ಶುಕ್ರವಾರ, ಮಾರ್ಚ್ 5, 2021
30 °C
ಯತ್ನಾಳ, ಕಾಶಪ್ಪನವರ ಕಪಿಮುಷ್ಠಿಯಲ್ಲಿ ಸ್ವಾಮೀಜಿ: ಸಚಿವರ ಆರೋಪ

ರಾಜೀನಾಮೆ ಕೊಟ್ಟು ಶಾಸಕರಾಗಿ ಗೆದ್ದು ಬರಲಿ; ಯತ್ನಾಳ್‌ಗೆ ಮುರುಗೇಶ ನಿರಾಣಿ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಪಂಚಮಸಾಲಿ ಮಠಾಧೀಶ ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ತಮ್ಮ ಕಪಿಮುಷ್ಠಿಗೆ ತೆಗೆದುಕೊಂಡು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ ಎಂದು ಸಚಿವರಾದ ಸಿ.ಸಿ. ಪಾಟೀಲ ಮತ್ತು ಮುರುಗೇಶ ನಿರಾಣಿ ದೂರಿದರು.

ಪಂಚಮಸಾಲಿಗಳ 2 ಎ ಮೀಸಲಾತಿ ಹೋರಾಟವನ್ನು ವಿಜಯಾನಂದ ಕಾಶಪ್ಪನವರ ಅವರು ತಮ್ಮ ಕುಟುಂಬದ ಹೋರಾಟವಾಗಿ ಪರಿವರ್ತಿಸಿದರು. ಇದಕ್ಕೆ ಕಾಂಗ್ರೆಸ್‌ನ ‘ಬಿ’ ಟೀಮ್‌ ಆಗಿ ವರ್ತಿಸುತ್ತಿರುವ ಯತ್ನಾಳ ನೆರವಾದರು ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ... 

ಅರಮನೆ ಮೈದಾನದ ಸಮಾವೇಶದ ಬಳಿಕ ನಡೆದ ಘಟನೆಯಿಂದ ಪಂಚಮಸಾಲಿ ಸಮುದಾಯ ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಇವರಿಬ್ಬರೇ ಕಾರಣ. ಇವರಿಬ್ಬರು ಸ್ವಾಮೀಜಿಯನ್ನು ತಮ್ಮ ಕಪಿ ಮುಷ್ಠಿಗೆ ತೆಗೆದುಕೊಂಡಿದ್ದಾರೆ. ಈ ಹೋರಾಟದ ದಿಕ್ಕು ತಪ್ಪಿಸಿದ್ದು ಮಾತ್ರವಲ್ಲದೆ ದುರ್ಬಳಕೆ ಮಾಡಿಕೊಂಡು ಸ್ವಾರ್ಥ ಸಾಧನೆ ಮಾಡಿಕೊಂಡಿದ್ದಾರೆ ಎಂದು ಸಿ.ಸಿ. ಪಾಟೀಲ ತಿಳಿಸಿದರು.

ಅರಮನೆಯಲ್ಲಿ ಸಮಾವೇಶ ಮಾಡಿ ಹೋರಾಟ ಅಂತ್ಯಗೊಳಿಸುವ ಸಂಬಂಧ ತುಮಕೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಇಲ್ಲಿ ಸಮಾವೇಶ ಹೈಜಾಕ್‌ ಮಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದು, ಸರ್ಕಾರಕ್ಕೆ ಗಡುವು ನೀಡುವ ಮತ್ತು ಧರಣಿ ನಡೆಸುವ ವಿಚಾರಗಳು ಯಾರ ಗಮನಕ್ಕೂ ಬರಲಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ...  

ಸಮಾವೇಶದಲ್ಲಿ ಹಲವು ಬಾರಿ ಅವರ ಮನವೊಲಿಸುವ ಪ್ರಯತ್ನ ನಡೆಸಿದಾಗ ಒಪ್ಪುತ್ತಿದ್ದ ಸ್ವಾಮೀಜಿ, ಕಾಶಪ್ಪನವರ  ಬಂದು ಮಾತನಾಡಿದ ತಕ್ಷಣ ತಮ್ಮ ನಿಲುವು ಬದಲಿಸುತ್ತಿದ್ದರು. ಅಲ್ಲದೆ, ಸಮಾವೇಶದಲ್ಲಿ ಯತ್ನಾಳ ಮತ್ತು ಕಾಶಪ್ಪ ಅವರು ದುರುದ್ದೇಶದಿಂದ ಪ್ರಚೋದನಕಾರಿಯಾಗಿ ಮಾತನಾಡಿದರು. ತಮ್ಮ ಸ್ವಾರ್ಥಕ್ಕೆ ಸಮಾಜದ ವೇದಿಕೆ ಬಳಸಿಕೊಂಡಿದ್ದು ಖೇದಕರ ಎಂದು ಪಾಟೀಲ ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಇದ್ದಾಗ ಶಾಸಕರಾಗಿದ್ದ ಕಾಶಪ್ಪನವರ ಅವರು 2 ಎ ಮೀಸಲಾತಿ ಸಂಬಂಧಿಸಿದಂತೆ ಏನು ಹೋರಾಟ ಮಾಡಿದ್ದರು? ಆಗ ಏನೂ ಮಾಡದೇ ಈಗ ಬೂಟಾಟಿಕೆ ಮಾತನಾಡುತ್ತಿದ್ದಾರೆ. ಪಂಚಮಸಾಲಿ ಸಮಾಜ ಟ್ರಸ್ಟ್‌ಗೆ ತಾವೇ ಸ್ವಯಂ ಘೋಷಿತವಾಗಿ ಅಧ್ಯಕ್ಷ ಎಂದು ಕರೆದುಕೊಂಡಿದ್ದಾರೆ. ಅಧ್ಯಕ್ಷ ಎಂದು ಹೇಳಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಟ್ರಸ್ಟ್‌ ಪದಾಧಿಕಾರಿಗಳು ಪಕ್ಷಾತೀತ ವ್ಯಕ್ತಿ ಆಗಿರಬೇಕು. ಇವರನ್ನು ಅಧ್ಯಕ್ಷ ಎಂದು ಸಮಾಜದ ಯಾವುದೇ ವ್ಯಕ್ತಿ ಒಪ್ಪಲು ತಯಾರಿಲ್ಲ ಎಂದರು.

ಯತ್ನಾಳ್‌ಗೆ ಸವಾಲು: ಪಂಚಮಸಾಲಿ ಮಂತ್ರಿಗಳು ಮತ್ತು ಶಾಸಕರು ರಾಜೀನಾಮೆ ನೀಡಬೇಕು ಎಂದು ಯತ್ನಾಳ ಹೇಳಿದ್ದಾರೆ. ನಾವು ನಮ್ಮ ನಮ್ಮ ಕ್ಷೇತ್ರಗಳ ಎಲ್ಲ ಮತದಾರರ ಆಶೀರ್ವಾದದಿಂದ ಗೆದ್ದು ಬಂದಿದ್ದೇವೆ. ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಯವರು ನಮ್ಮನ್ನು ಮಂತ್ರಿ ಮಾಡಿದ್ದು. ಮೊದಲಿಗೆ ಅವರು (ಯತ್ನಾಳ) ರಾಜೀನಾಮೆ ಕೊಟ್ಟು, ವಿಜಯಪುರದಿಂದ ಸ್ವರ್ಧಿಸಿ ಗೆದ್ದು ಬರಲಿ. ಎಂದು ಸಚಿವ ಮುರಗೇಶ ನಿರಾಣಿ ಸವಾಲು ಹಾಕಿದರು.

ಇದನ್ನೂ ಓದಿ... 

ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು. ಇದರ ಔಚಿತ್ಯ ಏನಿತ್ತು? ಪಕ್ಷದ ಶಾಸಕನಾಗಿ ನಾಯಕತ್ವದ ವಿರುದ್ಧವೇ ಹರಿಹಾಯ್ದಿರುವುದು ಅಕ್ಷಮ್ಯ. ಯತ್ನಾಳ ಕಾಂಗ್ರೆಸ್‌ನ ಬಿ ಟೀಮ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ನಾವು ಸಚಿವರು ಮತ್ತು ಶಾಸಕರು ಸೇರಿ 2 ಎ ಗೆ ಸೇರಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಅದಕ್ಕೂ ನೀತಿ ನಿಯಮ ಎಂಬುದಿದೆ. ಮುಖ್ಯಮಂತ್ರಿಯವರು ಅಧ್ಯಯನ ನಡೆಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಿದ್ದಾರೆ. ವರದಿ ಬಂದ ಬಳಿಕ ಸೇರಿಸುವ ಕೆಲಸ ಆಗುತ್ತದೆ. ಅಲ್ಲಿಯವರೆಗೆ ಕಾಲಾವಕಾಶ ನೀಡಬೇಕಲ್ಲವೇ? ಅದನ್ನು ಬಿಟ್ಟು ನಾಳೆ ಮಾಡಿ ಎಂದು ಪಟ್ಟು ಹಿಡಿದು ಕುಳಿತರೆ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿಲ್ಲದ ಮಾತು ಎಂದು ಸ್ವಾಮೀಜಿಯವರಿಗೆ ತಿಳಿ ಹೇಳಿದರು.

ಆದ್ದರಿಂದ ಧರಣಿಯನ್ನು ಕೈಬಿಟ್ಟು, ಸರ್ಕಾರಕ್ಕೆ ಕಾಲಾವಕಾಶ ನೀಡಬೇಕು. ಸಾಕಷ್ಟು ಪ್ರಕರಣಗಳಲ್ಲಿ ಎಫ್‌ಐಆರ್‌ ಹಾಕಿಸಿಕೊಂಡಿರುವ ವ್ಯಕ್ತಿ ಸ್ವಯಂ ಘೋಷಿತವಾಗಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಆಗುವುದು ಶೋಭೆ ತರುವುದಿಲ್ಲ. ರಾಜಕೀಯದಿಂದ ಹೊರತಾದವರು ಪದಾಧಿಕಾರಿಗಳಾಗಿರಬೇಕು ಎಂದು ನಿರಾಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಮಹೇಶ ಕುಮಠಳ್ಳಿ, ಸಿದ್ದುಸವದಿ, ಕಳಕಪ್ಪ ಬಂಡಿ, ಶಂಕರ ಪಾಟೀಲ ಮುನೇನಕೊಪ್ಪ, ಮಹಂತೇಶ ದೊಡ್ಡ ದೊಡ್ಡನಗೌಡ ಇನ್ನು ಮುಂತಾದವರು ಇದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು