ಸೋಮವಾರ, ಡಿಸೆಂಬರ್ 5, 2022
19 °C
ಕಡಿಮೆ ಜಮೀನಿನಲ್ಲಿ ಅಧಿಕ ಇಳುವರಿ ಪಡೆದ ಸಾಧಕ ರೈತರು

ಸಮಗ್ರ ಕೃಷಿ: ರೈತರ ಯಶೋಗಾಥೆ ಅನಾವರಣ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈನುಗಾರಿಕೆ, ಕೋಳಿ – ಕುರಿ ಸಾಕಣೆ, ಜೇನು ಕೃಷಿ, ಮೀನುಸಾಕಣೆ, ಸ್ವಂತಜಮೀನಿನಲ್ಲಿ ಖಾಸಗಿ ಅರಣ್ಯ ಬೆಳೆಸಿದ ರೈತರು, ಬರದ ನಡುವೆಯೂ ಕೃಷಿಯಲ್ಲಿ ಆದಾಯ ಗಳಿಸಿದ ರೈತ ಮಹಿಳೆ, ಸಾವಯವ ಕೃಷಿಯಲ್ಲಿ ಯಶಸ್ಸು, ಔಷಧಿ ಸಸ್ಯ ಬೆಳೆಸಿ ಬದುಕು ಕಟ್ಟಿಕೊಂಡ ಕುಟುಂಬ...

–ಹೀಗೆ ಸಮಗ್ರ ಕೃಷಿ ಅಳವಡಿಸಿಕೊಂಡ ಸಾಧಕ ರೈತರ ಯಶೋಗಾಥೆಗಳು ಈ ಬಾರಿಯ ಕೃಷಿ ಮೇಳದಲ್ಲಿ ಅನಾವರಣ
ಗೊಂಡವು. ಕಡಿಮೆ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆದ ರೈತರ ಸಾಹಸಗಳು ಹಲವರಿಗೆ ಪ್ರೇರಣೆ ನೀಡಿದವು.
120 ಸಾಧಕ ರೈತರನ್ನು ಕೃಷಿ ವಿಶ್ವವಿದ್ಯಾಲಯ ಗುರುತಿಸಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಪ್ರಶಸ್ತಿ ನೀಡಿದೆ.

ಹಾಸನ ಜಿಲ್ಲೆ ಹೊಳೆನರಸಿಪುರ ತಾಲ್ಲೂಕಿನ ಬಂಟರತಳಾಲು ಗ್ರಾಮದ ಎಂ.ಕವಿತಾ ಅವರು, 9 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಯಶಸ್ಸು ಗಳಿಸಿದ್ದಾರೆ. ಅವರ ಜಮೀನಿನಲ್ಲಿ ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ದಾಳಿಂಬೆ, ಚಕೋತಾ, ಮೂಸಂಬಿ, ನಿಂಬೆ, ಪಪ್ಪಾಯ, ಸಪೋಟ, ಸೀತಾಫಲ, ಬೆಣ್ಣೆಹಣ್ಣು, ಸೀಬೆ, ಪನ್ನೇರಳೆ, ಜಂಬು ನೇರಳೆ, ಅಂಜೂರ, ವಿವಿಧ ಬಗೆಯ ತರಕಾರಿಗಳು, ಹೂವಿನ ಬೆಳೆಗಳು ನಳನಳಿಸುತ್ತಿವೆ.


 ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಜನರು ‌ಆಲಂಕಾರಿಕ ಗಿಡಗಳನ್ನು ಖರೀದಿಸಿದರು – ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಕೋಳಿ ಹಾಗೂ ಮೀನು ಸಾಕಣೆಯಿಂದಲೂ ಆದಾಯ ಗಳಿಸುತ್ತಿದ್ದಾರೆ. ಜಾನುವಾರುಗಳಿಗೆ ತಮ್ಮ ಜಮೀನಿನಲ್ಲಿಯೇ ಮೇವು ಬೆಳೆಯುತ್ತಿದ್ಧಾರೆ. ಹೈನುಗಾರಿಕೆಯೂ ಕೈಹಿಡಿದಿದೆ.

‘ನಮ್ಮ ಭಾಗದಲ್ಲಿ ಮಳೆ ಸಕಾಲಿಕ ವಾಗಿ ಬೀಳುವುದಿಲ್ಲ. ನೀರಾವರಿ ಸೌಲಭ್ಯ ಮಾಡಿಕೊಂಡಿದ್ದೇವೆ. ಭೂಮಿಯ ಪೋಷಕಾಂಶ ನಿರ್ವಹಣೆಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ, ಎರೆಗೊಬ್ಬರ, ಜೀವಾಮೃತ ಬಳಕೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ತೋಟದ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ: ಶಿಡ್ಲಘಟ್ಟ ತಾಲ್ಲೂಕು ಮಳ್ಳೂರಿನ ಎಂ.ಟಿ.ಮುನೇಗೌಡ ಅವರು ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ. 28 ಎಕರೆ ಜಮೀನಿಗೂ ತಾವೇ ತಯಾರಿಸಿದ ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ. ತೋಟದಲ್ಲಿ ಬಿದ್ದ ಒಂದು ಎಲೆಯನ್ನೂ ಅವರು ವ್ಯರ್ಥ ಮಾಡುತ್ತಿಲ್ಲ.

‘ಪ್ರತ್ಯೇಕ ಘಟಕ ನಿರ್ಮಿಸಿ ಗೊಬ್ಬರ ತಯಾರಿಸುತ್ತಿದ್ಧೇನೆ. ರಸಾಯನಿಕ ಗೊಬ್ಬರ ಬಳಕೆ ದೂರ ಮಾಡಿದ್ದು, ಈ ಪದ್ಧತಿಯಿಂದ ಬೆಳೆಗಳಿಗೆ ರೋಗ ಬಾಧೆ ದೂರವಾಗಿದೆ’ ಎಂದು ಮುನೇಗೌಡ ಹೇಳಿದರು.

ಕೈಹಿಡಿದ ತರಕಾರಿ ಬೆಳೆ: ದೊಡ್ಡಬಳ್ಳಾಪುರ ಲಕ್ಷ್ಮೀದೇವರಪುರದ ಸಿ.ನವಿಕ್ರಮ್ ಅವರು, 24 ಎಕರೆಯಲ್ಲಿ ತೋಟಗಾರಿಕಾ ಬೆಳೆಗಳಾದ ಮಾವು, ದ್ರಾಕ್ಷಿ, ಸೀಬೆ, ಸಪೋಟ, ನೇರಳೆ, ಹಲಸು, ಡ್ರಾಗನ್‌ ಫ್ರೂಟ್‌, ನಿಂಬೆ, ದಾಳಿಂಬೆ, ಬಾಳೆ, ಪರಂಗಿ, ಮೂಸಂಬಿ, ಸೀತಾಫಲ, ಚಕೋತ, ಅಂಜೂರ, ನೆಲ್ಲಿ, ಕಿತ್ತಳೆ, ಅನಾನಸ್ ಬೆಳೆದು ಅವುಗಳಿಗೆ ವೈಜ್ಞಾನಿಕ ಮಾರುಕಟ್ಟೆ ಕಲ್ಪಿಸಿಕೊಂಡಿದ್ದಾರೆ. ಜತೆಗೆ ತರಕಾರಿ ಬೆಳೆಗಳೂ ನಳನಳಿಸುತ್ತಿವೆ.

ಸೌತೆಕಾಯಿ, ಕೊತ್ತಂಬರಿ, ಹೂಕೋಸು, ಆಲೂಗಡ್ಡೆ, ಟೊಮೆಟೊ, ಹೀರೇಕಾಯಿ, ಹಾಗಲಕಾಯಿ, ಬೂದುಗುಂಬಳ, ಮೂಲಂಗಿ, ಕುಂಬಳ, ನುಗ್ಗೆ, ಗಡ್ಡೆಕೋಸು, ಹೂವಿನ ಬೆಳೆಗಳಾದ ಚೆಂಡುಹೂವು, ಸೇವಂತಿಗೆ ಬೆಳೆಯುತ್ತಿದ್ದಾರೆ.

‘ಕೀಟ ಮತ್ತು ರೋಗ ನಿರ್ವಹಣೆಗೆ ಬೇವಿನ ಬೀಜದ ಕಷಾಯ, ಹಳದಿ ಅಂಟು ಪಟ್ಟಿ, ಮೋಹಕ ಬಲೆ ಬಳಸುತ್ತಿದ್ದೇನೆ. ಕೃಷಿಗೆ ಕಾರ್ಮಿಕರು ಲಭಿಸುತ್ತಿಲ್ಲ. ಹೀಗಾಗಿ, ಯಂತ್ರೋಪಕರಣಗಳ ಮೊರೆ ಹೋಗಿದ್ದೇನೆ. ಟ್ರ್ಯಾಕ್ಟರ್, ಪವರ್ ಸ್ಪ್ರೇಯರ್, ರೊಟೊವೇಟರ್ ಮತ್ತು ಬೂಮರ್ ಸ್ಪ್ರೆಯರ್ ಬಳಸಿ ಕೃಷಿ ಚಟುವಟಿಕೆ ಸರಳ ಮಾಡಿಕೊಂಡಿದ್ದೇನೆ’ ಎಂದು ನವಿಕ್ರಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**
ಕೋಳಿ ಸಾಕಣೆ: ಲಕ್ಷಾಂತರ ಆದಾಯ

ದೊಡ್ಡಬಳ್ಳಾಪುರ ತಾಲ್ಲೂಕು ತಗಳವಾರದ ವೆಂಕಮ್ಮ ಅವರು ಕೋಳಿ ಸಾಕಣೆಯನ್ನೇ ಉಪ ಕಸುಬು ಮಾಡಿಕೊಂಡು ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ. ರಾಗಿ, ಜೋಳ ಬೆಳೆ ಕೈಕೊಟ್ಟಾಗ ಕೋಳಿ ಸಾಕಣೆ ಅವರ ಕೈಹಿಡಿದಿದೆ.

‘15 ಸಾವಿರ ಕೋಳಿ ಸಾಕಣೆ ಮಾಡಿದ್ದು, ನಿತ್ಯ 6 ಸಾವಿರ ಮೊಟ್ಟೆ ಮಾರುತ್ತಿದ್ದೇನೆ. ವಾರ್ಷಿಕ ₹ 6 ಲಕ್ಷ ಆದಾಯ ಇದೆ. ಫಾರಂ ತಳಿ ಕೋಳಿ ಜತೆಗೆ ನಾಟಿ ಕೋಳಿ ಸಾಕಣೆ ಆದಾಯ ಮೂಲವಾಗಿದೆ’ ಎಂದು ವೆಂಕಮ್ಮ ಹೇಳಿದರು.

ಇವರು ಖಾಸಗಿ ಅರಣ್ಯವನ್ನು ಬೆಳೆಸಿದ್ದಾರೆ. ಮಹೋಗನಿ, ಹುಣಸೆ, ಸಿಲ್ವರ್‌ ಓಕ್‌, ತೇಗ, ಹಲಸು, ಸುಬಾಬುಲ್‌, ನೇರಳೆ ಮರಗಳು ಬೃಹತ್‌ ಆಗಿ ಬೆಳೆದಿವೆ. ಭವಿಷ್ಯದಲ್ಲಿ ಈ ಮರಗಳು ವರಮಾನ ನೀಡಲಿವೆ ಎಂದು ಹೇಳಿದರು.

*

ಸಾವಯವ ಕೃಷಿಗೆ ಆದ್ಯತೆ ನೀಡಿದ್ಧೇನೆ. ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಜೀವಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರದಿಂದ ಜಮೀನಿನ ಫಲವತ್ತತೆ ಹೆಚ್ಚಿಸಿದ್ದೇನೆ.
-ಸಿ.ನವಿಕ್ರಮ್, ಕೃಷಿ ಸಾಧಕ, ದೊಡ್ಡಬಳ್ಳಾಪುರ

*

ಕೃಷಿಯನ್ನು ಶ್ರದ್ಧೆಯಿಂದ ಮಾಡಿದರೆ ಲಾಭ ಗಳಿಸಲು ಸಾಧ್ಯ. ಆನ್‌ಲೈನ್‌ನಲ್ಲಿ ಮಾಹಿತಿ ತಿಳಿದು ನಾನೇ ನೇರವಾಗಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದೇನೆ.
-ಎಚ್‌.ಜಿ.ಗೋಪಾಲಗೌಡ,  ಹಿತ್ತನಹಳ್ಳಿ, ಶಿಡ್ಲಘಟ್ಟ ತಾಲ್ಲೂಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು