ಸೋಮವಾರ, ಜೂನ್ 27, 2022
26 °C
ನಗರದೊಳಗೆ ಪ್ರಯಾಣ ದುಬಾರಿ–ಕಿರಿಕಿರಿ

ಬಿಎಂಟಿಸಿ ಬಸ್‌ಗಳಿಲ್ಲದೆ ತೊಂದರೆ: ಆಟೊದವರಿಗೆ ದುಪ್ಪಟ್ಟು ದರ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನವೂ ಮುಂದುವರಿಯಿತು. ನಗರದ ಮೆಜೆಸ್ಟಿಕ್‌, ಸ್ಯಾಟಲೈಟ್‌ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ಶುಕ್ರವಾರ ಖಾಸಗಿ ಬಸ್‌ಗಳು ಕಾರ್ಯಾಚರಣೆಗೆ ಇಳಿದವು. 

ಬಿಎಂಟಿಸಿಯ 100 ಬಸ್ಸುಗಳು ಸೇರಿದಂತೆ ನಿಗಮದ 673ಕ್ಕೂ ಹೆಚ್ಚು ಬಸ್ಸುಗಳು ರಸ್ತೆಗಿಳಿದಿದ್ದರಿಂದ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚು ತೊಂದರೆಯಾಗಲಿಲ್ಲ. ಆದರೆ, ಖಾಸಗಿ ಬಸ್‌ಗಳನ್ನು ಕರೆಸಿ, ಸರ್ಕಾರಿ ಬಸ್‌ಗಳಿಗೂ ಕಾರ್ಯಾಚರಣೆಗೆ ಅವಕಾಶ ನೀಡಿದ್ದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಖಾಸಗಿ ಬಸ್‌ಗಳ ಮಾಲೀಕರು, ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.

‘ಎರಡು ದಿನದಿಂದ ನಾವು ಸೇವೆ ಒದಗಿಸುತ್ತಿದ್ದೇವೆ. ಈಗ ಸರ್ಕಾರಿ ಬಸ್‌ಗಳೂ ಕಾರ್ಯಾಚರಣೆ ಆರಂಭಿಸಿವೆ. ಒಂದು ಊರಿಗೆ ತೆರಳಲು ಕನಿಷ್ಠ ₹7000 ಮೊತ್ತದ ಡೀಸೆಲ್ ಹಾಕಿಸಬೇಕು. ಈಗ ಜನರೆಲ್ಲ ಸರ್ಕಾರಿ ಬಸ್‌ಗೆ ತೆರಳಿದರೆ ನಮಗೆ ನಷ್ಟವಾಗುತ್ತದೆ’ ಎಂದು ಖಾಸಗಿ ಬಸ್‌ನ ಚಾಲಕರೊಬ್ಬರು ದೂರಿದರು.

‘ಸರ್ಕಾರಿ ಬಸ್‌ಗಳಲ್ಲಿ ಜನ ಹೋಗಬಾರದು ಎಂಬ ಉದ್ದೇಶ ನಮ್ಮದಲ್ಲ. ಆದರೆ, ಸೇವೆ ಒದಗಿಸಿ ಎಂದು ನಮ್ಮನ್ನು ಕರೆಸಿದ್ದಾರೆ. ನಾವು ಬೆಳಿಗ್ಗೆಯಿಂದ ಪ್ರಯಾಣಿಕರಿಗೆ ಕಾಯುತ್ತಿದ್ದೇವೆ. ನಿಮ್ಮ ಸೇವೆ ಬೇಡ ಎಂದು ಮೊದಲೇ ಹೇಳಿದರೆ ನಾವು ಬರುತ್ತಿರಲಿಲ್ಲ. ಈಗ ಸೇವೆ ತೆಗೆದುಕೊಳ್ಳುವುದಾಗಿ ಕರೆಸಿ ಸುಮ್ಮನೆ ನಿಲ್ಲಿಸಿದರೆ ನಮಗೆ ಅನ್ಯಾಯವಾಗುತ್ತದೆ’ ಎಂದು ಮೈಸೂರು ರಸ್ತೆಯಲ್ಲಿನ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಚಾಲಕರೊಬ್ಬರು ಅಳಲು ತೋಡಿಕೊಂಡರು.

ಕೆಲವು ಚಾಲಕರು ಸರ್ಕಾರಿ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಖಾಸಗಿ ಬಸ್‌ ಮಾಲೀಕರು ಮತ್ತು ಚಾಲಕರ ಸಂಘದ ಮುಖ್ಯಸ್ಥರು ಬಂದು ಮನವೊಲಿಸಿದ ನಂತರ ಎರಡೂ ವಲಯದ ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಪೊಲೀಸ್‌ ಭದ್ರತೆಯಲ್ಲಿ ಸಂಚರಿಸಿದವು.

ನಗರದೊಳಗೆ ಪರದಾಟ: ಹೊರ ಊರಿಗೆ ಕರೆದುಕೊಂಡು ಹೋಗಲು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ನಗರದೊಳಗೆ ಈ ಎರಡೂ ಬಸ್‌ಗಳ ಸೇವೆ ಇಲ್ಲದೆ ಪ್ರಯಾಣಿಕರು ಪರದಾಟ ನಡೆಸಬೇಕಾಯಿತು.

‘ಬಿಎಂಟಿಸಿ ಬಸ್‌ ಪಾಸ್‌ ತೆಗೆದುಕೊಂಡೂ ವ್ಯರ್ಥವಾದಂತಾಗಿದೆ. ಸ್ವಂತ ವಾಹನವೂ ಇಲ್ಲ. ಆಟೊದವರು ದುಪ್ಪಟ್ಟು ಹಣ ಕೇಳುತ್ತಾರೆ. ಬಡ ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಸಾರ್ವಜನಿಕ ಸಾರಿಗೆ ಸುಗಮವಾಗಿ ನಡೆಯಲು ಬೇಕಾದ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.

*
ಸ್ವಂತ ವಾಹನ ಇಲ್ಲ. ನಮ್ಮ ಬಡಾವಣೆಗಳಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿಲ್ಲ. ಪಾಸ್‌ ತೆಗೆದುಕೊಂಡೂ ವ್ಯರ್ಥವಾಗುತ್ತಿದೆ. ಸರ್ಕಾರ ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
–ಜಯಶ್ರೀ ಉಮತಾರ, ಖಾಸಗಿ ಶಾಲೆ ಶಿಕ್ಷಕಿ 

*
ಯಲಹಂಕದಿಂದ ಶಿವಾಜಿನಗರಕ್ಕೆ ಕೆಲಸಕ್ಕೆ ಬರಬೇಕು. ಎರಡೂ ದಿನಗಳಿಂದ ದಿನಕ್ಕೆ 300 ಆಟೊಗೆ ಖರ್ಚಾಗುತ್ತಿದೆ. ದುಡಿದ ಹಣವನ್ನೆಲ್ಲ ಪ್ರಯಾಣಕ್ಕೇ ಸುರಿಯಬೇಕಾಗಿದೆ.
–ಸಿ.ಆರ್. ಪೂರ್ಣಿಮಾ, ಖಾಸಗಿ ಉದ್ಯೋಗಿ


ಬೆಂಗಳೂರು ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪೊಲೀಸ್ ಭದ್ರತೆಯಲ್ಲಿ ಮಂಗಳೂರಿಗೆ ಹೊರಟ ಕೆಎಸ್‌ಆರ್‌ಟಿಸಿ ಬಸ್ –ಪ್ರಜಾವಾಣಿ ಚಿತ್ರ: ಅನೂಪ್ ರಾಘ. ಟಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು