ಸೋಮವಾರ, ಮೇ 17, 2021
31 °C
80ಕ್ಕೂ ಹೆಚ್ಚು ಜೋಪಡಿಗಳ ತೆರವು l ನಾವೂ ಭಾರತೀಯರೇ, ದಾಖಲೆ ಪರಿಶೀಲಿಸಿ ಎಂದ ನಿವಾಸಿಗಳು

ಅವಶೇಷಗಳ ಎದುರು ಕಾರ್ಮಿಕರ ಕಣ್ಣೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲಸ ಅರಸಿ ಬಂದಿರುವ ಕಾರ್ಮಿಕರಿಗೆ ಜೋಪಡಿಯೇ ಸೂರಾ ಗಿತ್ತು. ನಿತ್ಯವೂ ದುಡಿದು ಬಂದು ವಿಶ್ರಾಂತಿ ಪಡೆಯುವ ತಾಣವೂ ಆಗಿತ್ತು. ಯಾವುದೇ ಸೂಚನೆ ನೀಡದೇ ಜೋಪಡಿಗಳನ್ನು ನೆಲಸಮ ಮಾಡಲಾಗಿದ್ದು, ಕಾರ್ಮಿಕರ ಬದುಕು ದುಸ್ತರವಾಗಿದೆ.

ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದ ಮಂತ್ರಿ ಇಸ್ಪನ್ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಹೊಂದಿಕೊಂಡಿರುವ ಖುಲ್ಲಾ ಜಾಗದಲ್ಲಿ 300ಕ್ಕೂ ಹೆಚ್ಚು ಜೋಪಡಿಗಳಿದ್ದವು. ಆ ಪೈಕಿ 80ಕ್ಕೂ ಹೆಚ್ಚು ಜೋಪಡಿಗಳನ್ನು ಭಾನುವಾರ ಕೆಡವಲಾಗಿದೆ.

ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನಲಾದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಈ ತೆರವು ಮಾಡಿದ್ದಾರೆ. ‘ಸ್ಥಳೀಯರಿಗೆ ಬಾಂಗ್ಲಾ ಪ್ರಜೆಗಳ ಪಟ್ಟ ಕಟ್ಟಿ ನಡೆಸಲಾದ ತೆರವು ಅನಧಿಕೃತವಾದದ್ದು’ ಎಂಬ ಆರೋಪ ವ್ಯಕ್ತವಾಗಿದೆ.

‘ನಾವು ಭಾರತೀಯರು. ದಾಖಲೆಗಳನ್ನು ಒಮ್ಮೆ ನೋಡಿ’ ಎಂದು ಕಾರ್ಮಿಕರು ಗೋಗರೆದರೂ ಅಧಿಕಾರಿಗಳು ಸ್ಪಂದಿಸಿಲ್ಲ.  ಹೋರಾಟ ಗಾರರು ಹಾಗೂ ವಕೀಲರು ಸ್ಥಳಕ್ಕೆ ಬಂದು ಅಧಿಕಾರಿಗಳ ವರ್ತನೆ ಪ್ರಶ್ನಿಸಿದರು. ‘ತೆರವು ಮಾಡಲು ಹೇಳಿದವರು ಯಾರು? ಏನಾದರೂ ಆದೇಶವಿದೆಯಾ?’ ಎಂದು ಕೇಳಿದರು. ಅದಕ್ಕೆ ಉತ್ತರಿಸದ ಅಧಿಕಾರಿಗಳು, ಜೆಸಿಬಿ ಯಂತ್ರದ ಸಮೇತ ಸ್ಥಳದಿಂದ ಹೊರಟು ಹೋದರು. ಅವರ‍್ಯಾರೂ ಸೋಮವಾರ ಜೋಪಡಿಯತ್ತ ಸುಳಿಯಲಿಲ್ಲ.

ತಾಯಿ ಜೊತೆ ನಾನೂ ಬೀದಿಗೆ: ‘ನಾನು ಹಾಗೂ ತಾಯಿ ಆಸ್ಪತ್ರೆಯೊಂದರಲ್ಲಿ ಹೌಸ್ ಕಿಂಪಿಂಗ್ ಕೆಲಸ ಮಾಡುತ್ತೇವೆ. ನಾವಿಬ್ಬರೂ ಈಗ ಬೀದಿಗೆ ಬಂದಿದ್ದು, ರಸ್ತೆಯಲ್ಲೇ ವಸ್ತುಗಳನ್ನು ಇಟ್ಟುಕೊಂಡು ಕುಳಿತಿದ್ದೇವೆ’ ಎಂದು ದೆಹಲಿಯ ಹಲೀಮಾ ಅವರು ಅಳಲು ತೋಡಿಕೊಂಡರು.

ಮಣಿಪುರದ ಸುಬ್ರತ್, ‘ನಾವೆಲ್ಲ ಆದಿವಾಸಿಗಳು. ನಮ್ಮೂರಿನಲ್ಲಿ ಕೆಲಸ ಸಿಗಲಿಲ್ಲವೆಂದು ಇಲ್ಲಿಗೆ ಬಂದಿದ್ದೇವೆ. ನಾವೂ ಭಾರತೀಯರು. ಬದುಕುವ ಹಕ್ಕಿದೆ. ನಮಗೆ ಏಕೆ ಈ ಶಿಕ್ಷೆ’ ಎಂದು ಕಣ್ಣೀರಿಟ್ಟರು.

‘ನೀರಿನ ಟ್ಯಾಂಕರ್ ಬರಬಾರದೆಂದು ರಸ್ತೆ ಅಗೆಯಲಾಗಿದೆ. ತರಕಾರಿ ಹಾಗೂ ಅಗತ್ಯ ವಸ್ತುಗಳ ಮಾರಾಟ ನಿರ್ಬಂಧಿಸಲಾಗಿದೆ’ ಎಂದರು.

ಜೋಪಡಿಗೆ ಬಂದು ದಾಖಲೆ ಪರಿಶೀಲಿಸಲಿ: ತರಕಾರಿ ವ್ಯಾಪಾರಿ ಮೊಹಮ್ಮದ್ ನೂರ್ ಹುಸೈನ್, ‘ಪ್ರತಿಯೊಂದು ಜೋಪಡಿಗೂ ಬಂದು ಅಧಿಕಾರಿಗಳು ಪರಿಶೀಲನೆ ನಡೆಸಲಿ. ಎಲ್ಲ ದಾಖಲೆ ನೀಡುತ್ತೇವೆ. ಅವು ನಕಲಿ ಆಗಿದ್ದರೆ ನಮ್ಮನ್ನು ಜೈಲಿಗೆ ಹಾಕಲಿ. ಯಾರಾದರೂ ಬಾಂಗ್ಲಾದವರು ಸಿಕ್ಕರೂ ಬಂಧಿಸಲಿ’ ಎಂದು ಹೇಳಿದರು.

ಬಟ್ಟೆ ವ್ಯಾಪಾರಿ ಉಜ್ವಲ್, ‘ಸೈಕಲ್ ಮೇಲೆ ಬಟ್ಟೆ ಇಟ್ಟುಕೊಂಡು ಮಾರುತ್ತೇನೆ. ಜೋಪಡಿ ನಿವಾಸಿಗಳು ಬೀದಿಗೆ ಬಂದಿದ್ದು, ವ್ಯಾಪಾರ ಕಡಿಮೆ ಆಗಿದೆ. ಅವರನ್ನು ನೋಡಿದರೆ ಸಂಕಟವಾಗುತ್ತಿದೆ’ ಎಂದರು.

‘ಹುಷಾರಿಲ್ಲದ ತಂದೆ, ಪಿಯುಸಿ ಓದುವ ತಮ್ಮ’
‘ಹುಷಾರಿಲ್ಲದ ತಂದೆ ಹಾಗೂ ಪಿಯುಸಿ ಓದುವ ತಮ್ಮನನ್ನು ನೋಡಿಕೊಳ್ಳಬೇಕು. ಸೆಕ್ಯುರಿಟಿ ಕೆಲಸದಿಂದ ತಿಂಗಳಿಗೆ ₹ 18 ಸಾವಿರ ಬರುತ್ತದೆ. ಅದು ಯಾವುದಕ್ಕೂ ಸಾಲುವುದಿಲ್ಲ. ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ಜೋಪಡಿಯಲ್ಲಿ ಇದ್ದೆ’ ಎಂದು ಮಣಿಪುರದ ಕಾಲಾರಾಮ್‌ ಕರಮ್‌ ಹೇಳಿದರು.

‘ಕೆಲಸಕ್ಕೆ ಹೋಗಿದ್ದಾಗಲೇ ಜೋಪಡಿ ನೆಲಸಮ ಮಾಡಲಾಗಿದೆ. ಭಾನುವಾರ ರಾತ್ರಿ ರಸ್ತೆಯಲ್ಲೇ ಮಲಗಿದ್ದೆ’ ಎಂದರು.


Caption

ಜೋಪಡಿಯ ಬಾಲಕಿಗೆ ‘ಐಪಿಎಸ್’ ಆಗುವಾಸೆ
ಜೋಪಡಿಗಳಲ್ಲಿ 30ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅವರೆಲ್ಲರೂ ಸಮೀಪದ ‘ಸ್ವಪಕ್ಷ ಆಂಗ್ಲ ಮಾಧ್ಯಮ ಶಾಲೆ’ಗೆ ಹೋಗುತ್ತಾರೆ. ಜೋಪಡಿಗಳನ್ನು ತೆರವು ಮಾಡಿರುವುದರಿಂದ ಹಲವು ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರೆ.

ಅಳಿದುಳಿದ ಅವಶೇಷ ಎದುರು ಕುಳಿತಿದ್ದ ಮೂರನೇ ತರಗತಿ ವಿದ್ಯಾರ್ಥಿನಿ ಹಬೀಬಾ, ‘ಯಾರೋ ಬಂದು ಜೋಪಡಿ ಕೆಡವಿದರು. ಪುನಃ ಬರುವುದಾಗಿ ಹೇಳಿ ಹೋಗಿದ್ದಾರೆ. ಅಮ್ಮನಿಗೆ ತುಂಬಾ ಭಯವಾಗಿದೆ. ಆಕೆ ಜೊತೆ ಇರಲೆಂದು ಶಾಲೆಗೆ ಹೋಗಿಲ್ಲ’ ಎಂದಳು.

‘ಅಮ್ಮ ತುಂಬಾ ಕಷ್ಟಪಟ್ಟು ನನ್ನನ್ನು ಓದಿಸುತ್ತಿದ್ದಾಳೆ. ನಾನು ಮುಂದೆ ಐಪಿಎಸ್ ಅಧಿಕಾರಿ ಆಗುತ್ತೇನೆ. ಅಮ್ಮನಿಗೆ ರಕ್ಷಣೆ ನೀಡುತ್ತೇನೆ. ಬಡವರ ಮೇಲಾಗುವ ಅನ್ಯಾಯವನ್ನು ತಡೆದು ನ್ಯಾಯ ಒದಗಿಸುತ್ತೇನೆ’ ಎಂದು ಹೇಳಿದಳು. 

ಐದನೇ ತರಗತಿ ವಿದ್ಯಾರ್ಥಿನಿ ಮೀನಾ, ‘ಜೋಪಡಿಯಲ್ಲಿ ಸಾಕಷ್ಟು ಮಕ್ಕಳಿದ್ದಾರೆ. ಅವರೆಲ್ಲರಿಗೂ ಶಿಕ್ಷಣ ಸಿಗಬೇಕು. ನಾನು ಶಿಕ್ಷಕಿ ಆಗಿ ಅವರೆಲ್ಲರಿಗೂ ಪಾಠ ಮಾಡುತ್ತೇನೆ’ ಎಂದಳು. 

ಕಾನೂನುಬದ್ಧ ‘ಬಾಡಿಗೆ ಕರಾರು ಪತ್ರ’
‘ಖುಲ್ಲಾ ಜಾಗದಲ್ಲಿ ಸಾಲು ಸಾಲು ಜೋಪಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ. ಜಾಗದ ಮಾಲೀಕರು ಹಾಗೂ ಕಾರ್ಮಿಕರು ₹ 20 ಬಾಂಡ್ ಮೇಲೆ ‘ಬಾಡಿಗೆ ಕರಾರು ಪತ್ರ’ ಸಹ ಮಾಡಿಸಿಕೊಂಡಿದ್ದಾರೆ.

‘ಜೋಪಡಿ ಅಳತೆಗೆ ತಕ್ಕಂತೆ ಪ್ರತಿ ತಿಂಗಳು ₹ 3 ಸಾವಿರದಿಂದ ₹ 7 ಸಾವಿರವರೆಗೂ (ನೀರು+ವಿದ್ಯುತ್ ಪ್ರತ್ಯೇಕ) ಬಾಡಿಗೆ ಕೊಡುತ್ತೇವೆ. ಜೋಪಡಿ ಬಗ್ಗೆ ಮಾಲೀಕರಿಂದ ಯಾವುದೇ ಆಕ್ಷೇಪವಿಲ್ಲ’ ಎಂದು ಕಾರ್ಮಿಕರು ಹೇಳಿದರು.

ಜೋಪಡಿಗಳನ್ನು ನೋಡಿದರೆ ಯಾವುದೇ ಮೂಲಸೌಕರ್ಯವಿಲ್ಲ. ಹೆಚ್ಚಿನ ಬಾಡಿಗೆ ಆಸೆಗಾಗಿ ಮಾಲೀಕರು ಬಾಡಿಗೆ ನೀಡುತ್ತಿರುವ ದೂರುಗಳು ಇವೆ. 


ತೆರವು ಮಾಡಿದ್ದ ಜೋಪಡಿಯಲ್ಲಿದ್ದ ಬೆಡ್‌ ಹೊತ್ತೊಯ್ದ ಬಾಲಕ

ಜೋಪಡಿ ತೆರವು ಪ್ರಕರಣ: ಜಂಟಿ ಆಯುಕ್ತರಿಂದ ವಿಚಾರಣೆ
ಜೋಪಡಿಗಳನ್ನು ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆಯೇ ತೆರವು ಮಾಡಿದ ಬಗ್ಗೆ ಮಹದೇವಪುರ ವಲಯದ ಜಂಟಿ ಆಯುಕ್ತರಿಂದ ವಿಚಾರಣೆ ನಡೆಸಲು ಪಾಲಿಕೆ ನಿರ್ಧರಿಸಿದೆ.

ಪಾಲಿಕೆ ಮಾರತ್ತಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಒಬ್ಬರು ಜೋಪಡಿ ತೆರವುಗೊಳಿಸಲು ಭದ್ರತೆ ಒದಗಿಸುವಂತೆ ಮಾರತಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್‌ ಅವರಿಗೆ ಮನವಿ ಸಲ್ಲಿಸಿದ್ದರು.

‘ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆಯೇ ಜೋಪಡಿಗಳನ್ನು ತೆರವು ಮಾಡಲಾಗಿದೆ. ಪಾಲಿಕೆಯ ಎಇಇ ಅವರು ವಲಯದ ಮುಖ್ಯ ಎಂಜಿನಿಯರ್ ಹಾಗೂ ಜಂಟಿ ಆಯುಕ್ತರ ಗಮನಕ್ಕೂ ತಾರದೆ ಪೊಲೀಸ್‌ ಠಾಣೆಗೆ ಪತ್ರ ಬರೆದಿದ್ದರೆ, ಅದು ತಪ್ಪಾಗುತ್ತದೆ. ಈ ಪ್ರಕರಣ ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ’ ಎಂದು ಮಹದೇವಪುರ ವಲಯದ ಉಸ್ತುವಾರಿ ವಹಿಸಿರುವ ವಿಶೇಷ ಆಯುಕ್ತ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೋಪಡಿ ತೆರವುಗೊಳಿಸುವುದಿದ್ದರೂ ಅದರಲ್ಲಿ ನಿವಾಸಿಗಳಿಗೆ ಮೊದಲೇ ಸೂಚನೆ ನೀಡಬೇಕಾಗುತ್ತದೆ. ಅಷ್ಟಕ್ಕೂ ತೆರವುಗೊಂಡ ಬಹುತೇಕ ಜೋಪಡಿಗಳು ಖಾಸಗಿ ಜಮೀನಿನಲ್ಲಿದ್ದವು. ಅವುಗಳನ್ನು ತೆರವುಗೊಳಿಸಲು ನಮಗೂ ಅಧಿಕಾರ ಇಲ್ಲ. ಪೊಲೀಸರು ಈ ಕೃತ್ಯ ನಡೆಸಿದ್ದರೆ ಅದೂ ತಪ್ಪಾಗುತ್ತದೆ. ಜಂಟಿ ಆಯುಕ್ತರು ಈ ಬಗ್ಗೆ ವರದಿ ನೀಡುವಾಗ ಪೊಲೀಸ್‌ ಅಧಿಕಾರಿಗಳಿಂದಲೂ ಈ ಬಗ್ಗೆ ವಿವರಣೆ ಕೇಳಲಿದ್ದಾರೆ’ ಎಂದರು.

‘ಗಡಿಪಾರಿಗೆ ಲಕ್ಷಾಂತರ ರೂಪಾಯಿ ಖರ್ಚು’ 
‘ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ಬಾಂಗ್ಲಾದೇಶದವರನ್ನು ಗುರುತಿಸಿ ಗಡಿಪಾರು ಮಾಡಲು ಲಕ್ಷಾಂತರ ರೂಪಾಯಿ ಬೇಕು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತೆರವು ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇತ್ತೀಚೆಗೆ ಬಂಧಿಸಿದ್ದ 60 ಬಾಂಗ್ಲಾದವರನ್ನು ಗಡಿಪಾರು ಮಾಡಲು ₹ 6 ಲಕ್ಷ ಖರ್ಚಾಯಿತು. ಗಡಿಪಾರು ವೇಳೆ ಪಶ್ಚಿಮ ಬಂಗಾಳದ ಪೊಲೀಸರೂ ಸಹಾಯ ಮಾಡಲಿಲ್ಲ’ ಎಂದರು.

 ‘13 ಸ್ಥಳಗಳಲ್ಲಿ ಅಕ್ರಮವಾಸಿಗಳು’
‘ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳ ತೆರವಿಗೆ ಬಿಬಿಎಂಪಿ ಅಧಿಕಾರಿಗಳಿಗೆ ಭದ್ರತೆ ನೀಡಿದ್ದೇವೆ. ಅಕ್ರಮವಾಗಿ ನಿವಾಸಿಗಳು ಉಳಿದುಕೊಂಡಿರುವ 13 ಸ್ಥಳಗಳನ್ನು ನಾವೂ ಗುರುತಿಸಿದ್ದೇವೆ. ಒತ್ತುವರಿ ಜಾಗ ಹಾಗೂ ಖಾಸಗಿ ಜಾಗಗಳಲ್ಲಿ ನೆಲೆಸಲು ಅಕ್ರಮ ನಿವಾಸಿಗಳಿಗೆ ಸ್ಥಳೀಯರೇ ಸಹಾಯ ಮಾಡುತ್ತಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು