ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್: ಗುತ್ತಿಗೆ ಜಮೀನು ವಾಪಸ್‌ಗೆ ಆದೇಶ

Last Updated 25 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಉದ್ಯಾನ ಕಲಾಸಂಘ ಮತ್ತು ದಿ ನರ್ಸರಿಮನ್‌ ಕೋ–ಆಪರೇಟಿವ್‌ ಸೊಸೈಟಿಗೆ ಲಾಲ್‌ಬಾಗ್‌ನಲ್ಲಿ ನೀಡಲಾಗಿದ್ದ ಜಮೀನಿನ ಗುತ್ತಿಗೆ ಮುಂದುವರಿಸದಂತೆ ಸರ್ಕಾರ ಆದೇಶಿಸಿದೆ.

ಮೈಸೂರು ಉದ್ಯಾನ ಕಲಾಸಂಘ 28 ಗುಂಟೆ ಹಾಗೂ ನರ್ಸರಿಮೆನ್ ಕೋ–ಆಪ್‌ರೇಟಿವ್ ಸೊಸೈಟಿ 1 ಎಕರೆ 65 ಸೆಂಟ್ಸ್‌ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದವು. ಈ ಗುತ್ತಿಗೆಯನ್ನು ನವೀಕರಿಸಲು ಅರ್ಜಿ ಸಲ್ಲಿಸಲಾಗಿತ್ತು.

ಸರ್ಕಾರ ಅ.18ರಂದು ಹೊರಡಿಸಿರುವ ಆದೇಶದಲ್ಲಿ, ‘ಈ ನರ್ಸರಿಗಳಲ್ಲಿ ಕಸಿ, ಸಸಿಗಳನ್ನು ಉತ್ಪಾದಿಸುವುದು, ತಾರಸಿ ತೋಟ, ಇಕೆಬಾನ, ಕೈತೋಟಗಳು ಹಾಗೂ ಫಲಪುಷ್ಟ ಪ್ರದರ್ಶನ ಮತ್ತು ರೈತರಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಳ್ಳಲು ಜಮೀನನ್ನು ಗುತ್ತಿಗೆಗೆ ನೀಡಲಾಗಿತ್ತು. ಈ ಸಂಸ್ಥೆಗಳಿಗೆ ಸರ್ಕಾರ ಯಾವ ಉದ್ದೇಶಕ್ಕಾಗಿ ಜಮೀನು ನೀಡಿತ್ತೋ ಆ ಉದ್ದೇಶ ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪಿಲ್ಲ. ಆದ್ದರಿಂದ ಪ್ರಸ್ತಾವಿತ ಜಮೀನಿನ ಗುತ್ತಿಗೆಯನ್ನು ರದ್ದುಗೊಳಿಸಿದೆ’ ಎಂದು ತಿಳಿಸಲಾಗಿದೆ.

ಈ ಎರಡು ಸಂಸ್ಥೆಗಳು ಬಳಸುತ್ತಿರುವ ಕಟ್ಟಡಗಳಲ್ಲಿ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಪ್ರಾರಂಭಿಸಬೇಕು. ಈ ಸೊಸೈಟಿಗಳಲ್ಲಿ ನಿಯೋಜನೆಗೊಂಡಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ತಕ್ಷಣವೇ ವಾಪಸ್‌ ಪಡೆದುಕೊಳ್ಳಬೇಕು. ವಿಶ್ವವಿಖ್ಯಾತ ಫಲಪುಷ್ಪ ಪ್ರದರ್ಶನದಲ್ಲಿ ಶೇಕಡ 95ರಷ್ಟು ಭಾಗವನ್ನು ಇಲಾಖೆಯ ಅಧಿಕಾರಿಗಳೇ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಮುಂದೆ, ಮೈಸೂರು ಉದ್ಯಾನ ಕಲಾ ಸಂಘದ ಹಸ್ತಕ್ಷೇಪವಿಲ್ಲದೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತೋಟಗಾರಿಕೆ ಇಲಾಖೆ ಪ್ರದಾನ ಕಾರ್ಯದರ್ಶಿ ಅವರು ಇಲಾಖೆ ನಿರ್ದೇಶಕರಿಗೆ ಅ.19ರಂದು ಪತ್ರ ಬರೆದು, ‘ಸರ್ಕಾರದ ಆದೇಶವನ್ನು ಕೂಡಲೇ ಪಾಲಿಸಬೇಕು. ಅಲ್ಲದೆ, ಬಾಡಿಗೆ ಮೊತ್ತ ಹಾಗೂ ಇನ್ನಿತರೆ ಬಾಕಿ ಮೊತ್ತ ಪಾವತಿಸುವವರೆಗೆ ಈ ಎರಡೂ ಸಂಘ–ಸಂಸ್ಥೆಗಳ ಬ್ಯಾಂಕ್‌ ಖಾತೆಗಳ ವಹಿವಾಟು ತಡೆಹಿಡಿಯಬೇಕು. ಅವರು ಯಾವುದೇ ವಾಣಿಜ್ಯ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ನರ್ಸರಿಮೆನ್ ಕೋ–ಆಪರೇಟಿವ್ ಸೊಸೈಟಿಯು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಸೆಕ್ಷನ್ 4(ಜಿ) ಅಡಿಯಲ್ಲಿ ಹಲವಾರು ಟೆಂಡರ್‌ಗಳನ್ನು ಪಡೆದುಕೊಂಡಿದೆ. ಟೆಂಡರ್‌ ಪ್ರಕ್ರಿಯೆಯಿಲ್ಲದೆ ನೇರವಾಗಿ ಬಿಬಿಎಂಪಿಯ ಹಲವಾರು ಕೋಟಿಗಳ ಟೆಂಡರ್‌ಗಳ ಫಲಾನುಭವಿಯಾಗಿದೆ. 4ಜಿ ವಿನಾಯಿತಿಯನ್ನೂ ಅ.20ರಂದು ರದ್ದುಗೊಳಿಸಲಾಗಿದೆ.

ಮೈಸೂರು ಉದ್ಯಾನ ಕಲಾಸಂಘ, ದಿ ನರ್ಸರಿಮೆನ್ ಕೋ–ಆಪರೇಟಿವ್ ಸೊಸೈಟಿ ಎರಡೂ ಸರ್ಕಾರಿ ಸಂಸ್ಥೆಗಳೆಂದು ಭಾವಿಸಲಾಗುತ್ತಿತ್ತು. ಅದರಂತೆಯೇ ಹಲವು ಗುತ್ತಿಗೆಗಳನ್ನು ಪಡೆದು ಲಾಭ ಮಾಡಿಕೊಂಡಿವೆ ಎನ್ನಲಾಗಿದೆ.

‘ನಗರದಲ್ಲಿ ಸಾವಿರಾರು ನರ್ಸರಿಗಳಿವೆ. ಇಂತಹದ್ದೇ ನರ್ಸರಿಗಳಿಗೆ ಲಾಲ್‌ಬಾಗ್‌ನಲ್ಲಿ ಜಮೀನು ನೀಡಿ, ಗುತ್ತಿಗೆ ಮುಂದುವರಿಸುವಲ್ಲಿ ಯಾವುದೇ ಪ್ರಯೋಜನವಿಲ್ಲ’ ಎಂದು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿದರು.

2016ರಲ್ಲೇ ಗುತ್ತಿಗೆ ಮುಕ್ತಾಯ

ನರ್ಸರಿಮೆನ್ ಕೋ–ಆಪರೇಟಿವ್‌ ಸೊಸೈಟಿಗೆ ಗುತ್ತಿಗೆ ಆಧಾರದಲ್ಲಿ ನೀಡಿಲಾಗಿದ್ದ 1 ಎಕರೆ 65 ಸೆಂಟ್ಸ್‌ ಜಾಗದ ಗುತ್ತಿಗೆ 2016ರ ಏಪ್ರಿಲ್‌ಗೆ ಮುಕ್ತಾಯವಾಗಿದೆ. ಸೊಸೈಟಿಯು ಈ ಗುತ್ತಿಗೆ ಅವಧಿ ಮುಂದುವರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಮೈಸೂರು ಉದ್ಯಾನ ಕಲಾಸಂಘದ ಕಾರ್ಯ ಚಟುವಟಿಕೆಗಳಿಗೆ ನೀಡಲಾಗಿದ್ದ 28 ಗುಂಟೆ ಜಮೀನಿನ ಗುತ್ತಿಗೆ 2016ರ ಮಾರ್ಚ್‌ 3ಕ್ಕೆ ಅಂತ್ಯಗೊಂಡಿತ್ತು. ಏಪ್ರಿಲ್ 2016ರಿಂದ 5 ವರ್ಷದ ಅವಧಿಗೆ ಪ್ರತಿ ವರ್ಷ ₹25 ಸಾವಿರ ತೋಟಗಾರಿಕೆ ಇಲಾಖೆಗೆ ಪಾವತಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಗುತ್ತಿಗೆ ಕಳೆದ ವರ್ಷವೇ ಮುಗಿದಿದೆ.

ಇವೆರಡೂ ಸೊಸೈಟೀಸ್ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ಖಾಸಗಿ ಘಟಕಗಳಾಗಿವೆ. ಒಂದಿಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ, ಸೊಸೈಟಿಗಳಲ್ಲಿನ ಬಹುಪಾಲು ಸದಸ್ಯರು ಖಾಸಗಿ ವ್ಯಕ್ತಿಗಳು ಅಥವಾ ನಿವೃತ್ತ ಸರ್ಕಾರಿ ನೌಕರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT