ಮಂಗಳವಾರ, ನವೆಂಬರ್ 24, 2020
19 °C

‘ಕಾರ್ಮಿಕ ಇಲಾಖೆ ಕಚೇರಿ ಸ್ಥಳಾಂತರ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬನ್ನೇರುಘಟ್ಟದ ಕಾರ್ಮಿಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮತ್ತು ನಿರೀಕ್ಷಕರ ಕಚೇರಿಯನ್ನು ತುಮಕೂರು ರಸ್ತೆಯಲ್ಲಿನ ಬಾಗಲಗುಂಟೆಗೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ಅಸಂಘಟಿತ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರು ಬೆಂಗಳೂರು ದಕ್ಷಿಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಕಾರ್ಮಿಕರಿಗೆ ಸರ್ಕಾರವು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಸೌಲಭ್ಯ ಪಡೆಯಲು ಕಾರ್ಮಿಕರು ಇದೇ ಕಚೇರಿಗೆ ಭೇಟಿ ನೀಡುತ್ತಿದ್ದರು. ಈಗ ಕಚೇರಿಯನ್ನು ಬಾಗಲಗುಂಟೆಗೆ ಸ್ಥಳಾಂತರಿಸಿದರೆ ಈ ಭಾಗದ ಕಾರ್ಮಿಕರು ಸುಮಾರು 40 ಕಿ.ಮೀ. ದೂರ ಹೋಗಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕಚೇರಿಯನ್ನು ಸ್ಥಳಾಂತರಿಸಬಾರದು’ ಎಂದು ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗಾಗಿ ಹೋರಾಡುತ್ತಿರುವ ‘ಆಕಾಂಕ್ಷೆ’ ಸಂಘಟನೆಯ ಅಧ್ಯಕ್ಷ ಟಿ. ವಿಜಯ್‌ ಒತ್ತಾಯಿಸಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಅನೇಕ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಸೌಲಭ್ಯವನ್ನಾದರೂ ಪಡೆಯಬೇಕೆಂದರೆ ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಇದಕ್ಕಾಗಿ ಹಲವು ದಾಖಲೆಗಳನ್ನು ಕಚೇರಿಗೆ ಒದಗಿಸಬೇಕು. ಈ ಸಂಕಷ್ಟದಲ್ಲಿ 35ರಿಂದ 40 ಕಿ.ಮೀ ಓಡಾಡಲೂ ಕಾರ್ಮಿಕರಿಗೆ ತೊಂದರೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೂ, ಈ ಕುರಿತು ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಪತ್ರ ಬರೆದಿದ್ದು, ಕಚೇರಿ ಸ್ಥಳಾಂತರಿಸಬಾರದು ಎಂದು ಮನವಿ ಮಾಡಿದೆ.

ಕಾರ್ಮಿಕರಿಗೆ ಆಗಲಿರುವ ಸಮಸ್ಯೆ ಮನಗಂಡಿರುವ ಕಂದಾಯ ಸಚಿವ ಆರ್. ಅಶೋಕ ಮತ್ತು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಪತ್ರ ಬರೆದಿದ್ದು, ಕಚೇರಿ ಸ್ಥಳಾಂತರಿಸಬಾರದು ಎಂದು ಕೋರಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು