ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಹೊರವಲಯದಲ್ಲಿ ಸ್ಮಶಾನಕ್ಕೆ ಜಾಗ

ದಫನಭೂಮಿಗಳಲ್ಲಿ ಮೃತದೇಹ ಹೂಳಲು ಜಾಗದ ಕೊರತೆ
Last Updated 1 ಜುಲೈ 2020, 22:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ದಫನಭೂಮಿಗಳಲ್ಲಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಜಾಗದ ಕೊರತೆ ಎದುರಾಗಿರುವುದರಿಂದ ನಗರದ ಹೊರವಲಯಗಳಲ್ಲಿ ಸ್ಮಶಾನಗಳಿಗೆ ಜಾಗ ಹುಡುಕುವಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 97 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಅವರನ್ನು ಅವರ ಸಮುದಾಯದ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ದಫನಭೂಮಿಗಳಲ್ಲಿ ಅಥವಾ ಚಿತಾಗಾರಗಳಲ್ಲಿ ಕೋವಿಡ್‌ ರೋಗಿಯ ಅಂತ್ಯಕ್ರಿಯೆ ನಡೆಸಿದರೆ, ಸೋಂಕು ನಿವಾರಕ ಸಿಂಪಡಿಸಿ ಆ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಸಹಜ ಸಾವಿಗೆ ಒಳಗಾದ ವ್ಯಕ್ತಿಗಳ ಅಂತ್ಯಕ್ರಿಯೆಗೆಇದರಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ಕೆಲವು ಸ್ಮಶಾನಗಳಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲು ಬಂಧುಗಳು ನಾಲ್ಕೈದು ಗಂಟೆ ಕಾಯಬೇಕಾದ ಸ್ಥಿತಿ ಇದೆ.

‘ನಗರದಲ್ಲಿ ದಫನ ಭೂಮಿಗಳಲ್ಲಿ ಜಾಗದ ಕೊರತೆ ಇರುವುದರಿಂದ ಹೊರವಲಯದಲ್ಲಿ ಈ ಉದ್ದೇಶಕ್ಕೆ ಜಾಗ ಗುರುತಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ. ಸೂಕ್ತ ಜಾಗ ಹುಡುಕಿ ಬಿಬಿಎಂಪಿ ವಶಕ್ಕೆ ನೀಡುವಂತೆ ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ‘ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟರೆ ವಿದ್ಯುತ್‌ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಸುವುದು ವೈಜ್ಞಾನಿಕವಾಗಿ ಸೂಕ್ತ. ಆದರೆ, ಕೆಲವು ಸಮುದಾಯದವರು ಮೃತದೇಹವನ್ನು ಮಣ್ಣಿನಲ್ಲಿ ಹೂಳುವ ಸಂಪ್ರದಾಯ ಪಾಲಿಸುತ್ತಾರೆ. ಅವರ ಧಾರ್ಮಿಕ ನಂಬಿಕೆ ಚ್ಯುತಿ ಉಂಟುಮಾಡಲು ನಾವು ಬಯಸುವುದಿಲ್ಲ. ಮೃತರ ಬಂಧುಗಳು ಬಯಸಿದಂತೆಯೇ ಅಂತ್ಯಕ್ರಿಯೆ ನಡೆಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೋವಿಡ್‌ನಿಂದ ಮೃತಪಟ್ಟವರನ್ನು ವಿದ್ಯುತ್‌ ಚಿತಾಗಾರದಲ್ಲೇ ಅಂತ್ಯಕ್ರಿಯೆ ನಡೆಸುವ ಚಿಂತನೆ ಪಾಲಿಕೆ ಮುಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಬಂಧುಗಳ ಹಿಂದೇಟು: ‘ಅಂತ್ಯಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಅವರ ಬಂಧುಗಳೂ ಹಿಂದೇಟು ಹಾಕಿದ ಉದಾಹರಣೆಗಳೂ ಇವೆ. ಅಂತಹ ಸಂದರ್ಭಗಳಲ್ಲಿ ಬಿಬಿಎಂಪಿ ಸಿಬ್ಬಂದಿಯೇ ಅವರ ಸಮುದಾಯದ ವಿಧಿವಿಧಾನಗಳ ಪ್ರಕಾರ ಮೃತದೇಹದ ಅಂತಿಮ ಕ್ರಿಯೆ ನಡೆಸಿದ್ದಾರೆ’ ಎಂದು ಆಯುಕ್ತರು ತಿಳಿಸಿದರು.

ನಗರದಲ್ಲಿ 9 ಕಡೆ ಸ್ಮಶಾನಕ್ಕೆ ಜಾಗ

ನಗರದ ಹೊರವಲಯಗಳಲ್ಲಿ ಹೊಸತಾಗಿ ಚಿತಾಗಾರ/ ದಫನಭೂಮಿಗಳನ್ನು ನಿರ್ಮಿಸಲು ಬಿಬಿಎಂಪಿ ಒಟ್ಟು 9 ಕಡೆ ಜಾಗ ಗುರುತಿಸಿದೆ. ಕೆಲವು ಜಾಗದಲ್ಲಿ ಸ್ಮಶಾನ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ. ಒಂದು ಕಡೆ ಬದಲಿ ಜಾಗಕ್ಕಾಗಿ ಹುಡುಕಾಟ ನಡೆದಿದೆ. ಎರಡು ಕಡೆ ಪಾಲಿಕೆಗೆ ಜಾಗ ಹಸ್ತಾಂತರವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT