ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಎಸ್‌ಆರ್‌ಟಿಸಿ’ ಕೆಲಸ; ₹ 18 ಕೋಟಿ ವಂಚನೆ ?

* ಠಾಣೆಗೆ ದೂರು ಕೊಟ್ಟ ಅಭ್ಯರ್ಥಿಗಳು * ಅಮಾನತ್ತಾಗಿದ್ದ ಚಾಲಕ ಸೇರಿ ಇಬ್ಬರ ಬಂಧನ
Last Updated 17 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ 500ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಸುಮಾರು ₹ 18 ಕೋಟಿ ಪಡೆದು ವಂಚಿಸಿರುವ ಆರೋಪದ ಮೇಲೆ ಇಬ್ಬರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

‘ಹಗರಿ ಬೊಮ್ಮನಹಳ್ಳಿಯ ಮಂಜುನಾಥ್ ಹಾಗೂ ಅನಿಲ್ ಬಂಧಿತರು. ಕೆಎಸ್‌ಆರ್‌ಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್‌ನನ್ನು ದುರ್ನಡತೆ ತೋರಿದ್ದಕ್ಕಾಗಿ ಇತ್ತೀಚೆಗಷ್ಟೇ ಅಮಾನತು ಮಾಡಲಾಗಿತ್ತು. ಆತನೇ ಅನಿಲ್ ಜೊತೆ ಸೇರಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ವಂಚಿಸುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ, ನಿರ್ವಾಹಕ, ಸಂಚಾರಿ ನಿರೀಕ್ಷಕ ಸೇರಿದಂತೆ ಹಲವು ಹುದ್ದೆಗಳನ್ನು ಕೊಡಿಸುವುದಾಗಿ ಆರೋಪಿಗಳು, ಅಭ್ಯರ್ಥಿಗಳಿಗೆ ಆಮಿಷವೊಡ್ಡುತ್ತಿದ್ದರು. ‘ನಮಗೆ ಎಲ್ಲ ಹಿರಿಯ ಅಧಿಕಾರಿಗಳ ಪರಿಚಯವಿದೆ. ಅವರ ಮೂಲಕ ನೇರವಾಗಿ ಹುದ್ದೆಗೆ ನೇಮಕ ಮಾಡಿಸಲಾಗುವುದು’ ಎಂದೂ ಹೇಳುತ್ತಿದ್ದರು.’

‘ಆರೋಪಿಗಳ ಮಾತು ನಂಬಿದ್ದ ಬೆಳಗಾವಿ, ವಿಜಯಪುರ, ಬಳ್ಳಾರಿ, ಗದಗ, ಚಿತ್ರದುರ್ಗ, ದಾವಣಗೆರೆ, ರಾಯಚೂರು ಹಾಗೂ ಹಲವು ನಗರಗಳ ಅಭ್ಯರ್ಥಿಗಳು ಹಣ ನೀಡಿದ್ದರು. ಆದರೆ, ಅವರಿಗೆ ಆರೋಪಿ ಯಾವುದೇ ಕೆಲಸ ಕೊಡಿಸಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಬೇಸತ್ತ ಅಭ್ಯರ್ಥಿಗಳು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ಅಧಿಕಾರಿ ತಿಳಿಸಿದರು.

ಸುಮಾರು ₹3.50 ಕೋಟಿಗೆ ದಾಖಲೆ ಲಭ್ಯ: ‘ಒಟ್ಟು ₹ 18 ಕೋಟಿ ವಂಚನೆ ಆಗಿರುವುದಾಗಿ ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ. ಅಭ್ಯರ್ಥಿಗಳು ಆರೋಪಿಗಳಿಗೆ ನೀಡಿದ್ದಾರೆ ಎನ್ನಲಾದ ಸುಮಾರು ₹ 3.50 ಕೋಟಿಗೆ ಮಾತ್ರ ದಾಖಲೆಗಳು ಸಿಕ್ಕಿವೆ. ಉಳಿದ ಹಣದ ದಾಖಲೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಕಾರಿನ ಮೇಲೆ ಕರ್ನಾಟಕ ಸರ್ಕಾರ ಫಲಕ; ‘ವಂಚನೆಯಿಂದ ಗಳಿಸಿದ್ದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು. ಕಾರು ಖರೀದಿಸಿದ್ದ ಆರೋಪಿ ಮಂಜುನಾಥ್, ‘ಕರ್ನಾಟಕ ಸರ್ಕಾರ’ ಎಂಬುದಾಗಿ ಕಾರಿನ ಮೇಲೆ ಫಲಕ ಹಾಕಿಸಿಕೊಂಡಿದ್ದ. ಅದೇ ಕಾರಿನಲ್ಲೇ ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಸುತ್ತಾಡುತ್ತಿದ್ದ. ತಾನೊಬ್ಬ ಸರ್ಕಾರದಲ್ಲಿ ಪ್ರಭಾವಿ ವ್ಯಕ್ತಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ’ ಎಂದೂ ಅಧಿಕಾರಿ ವಿವರಿಸಿದರು.

‘ಆರೋಪಿಗಳ ಹೆಸರಿನ ಖಾತೆಗಳಲ್ಲಿದ್ದ ಹಣ ಹಾಗೂ ಅವರು ಬಳಸುತ್ತಿದ್ದ ಕಾರು ಜಪ್ತಿ ಮಾಡಲಾಗಿದೆ. ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT