ಶನಿವಾರ, ಏಪ್ರಿಲ್ 1, 2023
32 °C

ಕೆ.ಆರ್ ಪುರ ಕ್ಷೇತ್ರ ಸ್ಥಿತಿ ಗತಿ: ಬೈರತಿ ಮಣಿಸಲು ಕಾಂಗ್ರೆಸ್, ಜೆಡಿಎಸ್‌ ಹವಣಿಕೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಪ್ರತಿನಿಧಿಸುವ ಕೆ.ಆರ್.ಪುರ ಕ್ಷೇತ್ರದ ಪ್ರಮುಖ ಪ್ರದೇಶಗಳು ಅಭಿವೃದ್ಧಿಯ ಮಿಂಚು ಕಂಡಿದ್ದರೆ, 15 ವರ್ಷಗಳ ಹಿಂದೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳಿಗಿನ್ನೂ ಪೂರ್ಣಪ್ರಮಾಣದ ಅದೃಷ್ಟ ಒಲಿದಿಲ್ಲ.

2008ರಲ್ಲಿ ಹೊಸದಾಗಿ ಸೃಷ್ಟಿಯಾದ ಕ್ಷೇತ್ರದ ಪೈಕಿ ಒಂದಾದ, ಇಲ್ಲಿ ಮೊದಲ ಬಾರಿಗೆಬಿಜೆಪಿಯ ನಂದೀಶ್ ರೆಡ್ಡಿ ಗೆದ್ದಿದ್ದರು. ರೆಡ್ಡಿ ವಿರುದ್ಧ ಸತತ ಹೋರಾಟ ನಡೆಸುವ ಜತೆಗೆ, ಮತಗಳ ಮೇಲೆ ಕಣ್ಣಿಟ್ಟ ’ದಾನ’, ಕಾಂಗ್ರೆಸ್ ಅಲೆ, ಬಿಜೆಪಿ ವಿಭಜನೆಯಾಗಿದ್ದರ ಲಾಭಪಡೆದ ಬೈರತಿ 2013ರಲ್ಲಿ ನಿರಾಯಾಸವಾಗಿ ಗೆದ್ದು ಬಂದರು. ಆ ಬಳಿಕ, ತಮ್ಮ ದಾನ, ಭೇದ, ಕೊಡುಗೆಗಳ ಕಾರಣಕ್ಕೆ ಕ್ಷೇತ್ರವನ್ನು ಭದ್ರಮುಷ್ಟಿಯಡಿ ಹಿಡಿದುಕೊಂಡ ಅವರು, ಎದುರಾಳಿಗಳೇ ಇಲ್ಲದಂತೆ ನೋಡಿಕೊಂಡರು.

2018ರಲ್ಲಿ ಮರು ಆಯ್ಕೆಯಾದ ಅವರು, 2019ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಮತ್ತೆ ಗೆಲುವುಪಡೆದರು. ಕ್ಷೇತ್ರದಲ್ಲಿ ಬಲಿಷ್ಠ ಎದುರಾಳಿಯಾಗಬಹುದಾಗಿದ್ದ ‍ಪೂರ್ಣಿಮಾ ಅವರು 2018ರಲ್ಲಿ ಬಿಜೆಪಿ ಸೇರಿ, ಹಿರಿಯೂರಿನಿಂದ ಶಾಸಕರಾಗಿ ಆಯ್ಕೆಯಾದರು. ಬೈರತಿ ಬಿಜೆಪಿ ಸೇರಿ ಅಲ್ಲಿ ತನ್ನ ಹಿಡಿತ ಭದ್ರಗೊಳಿಸಿಕೊಂಡಿದ್ದರಿಂದಾಗಿ, ಮೂರು ಬಾರಿ ಪ್ರತಿಸ್ಪರ್ಧಿಯಾಗಿದ್ದ ನಂದೀಶ್ ರೆಡ್ಡಿ, ಅವರ ಜತೆಗೆ ನಿಲ್ಲಬೇಕಾಯಿತು.

ಕೆಲವು ತಿಂಗಳುಗಳಿಂದ ನಂದೀಶ್ ರೆಡ್ಡಿ ಪಕ್ಷದ ಚಟುವಟಿಕೆಗಳಿಂದ ಹೊರಗೆ ಉಳಿದಿದ್ದರು. ಈಗ ರಾಜ್ಯ ಉಪಾಧ್ಯಕ್ಷ ಜವಾಬ್ದಾರಿಯನ್ನು ಅವರಿಗೆ ಪಕ್ಷ ವಹಿಸಿರುವುದರಿಂದ ಬೈರತಿ ಬಸವರಾಜ ಅವರ ಉಮೇದುವಾರಿಕೆ ಬಹುತೇಕ ಖಚಿತ. ನಂದೀಶ್ ರೆಡ್ಡಿ ಬೆಂಬಲಿಸುವ ಕಾರ್ಯಕರ್ತರಿಗೆ ಇರುವ ಅಸಮಾಧಾನವನ್ನು ‘ಒಳಏಟು’ ಎಂದು ಕಾಂಗ್ರೆಸ್‌ ಟಿಕೆಟ್‌ನ ಕನಸು ಕಾಣುತ್ತಿರುವವರು ಭಾವಿಸಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ, ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್‌ನ ಮಾಲೀಕ ಡಿ.ಕೆ. ಮೋಹನ್‌ಬಾಬು, ಮಾಜಿ ಶಾಸಕ ಎ.ಕೃಷ್ಣಪ್ಪ ಅವರ ಸಹೋದರ ಡಿ.ಎ. ಗೋಪಾಲ, ವಿಧಾನಪರಿಷತ್ ಮಾಜಿ ಸದಸ್ಯ
ಎ.ನಾರಾಯಣಸ್ವಾಮಿ ಇಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಡಿ.ಎ. ಗೋಪಾಲ ಸ್ಪರ್ಧಿಸಿದ್ದರು. ಈ ಸಲ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ಅವರಾಗಿರುವುದರಿಂದ ಜೆಡಿಎಸ್‌ನಿಂದ ಯಾವ ಆಕಾಂಕ್ಷಿಯ ಹೆಸರೂ ಪ್ರಸ್ತಾಪವಾಗುತ್ತಿಲ್ಲ.

ಗ್ರೇಟರ್ ಬೆಂಗಳೂರು ಭಾಗಗಳನ್ನು ಹೊಂದಿದ ದೊಡ್ಡ ವಿಧಾನಸಭಾ ಕ್ಷೇತ್ರ ಕೆ.ಆರ್. ಪುರ. ಮೇಡಹಳ್ಳಿ, ಸಣ್ಣ ತಿಮ್ಮನಹಳ್ಳಿ, ಭಟ್ಟರಹಳ್ಳಿ, ಕೆ.ಆರ್. ಪುರ, ರಾಮಮೂರ್ತಿನಗರ, ಚಿಕ್ಕಬಸವನಪುರ, ದೂರವಾಣಿ ನಗರ, ವಿಜ್ಞಾನಪುರ, ದೇವಸಂದ್ರ, ಕೆ. ನಾರಾಯಣಪುರ, ಸಿಂಗಯ್ಯನಪಾಳ್ಯ, ವಿಮಾನಪುರ ಮೊದಲಾದ ಪ್ರದೇಶಗಳನ್ನು ಇದು ಒಳಗೊಂಡಿದೆ.

ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗಿನ ಟ್ರಾಫಿಕ್ ಸಮಸ್ಯೆಗೆ ಇನ್ನೂ ಮುಕ್ತಿ ದೊರೆತಿಲ್ಲ. ರಾಜಕಾಲುವೆ, ಚರಂಡಿ ಸಮಸ್ಯೆಗಳು ಕೂಡ ಹಾಗೆಯೇ ಇವೆ. ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕೆಲಸದ ಕುರಿತು ಅಲ್ಲಲ್ಲಿ ತಗಾದೆಗಳು ಉಳಿದುಕೊಂಡಿವೆ. ಭ್ರಷ್ಟಾಚಾರದ ಬಗೆಗೆ ಮುಕ್ತವಾಗಿ ಮಾತನಾಡುವ ಮತದಾರರೂ ಇಲ್ಲಿದ್ದಾರೆ.

ಮಹದೇವಪುರ ಹಾಗೂ ಕೆ.ಆರ್. ಪುರ ವ್ಯಾಪ್ತಿಗಳನ್ನು ಒಳಗೊಳ್ಳುವ ಸರ್ಕಾರಿ ಆಸ್ಪತ್ರೆಯನ್ನು 100  ಹಾಸಿಗೆ ಸಾಮರ್ಥ್ಯದಿಂದ 150 ಹಾಸಿಗೆಗಳಿಗೆ ಹೆಚ್ಚಿಸುವ ಪ್ರಕ್ರಿಯೆ ನಡೆದಿರುವುದರ ಕುರಿತು ಸ್ಥಳೀಯರಿಗೆ ಸಂತಸವಿದೆ. ಕೆ.ಆರ್. ಪುರದ ಪ್ರಥಮ ದರ್ಜೆಕಾಲೇಜಿನ ಕ್ರೀಡಾಂಗಣ, ಸಭಾಂಗಣದ ಕಾಮಗಾರಿ ಇನ್ನೂ ಮುಗಿದಿಲ್ಲ ಎನ್ನುವುದರ ಕುರಿತು ಅಸಮಾಧಾನವೂ ಇದೆ.

ಕಿರಿದಾದ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿರುವುದರ ಕಡೆಗೆ ಬೆರಳು ತೋರುತ್ತಿರುವ ಮತದಾರರಿಗೆ ತಮ್ಮ ಎದುರು ಇನ್ನೂ ಯಾರುಯಾರು ನಿಲ್ಲುವರೋ ಎಂಬ ಕುತೂಹಲ ಇದೆ.

----

ಹಾಲಿ ಶಾಸಕ

ಬೈರತಿ ಬಸವರಾಜ(ಬಿಜೆಪಿ)

2019ರ ಉಪಚುನಾವಣೆ

ಬೈರತಿ ಬಸವರಾಜ (ಬಿಜೆಪಿ)–1,39,879

ಎಂ. ನಾರಾಯಣಸ್ವಾಮಿ (ಕಾಂಗ್ರೆಸ್)–76,436

ಸಿ. ಕೃಷ್ಣಮೂರ್ತಿ (ಜೆಡಿಎಸ್‌)–2.048

 

 

2018ರ ಚುನಾವಣೆ

1– ಕಾಂಗ್ರೆಸ್‌– 1,35,230

2– ಬಿಜೆಪಿ– 1,02,468

3– ಜೆಡಿಎಸ್‌– 6565

 

 

2013ರ ಚುನಾವಣೆ

1– ಕಾಂಗ್ರೆಸ್‌– 1,06,299

2– ಬಿಜೆಪಿ–  82,298

3-ಜೆಡಿಎಸ್– 3,955 

 

 

2008ರ ಚುನಾವಣೆ

1– ಬಿಜೆಪಿ– 66,725

2– ಕಾಂಗ್ರೆಸ್‌– 56,939

3– ಜೆಡಿಎಸ್‌– 6,276

 

ಹಾಲಿ ಮತದಾರರ ವಿವರ

ಪುರುಷರು– 2,54,747

ಮಹಿಳೆಯರು–  2,32,636

ತೃತೀಯ ಲಿಂಗಿಗಳು–  163

ಒಟ್ಟು– 4,26,423

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು