ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ಗೋಳು; ಸಂಜೆ ನಿರಾಳ

ಪೊಲೀಸರ ಭದ್ರತೆಯಲ್ಲಿ ಬಸ್‌ ಸಂಚಾರ: ಕರ್ತವ್ಯಕ್ಕೆ ಬಂದವರಿಗೆ ಹೂವು * ಆಟೊದವರಿಂದ ಹೆಚ್ಚಿನ ದರ ವಸೂಲಿ
Last Updated 14 ಡಿಸೆಂಬರ್ 2020, 20:02 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರ ಮುಂದುವರಿದಿದ್ದರಿಂದಾಗಿ ನಗರದಲ್ಲಿ ಸೋಮವಾರವೂ ಬಸ್‌ಗಳ ಸಂಚಾರವಿಲ್ಲದೇ ಪ್ರಯಾಣಿಕರು ಗೋಳು ಅನುಭವಿಸಿದರು. ಮುಷ್ಕರ ಹಿಂಪಡೆದ ನೌಕರರು, ಸಂಜೆ ಕರ್ತವ್ಯಕ್ಕೆ ಹಾಜರಾದ ನಂತರ ಪ್ರಯಾಣಿಕರು ನಿರಾಳರಾದರು.

ನಗರದ 45 ಡಿಪೊಗಳಲ್ಲೂ ಬಸ್‌ಗಳು ನಿಂತಿದ್ದು, ಸೋಮವಾರ ಬೆಳಿಗ್ಗೆ ಕೆಲ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾದರು. ಪೊಲೀಸರ ಭದ್ರತೆಯಲ್ಲಿ ಬಸ್‌ ಓಡಿಸಿದರು. ಮಧ್ಯಾಹ್ನದ ವೇಳೆಗೆ ಆ ಬಸ್‌ಗಳ ಸಂಚಾರವೂ ಬಂದ್ ಆಗಿತ್ತು.

ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಪೀಣ್ಯ ಬಸವೇಶ್ವರ ನಿಲ್ದಾಣ ಹಾಗೂ ಸುತ್ತಮುತ್ತಲ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಅಮಾವಾಸ್ಯೆ ಆಗಿದ್ದರಿಂದ ಹೊರ ಜಿಲ್ಲೆಗಳಲ್ಲಿ ದೇವರ ದರ್ಶನಕ್ಕೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಕಾದರೂ ಬಸ್‌ಗಳು ಸಿಗಲಿಲ್ಲ.

ಖಾಸಗಿ ವಾಹನ ಮಾಡಿಕೊಂಡು ಕೆಲವರು, ನಿಗದಿತ ಸ್ಥಳಗಳಿಗೆ ಹೋದರು. ಹಲವರು ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸು ಮನೆಯತ್ತ ತೆರಳಿದ್ದು ಕಂಡುಬಂತು.

ಆಸ್ಪತ್ರೆ, ಸರ್ಕಾರಿ ಕೆಲಸ ಹಾಗೂ ಹಲವು ಕೆಲಸಕ್ಕಾಗಿ ನಿತ್ಯವೂ ಲಕ್ಷಾಂತರ ಮಂದಿ ಬೆಂಗಳೂರು ಮೂಲಕ ಸಂಚರಿಸುತ್ತಾರೆ. ಆದರೆ, ಬಹುತೇಕರಿಗೆ ಸೋಮವಾರ ಹೆಚ್ಚಿನ ತೊಂದರೆ ಉಂಟಾಯಿತು. ಮುಷ್ಕರ ಹಿಂಪಡೆದಿರುವುದಾಗಿ ಕೆಲ ಮುಖಂಡರು, ಭಾನುವಾರ ರಾತ್ರಿ ಹೇಳಿದ್ದರು. ಹೀಗಾಗಿ, ಹಲವರು ಬಸ್‌ ಸಿಗಹುದೆಂದು ನಿಲ್ದಾಣಕ್ಕೆ ಬಂದು ಪರದಾಡುವಂತಾಯಿತು.

‘ಅಮಾವಾಸ್ಯೆ ಆಗಿದ್ದರಿಂದ ಕುಟುಂಬ ಸಮೇತ ಮನೆ ದೇವರಿಗೆ ಹೊರಟಿದ್ದೆವು. ಆದರೆ, ಇಲ್ಲಿ ನೋಡಿದರೆ ಬಸ್ಸಿಲ್ಲ. ಖಾಸಗಿ ವಾಹನ ಮಾಡಿಕೊಂಡು ಹೋಗುವಷ್ಟು ಶಕ್ತಿ ನಮಗಿಲ್ಲ’ ಎಂದು ಕಾರ್ಮಿಕ ಮಹಿಳೆ ನಾಗಮ್ಮ ಹೇಳಿದರು.

ಶ್ರೀರಾಮಪುರದ ಶಂಕರ್, ‘ನಗರದಲ್ಲಿರುವ ಸಂಬಂಧಿಕರ ಗೃಹಪ್ರವೇಶಕ್ಕೆ ಐದು ದಿನಗಳ ಹಿಂದೆ ಬಂದಿದ್ದೆ. ಸೋಮವಾರದಿಂದ ಬಸ್‌ ಆರಂಭವಾಗುತ್ತದೆ ಎಂದು ತಿಳಿದು, ಪತ್ನಿ, ಮಕ್ಕಳು ಹಾಗೂ ತಂದೆ–ತಾಯಿ ಜೊತೆ ನಿಲ್ದಾಣಕ್ಕೆ ಬಂದೆ. ಆದರೆ, ಇಲ್ಲಿ ಬಸ್ಸಿಲ್ಲ’ ಎಂದು ಅಳಲು ತೋಡಿಕೊಂಡರು.

ಕರ್ತವ್ಯಕ್ಕೆ ಬಂದವರಿಗೆ ಹೂವು: ಮುಷ್ಕರದ ನಡುವೆಯೇ ಪೊಲೀಸರ ಭದ್ರತೆಯಲ್ಲಿ ಕೆಲ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಿದವು.

ಮೆಜೆಸ್ಟಿಕ್‌ ನಿಲ್ದಾಣದಿಂದ ವಿವಿಧ ಮಾರ್ಗಗಳಿಗೆ ಬಿಎಂಟಿಸಿ ಬಸ್‌ಗಳನ್ನು ಕಳುಹಿಸಲಾಯಿತು. ಕರ್ತವ್ಯಕ್ಕೆ ಬಂದ ಚಾಲಕ ಹಾಗೂ ನಿರ್ವಾಹಕರಿಗೆ ಗುಲಾಬಿ ಹೂವು ನೀಡಿ ಕಳುಹಿಸಲಾಯಿತು. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ನೇತೃತ್ವದಲ್ಲಿ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮಾರ್ಗಮಧ್ಯೆ ಬಸ್ಸಿಗೆ ಯಾವುದೇ ಹಾನಿ ಆಗದಂತೆ ಹಾಗೂ ಕರ್ತವ್ಯ ನಿರತ ನೌಕರರ ಮೇಲೆ ಯಾವುದೇ ಹಲ್ಲೆಯಾಗದಂತೆ ಪೊಲೀಸರು ನಿಗಾ ವಹಿಸಿದ್ದರು.

ಸ್ಯಾಟಲೈಟ್ ಬಸ್‌ ನಿಲ್ದಾಣದಿಂದಲೂ ಮೈಸೂರಿನ ಕಡೆ ಬೆಳಿಗ್ಗೆ 12 ಬಸ್‌ಗಳು ಸಂಚರಿಸಿದವು. ಅದಾದ ನಂತರ, ಬಸ್ ಸಂಚಾರ ಬಂದ್ ಆಯಿತು. ಈ ನಿಲ್ದಾಣದಲ್ಲೂ ಪ್ರಯಾಣಿಕರು ಪರದಾಡಿದರು.

ಮೆಟ್ರೊ, ಆಟೊ, ಕ್ಯಾಬ್‌ಗೆ ಬೇಡಿಕೆ: ಬಸ್‌ಗಳ ಸಂಚಾರವಿಲ್ಲದಿದ್ದರಿಂದ ಪ್ರಯಾಣಿಕರು, ಪರ್ಯಾಯ ಸಾರಿಗೆ ವ್ಯವಸ್ಥೆ ಮೊರೆ ಹೋದರು. ಮೆಟ್ರೊ, ಆಟೊ ಹಾಗೂ ಕ್ಯಾಬ್‌ಗಳಿಗೆ ಬೇಡಿಕೆ ಬಂದಿತ್ತು.

ಮೆಜೆಸ್ಟಿಕ್‌ನಲ್ಲಿ ಬಸ್‌ ಸಿಗದವರು, ಸಮೀಪದಲ್ಲೇ ಇದ್ದ ಮೆಟ್ರೊ ನಿಲ್ದಾಣಕ್ಕೆ ಹೋಗಿ ರೈಲಿನಲ್ಲಿ ಪ್ರಯಾಣಿಸಿದರು. ಕೆಲ ಆಟೊದವರು, ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಿದರು.

91 ಚಾಲಕರ ವಿರುದ್ಧ ಪ್ರಕರಣ
ಹೆಚ್ಚಿನ ದರ ವಸೂಲಿ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಆಟೊ ಸೇರಿದಂತೆ ಕೆಲ ಖಾಸಗಿ ವಾಹನಗಳನ್ನು ತಪಾಸಣೆ ನಡೆಸಿ ಎಚ್ಚರಿಕೆ ನೀಡಿದರು.

‘ಹೆಚ್ಚಿನ ದರ ವಸೂಲಿ ಹಾಗೂ ಕರೆದ ಕಡೆ ಹೋಗದ 91 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಟಿಸ್ ನೀಡಲಾಗಿದೆ’ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೋಡಿಹಳ್ಳಿ ನೇರ ಹೊಣೆ’
ಶಿವಮೊಗ್ಗ: ಬಸ್‌ ಪ್ರಯಾಣಿಕರಿಗೆ ನಾಲ್ಕು ದಿನಗಳು ಆದ ತೊಂದರೆಗೆ ಸಮಾಜಘಾತುಕ ಶಕ್ತಿ ಕೋಡಿಹಳ್ಳಿ ಚಂದ್ರಶೇಖರ್ ಕಾರಣ. ಇಂಥವರ ಬಗ್ಗೆ ಕೆಎಸ್ಆರ್‌ಟಿಸಿ ನೌಕರರು ಎಚ್ಚರ ವಹಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ಒಂದೇ ಒಂದು ಬೇಡಿಕೆ ಈಡೇರಿಸಲಿಲ್ಲ: ಎಂಟಿಬಿ ಬೇಸರ
ಬೆಂಗಳೂರು:
‘ರಾಜ್ಯ ರಸ್ತೆ ಸಾರಿಗೆ ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಿದೆ. ಆದರೆ, ನಮ್ಮ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಂ.ಟಿ.ಬಿ.ನಾಗರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ನಿವಾಸದಲ್ಲಿ ಸಾರಿಗೆ ನೌಕರರ ಮುಷ್ಕರದ ಮಾತುಕತೆ ಬಳಿಕ ಕಂದಾಯ ಸಚಿವ ಅಶೋಕ ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ಆಗ ಅಲ್ಲಿಯೇ ಇದ್ದ ಎಂ.ಟಿ.ಬಿ.ನಾಗರಾಜ್‌ ಅವರಿಗೆ ಸುದ್ದಿಗಾರರು, ‘ಸಾರಿಗೆ ನೌಕರರ 9 ಬೇಡಿಕೆ ಈಡೇರಿಸಿದರು. ನಿಮ್ಮ ಒಂದೇ ಒಂದು ಬೇಡಿಕೆಯನ್ನೂ ಈಡೇರಿಸಲಿಲ್ಲವಲ್ಲ’ ಎಂದು ಕಾಲೆಳೆದರು.

‘ಹೌದಣ್ಣ ನಮ್ಮ ಒಂದೇ ಒಂದು ಬೇಡಿಕೆ ಈಡೇರಿಸಲಿಲ್ಲ. ಎಷ್ಟು ದಿನ ಕಾಯಬೇಕೋ ಗೊತ್ತಿಲ್ಲ’ ಎಂದರು.

‘ಆದಷ್ಟು ಬೇಗ ಈಡೇರುತ್ತದೆ’ ಎಂದು ಅಶೋಕ ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT