸಂದೇಶ ಕಳುಹಿಸಲಾರಂಭಿಸಿದ್ದ. ‘ಭೇಟಿಯಾಗೋಣ ಬಾ’ ಎಂದು ಯುವತಿ ಯನ್ನು ಕರೆಯುತ್ತಿದ್ದ. ಪ್ರಕರಣದ ಪ್ರಗತಿ ತಿಳಿಯಲೆಂದು ಯುವತಿ, ಮಾರ್ಚ್ 24ರಂದು ಠಾಣೆಗೆ ಹೋಗಿದ್ದರು.’ ಎಂದು ತಿಳಿಸಿವೆ.
‘ಯುವತಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡಿದ್ದ ಇನ್‌ಸ್ಪೆಕ್ಟರ್, ಡ್ರೈ ಫ್ರೂಟ್ಸ್ ಬಾಕ್ಸ್ ನೀಡಿದ್ದ. ಅಸಭ್ಯವಾಗಿ ವರ್ತಿಸಿದ್ದ. ಆತನಿಂದ ತಪ್ಪಿಸಿಕೊಂಡಿದ್ದ ಯುವತಿ, ಕೊಠಡಿಯಿಂದ ಹೊರಬಂದು ಠಾಣೆಯಲ್ಲಿದ್ದ ಮಹಿಳಾ ಸಬ್ ಇನ್‌ಸ್ಪೆಕ್ಟರ್‌ಗೆ ವಿಷಯ ತಿಳಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಕಿರುಕುಳದ ವಿಷಯವನ್ನು ಯಾರಿಗಾದರೂ ಹೇಳಿದರೆ ಮರ್ಯಾದೆ ಹೋಗುತ್ತದೆ. ಸುಮ್ಮನಿರು’ ಎಂದು ಸಬ್ ಇನ್‌ಸ್ಪೆಕ್ಟರ್ ಹೇಳಿದ್ದರು.
ಠಾಣೆಯಿಂದ ತೆರಳಿದ್ದ ಯುವತಿ, ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ಅವರ ಮೂಲಕವೇ ಡಿಸಿಪಿ ಭೇಟಿಯಾಗಿ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.
ದೂರು ನೀಡಿದ್ದ ಸಿಬ್ಬಂದಿ: ‘ಠಾಣೆ ವ್ಯಾಪ್ತಿಯಲ್ಲಿ ಹಲವು ಅಕ್ರಮ ಚಟುವಟಿಕೆಗಳಿಗೆ ರಾಜಣ್ಣ ಕುಮ್ಮಕ್ಕು ನೀಡುತ್ತಿದ್ದಾರೆ. ದೂರುದಾರರು ಹಾಗೂ ಆರೋಪಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಠಾಣೆ ಸಿಬ್ಬಂದಿಯೇ ಈ ಹಿಂದೆ ಡಿಸಿಪಿಗೆ ದೂರು ನೀಡಿದ್ದರು. ಕೆಲ ಸ್ಥಳೀಯ ನಿವಾಸಿಗಳು, ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.