ಗುರುವಾರ , ಆಗಸ್ಟ್ 18, 2022
25 °C

ಸಿ.ಡಿ.ಪ್ರಕರಣ: ಸಂತ್ರಸ್ತೆ ಪರ ವಕೀಲರ ‘ವೃತ್ತಿ ನೋಂದಣಿ’ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿ.ಡಿ.ಪ್ರಕರಣದ ಸಂತ್ರಸ್ತೆಗಿಂತಲೂ ಅವರ ಪರ ವಕೀಲ ಕೆ.ಎನ್‌.ಜಗದೀಶ್ ಕುಮಾರ್ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿದ್ದು, ಅವರ ವಕೀಲ ವೃತ್ತಿ ನೋಂದಣಿ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ.

‘ಕರ್ನಾಟಕ ವಕೀಲರ ಪರಿಷತ್‌ನಲ್ಲಿ ಕೆ.ಎನ್‌. ಜಗದೀಶ್‌ಕುಮಾರ್ ನೋಂದಣಿ ಮಾಡಿಸಿದ್ದಾರೆಯೇ? ಇಲ್ಲ, ನೋಂದಣಿ ವರ್ಗಾವಣೆ ಮಾಡಿಕೊಂಡಿದ್ದಾರೆಯೇ ? ಇದರ ಮಾಹಿತಿ ಇದ್ದರೆ ತಿಳಿಸಿ. ಆಕಸ್ಮಾತ್ ಎಲ್ಲಾದರೂ ನೋಂದಣಿ ಮಾಡಿಸಿದ್ದರೆ, ಕರ್ನಾಟಕದಲ್ಲಿ ವಕಾಲತ್ತು ಮಾಡಲು ಬರುವುದಿಲ್ಲ’ ಎಂದು ವಕೀಲ ಎಸ್‌. ಬಸವರಾಜ್ ಎಂಬುವರು ಪರಿಷತ್‌ಗೆ ಪತ್ರ ಬರೆದಿದ್ದಾರೆ.

ಅದಕ್ಕೆ ಉತ್ತರಿಸಿರುವ ಪರಿಷತ್ ವ್ಯವಸ್ಥಾಪಕ ಅರುಣ್ ಪೂಜಾರ, ‘ಕೆ.ಎನ್‌. ಜಗದೀಶ್‌ಕುಮಾರ್ ನಮ್ಮ ಪರಿಷತ್‌ನಲ್ಲಿ ನೋಂದಣಿ ಮಾಡಿಸಿಲ್ಲ. ನೋಂದಣಿ ವರ್ಗಾವಣೆಯನ್ನೂ ಪಡೆದಿಲ್ಲ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್‌ಕುಮಾರ್, ‘ನಾನು ದೆಹಲಿ ವಕೀಲರ ಪರಿಷತ್‌ ಸದಸ್ಯ. ಭಾರತೀಯ ವಕೀಲರ ಪರಿಷತ್ ಪರೀಕ್ಷೆ ಸಹ ಎದುರಿಸಿ ವಕೀಲನಾಗಲು ಅರ್ಹತೆ ಪಡೆದಿದ್ದೇನೆ. ವಕೀಲರ ಕಾಯ್ದೆ ಪ್ರಕಾರ, ದೇಶದ ಯಾವುದೇ ನ್ಯಾಯಾಲಯದಲ್ಲಿ ವಕಾಲತ್ತು ಮಾಡಬಹುದು’ ಎಂದಿದ್ದಾರೆ.

‘ಅತ್ಯಾಚಾರ ಸಂತ್ರಸ್ತೆ ಪರ ನಿಂತಿದ್ದಕ್ಕೆ ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಪ್ರಕರಣ ಕೈಬಿಡುವುದಿಲ್ಲ’ ಎಂದರು.

ವಕೀಲರ ಪರಿಷತ್‌ನಲ್ಲಿ ಅಭಿವೃದ್ಧಿ ಸ್ಟಾಂಪ್‌ ಹಗರಣ’
‘ವಕೀಲರ ಪರಿಷತ್‌ನಿಂದ ₹ 20 ಹಾಗೂ ₹ 30 ಅಭಿವೃದ್ಧಿ ಸ್ಟಾಂಪ್‌ ಮುದ್ರಿಸಲಾಗುತ್ತದೆ. ಅದನ್ನು ವಕಾಲತ್ತು ಸಮಯದಲ್ಲಿ ಲಗತ್ತಿಸಬೇಕು. ಆದರೆ, ಅದೇ ಸ್ಟಾಂಪ್‌ ಹೆಸರಿನಲ್ಲೇ ದೊಡ್ಡ ಹಗರಣವೇ ನಡೆದಿದೆ’ ಎಂದು ವಕೀಲರಾದ ಜಗದೀಶ್‌ಕುಮಾರ್ ಹಾಗೂ ಮಂಜುನಾಥ್ ಆರೋಪಿಸಿದರು.

ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡಿದ ಅವರು, ‘ವಕೀಲರಿಗೆ ಯಾವುದೇ ಸೌಕರ್ಯವಿಲ್ಲ. ಅವರ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸಲು ಅಭಿವೃದ್ಧಿ ಸ್ಟಾಂಪ್‌ ಮಾರಾಟ ಮಾಡಲಾಗುತ್ತಿದೆ. ಆದರೆ, ಸ್ಟಾಂಪ್ ಮುದ್ರಣ ಹಾಗೂ ಮಾರಾಟ ಬಗ್ಗೆ ಯಾವುದೇ ಲೆಕ್ಕ ಪರಿಶೋಧನೆಯೂ ಇದುವರೆಗೂ ಆಗಿಲ್ಲ. ಆ ಬಗ್ಗೆ ದೂರುಗಳೂ ಸಲ್ಲಿಕೆಯಾಗಿವೆ’ ಎಂದರು.

‘ಲಾಕ್‌ಡೌನ್‌ ವೇಳೆ ವಕೀಲರು ಕೆಲಸವಿಲ್ಲದೆ ನರಳಿದ್ದಾರೆ. ಸ್ಟಾಂಪ್‌ ಮಾರಾಟದ ಹಣದಿಂದ ವಕೀಲರಿಗೆ ಸಹಾಯ ಮಾಡಬಹುದಿತ್ತು. ಆದರೆ, ಪರಿಷತ್‌ನಿಂದ ಯಾವುದೇ ಸಹಾಯವೂ ಆಗಲಿಲ್ಲ. ಹೀಗಾದರೆ, ವಕೀಲರು ಸ್ಟಾಂಪ್‌ ಏಕೆ ಖರೀದಿಸಬೇಕು. ಇದರಲ್ಲಿ ದೊಡ್ಡ ಅಕ್ರಮವಿದ್ದು, ಅದನ್ನು ವಕೀಲರು ಪ್ರಶ್ನಿಸಬೇಕು’ ಎಂದೂ ಒತ್ತಾಯಿಸಿದರು.

‘ಸಿ.ಡಿ. ಪ್ರಕರಣ ಮುಗಿಯುತ್ತ ಬಂದಿದೆ. ಮುಗಿದ ಕೂಡಲೇ ಪರಿಷತ್‌ ಅಕ್ರಮಗಳ ವಿರುದ್ಧ ಹೋರಾಟ ಶುರು ಮಾಡುತ್ತೇವೆ. ನಾನು ವಕೀಲನಲ್ಲನೆಂದು ನನ್ನ ನೋಂದಣಿಯನ್ನೇ ನೀವು ಪ್ರಶ್ನಿಸಿದ್ದಿರಲ್ಲ ಬಸವರಾಜ್ ಅವರೇ, ನಿಮ್ಮ ಬಗ್ಗೆಯೂ ನಾನು ಪ್ರಶ್ನಿಸುತ್ತೇನೆ. ದಾಖಲೆ ಸಮೇತ’ ಎಂದೂ ಹೇಳಿದರು.

ನಕಲಿ ಸ್ಟಾಂಪ್‌: ವಕೀಲ ಮಂಜುನಾಥ್, ‘ನ್ಯಾಯಾಲಯದಲ್ಲಿ ನಕಲಿ ಸ್ಟಾಂಪ್‌ಗಳೂ ಸಿಗುತ್ತಿವೆ. ಅದು ಎಲ್ಲ ಸದಸ್ಯರಿಗೂ ಗೊತ್ತಿದೆ. ತೆಲಗಿ ರೀತಿಯಲ್ಲೇ ಈ ಹಗರಣವಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು