ಮಂಗಳವಾರ, ಆಗಸ್ಟ್ 3, 2021
24 °C

ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ ನಿರ್ಬಂಧ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಸಗಟು ಮಾರುಕಟ್ಟೆಗಳ ಮಳಿಗೆಗಳು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ವಹಿವಾಟು ಪುನರಾರಂಭಿಸುವುದಕ್ಕೆ ಬಿಬಿಎಂಪಿ ಅನುಮತಿ ನೀಡಿದೆ. ವ್ಯಾಪಾರ ವಹಿವಾಟಿನ ಮೇಲೆ ವಿಧಿಸಿದದ ನಿರ್ಬಂಧ ತೆರವಿನ ಆದೇಶ ಕೈ ಸೇರುತ್ತಿದ್ದಂತೆಯೇ ಕೆ.ಆರ್‌. ಮಾರುಕಟ್ಟೆಯ ಕೆಲವು ಮಳಿಗೆಗಳು ಗುರುವಾರವೇ ಕಾರ್ಯಾರಂಭ ಮಾಡಿವೆ.

ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಈ ಎರಡೂ ಮಾರುಕಟ್ಟೆಗಳಲ್ಲಿ ವ್ಯಾ‍ಪಾರ ವಹಿವಾಟು ಸ್ಥಗಿತಗೊಂಡಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸಲಾಗಿದೆ. ಆದರೂ, ಈ ಎರಡು ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಉಂಟಾಗುವ ಸಾಧ್ಯತೆ ಹೆಚ್ಚು ಇದ್ದುದರಿಂದ ಇವುಗಳಲ್ಲಿ ವಹಿವಾಟು ಪುನರಾರಂಭ ಮಾಡಲು ಬಿಬಿಎಂಪಿ ಅನುಮತಿ ನೀಡಿರಲಿಲ್ಲ. ಈ ಮಾರುಕಟ್ಟೆಗಳ ಪುನರಾರಂಭಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಇಲ್ಲಿನ ವರ್ತಕರ ಸಂಘಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದವು.

‘ಹೆಚ್ಚೂ ಕಡಿಮೆ ಮೂರು ತಿಂಗಳುಗಳಿಂದ ವ್ಯಾಪಾರ ವಹಿವಾಟು ನಡೆಯದ ಕಾರಣ ಈ ಎರಡೂ ಮಾರುಕಟ್ಟೆಗಳ ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಮಾರುಕಟ್ಟೆಗಳನ್ನು ನೆಚ್ಚಿಕೊಂಡಿದ್ದ ರೈತರಿಗೂ ಇದರಿಂದ ಸಮಸ್ಯೆ ಆಗಿತ್ತು. ಇಲ್ಲಿನ ಮಳಿಗೆಗಳು ವಹಿವಾಟು ಪುನರಾರಂಭ ಮಾಡಲು ಬಿಬಿಎಂಪಿಯು ಅನುಮತಿ ನೀಡಿರುವುದು ಸ್ವಾಗತಾರ್ಹ’ ಎಂದು ಕಲಾಸಿಪಾಳ್ಯ ಸಗಟು ಮಾರುಕಟ್ಟೆಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೆ.ಆರ್‌.ಮಾರುಕಟ್ಟೆ ಆದೇಶ ಇವತ್ತು ಸಿಕ್ಕಿದೆ. ಏಪ್ರಿಲ್‌ ಕೊನೆಯವಾರದಿಂದ ಬಂದ್‌ ಆಗಿದ್ದ ಕೆ.ಆರ್‌.ಮಾರುಕಟ್ಟೆ ಭಾಗಶಃ ಆರಂಭವಾಗಿವೆ. ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆ ವಹಿವಾಟನ್ನು ಆರಂಭಿಸಲಿದ್ದೇವೆ. ಕಲಾಸಿಪಾಳ್ಯದ ಸಗಟು ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರ ಮಾಡಿದ್ದರಿಂದ ಇಲ್ಲಿನ ವರ್ತಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು’ ಎಂದು ಅವರು ತಿಳಿಸಿದರು.

‘ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನುಸರಿಸಿ ವಹಿವಾಟು ನಡೆಸಲಿದ್ದೇವೆ. ಇನ್ನು ಕೋವಿಡ್‌ನಿಂದ ಲಾಕ್‌ಡೌನ್‌ ಮಾಡಬೇಕಾದ ಪರಿಸ್ಥಿತಿ ಬಂದರೂ ಸಗಟು ಮಾರುಕಟ್ಟೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬಾರದು. ಇದರಿಂದ ವರ್ತಕರಿಗೆ, ರೈತರಿಗೆ ಹಾಗೂ ಗ್ರಾಹಕರಿಗೆ ಅನನುಕೂಲವಾಗಲಿದೆ’ ಎಂದರು.

–0–

ಬಿಬಿಎಂಪಿ ವಿಧಿಸಿರುವ ಷರತ್ತುಗಳೇನು?

* ವರ್ತಕರು ಹಾಗೂ ಗ್ರಾಹಕರು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಹಾಗೂ ನಡವಳಿಕೆಗಳನ್ನು ತಪ್ಪದೇ ಪಾಲಿಸಬೇಕು

* ವ್ಯಾಪಾರಿಗಳು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು

* ಮಳಿಗೆಯ ಮುಂದೆ ಹಳದಿ ಬಣ್ಣದ ಚೌಕಾಕಾರದ ಗುರುತು ಹಾಕಬೇಕು, ಗ್ರಾಹಕರು ತಮ್ಮ ಸರದಿಗಾಗಿ ಅದರಲ್ಲೇ ಕಾಯಬೇಕು

* ಮಳಿಗೆದಾರರು ಕೋವಿಡ್‌ ಲಸಿಕೆ ಕಾರ್ಯಕ್ರಮ ಹಾಗೂ ಕೋವಿಡ್‌ ಪರೀಕ್ಷೆಗಳ ಸದುಪಯೋಗಪಡೆಯಬೇಕು

* ವರ್ತಕರು ಹಾಗೂ ಗ್ರಾಹಕರು ಪರಸ್ಪರ ಅಂತರ ಕಾಪಾಡಬೇಕು

* ಮಳಿಗೆಗಳಲ್ಲಿ ಶುಚಿತ್ವ ಕಾಪಾಡಬೇಕು

* ವರ್ತಕರು ತಮ್ಮ ಗ್ರಾಹಕರ ದೇಹದ ಉಷ್ಣಾಂಶ ತಪಾಸಣೆಗೆ ವ್ಯವಸ್ಥೆ ಹೊಂದಿರಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು