ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election | ಮತ ಎಣಿಕೆ: 28 ಕ್ಷೇತ್ರಗಳ ಕುತೂಹಲಕ್ಕೆ ಇಂದು ತೆರೆ

Published 3 ಜೂನ್ 2024, 23:46 IST
Last Updated 3 ಜೂನ್ 2024, 23:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮತದಾರರು ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕಾಗಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೊ ಅಥವಾ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಬೆನ್ನಿಗೆ ನಿಂತಿದ್ದಾರೊ ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ.

ಎಲ್ಲ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಏಕಕಾಲಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕಲಿದ್ದು, ಸಂಜೆಯೊಳಗೆ ಎಲ್ಲ ಕ್ಷೇತ್ರಗಳಲ್ಲೂ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ಏಪ್ರಿಲ್‌ 26 ಮತ್ತು ಮೇ 7ರಂದು ರಾಜ್ಯದ ತಲಾ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯವಾಗಿರುವುದು ಹಾಗೂ ಕಾಂಗ್ರೆಸ್‌ ಅಧಿಕಾರದಲ್ಲಿರುವ ದೊಡ್ಡ ರಾಜ್ಯವಾಗಿರುವ ಕಾರಣದಿಂದ ಕರ್ನಾಟಕದ ಫಲಿತಾಂಶದ ಕುರಿತು ತೀವ್ರ ಕುತೂಹಲ ಗರಿಗೆದರಿದೆ. ಚುನಾವಣೆ ಘೋಷಣೆಯಾದ ದಿನದಿಂದಲೂ ಇಲ್ಲಿನ ಫಲಿತಾಂಶದ ಕುರಿತು ಬಿರುಸಿನ ಚರ್ಚೆ ನಡೆಯುತ್ತಲೇ ಇದೆ.

ವಿಧಾನಸಭಾ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್‌, 135 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಭಾರಿ ಬಹುಮತ ಗಳಿಸಿತ್ತು. ಅದೇ ಮಾದರಿಯಲ್ಲಿ ಮತ್ತಷ್ಟು ‘ಗ್ಯಾರಂಟಿ’ ಯೋಜನೆಗಳ ಭರವಸೆಗಳನ್ನು ಮುಂದಿಟ್ಟು ಲೋಕಸಭಾ ಚುನಾವಣೆಯನ್ನು ಎದುರಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಈ ಬಾರಿ ಎರಡಂಕಿ ತಲುಪುವ ಖಚಿತ ವಿಶ್ವಾಸದಲ್ಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಜೆಡಿಎಸ್‌ ಜತೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದೆ. ಮೋದಿ ಜನಪ್ರಿಯತೆ ಮತ್ತು ಜೆಡಿಎಸ್‌ ಜತೆಗಿನ ಮೈತ್ರಿ ಹೆಚ್ಚು ಸ್ಥಾನ ತಂದುಕೊಡಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿದೆ.

ಬಿಜೆಪಿ– ಕಾಂಗ್ರೆಸ್‌ ಮಧ್ಯೆ ಜಿದ್ದಾಜಿದ್ದಿನ ಕಣದಂತಾಗಿದ್ದ ಕರ್ನಾಟಕದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಮಂಗಳವಾರದ ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ.

ರಾಜ್ಯದ 28 ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆ‌ ಪ್ರತಿ ಟೇಬಲ್‌ಗೆ ಮೂವರಂತೆ ಒಟ್ಟು 13,173 ಸಿಬ್ಬಂದಿ ಕನಿಷ್ಠ 19 ಸುತ್ತು, ಗರಿಷ್ಠ 34 ಸುತ್ತುಗಳ ಮತ ಎಣಿಕೆ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯೂ ನಡೆಯಲಿದೆ
ಫಲಿತಾಂಶ ಯಾರಿಗೆಲ್ಲ ನಿರ್ಣಾಯಕ?
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿಗಳಾಗಿದ್ದು, ಅವರಿಗೆಲ್ಲ ಗೆಲುವು ಪ್ರತಿಷ್ಠೆಯಾಗಿದೆ. ಬಿಜೆಪಿ ಹಿಂದಿಗಿಂತ ಹೆಚ್ಚು ಸ್ಥಾನ ಗಳಿಸುವುದು ಅಥವಾ ಹಿಂದೆ ಗೆದ್ದ ಕ್ಷೇತ್ರಗಳು ಕೈತಪ್ಪದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT