ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ನೀತಿ ಸಂಹಿತೆ ಜಾರಿ, ‘ಕಲಾ’ ಕ್ಷೇತ್ರಕ್ಕೂ ತಟ್ಟಿದ ಚುನಾವಣೆ ‘ಬಿಸಿ’

ರಂಗಮಂದಿರ ಕಾಯ್ದಿರಿಸಲು ಸಂಘ–ಸಂಸ್ಥೆಗಳು ನಿರಾಸಕ್ತಿ
Published 12 ಏಪ್ರಿಲ್ 2024, 0:30 IST
Last Updated 12 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆಯ ಬಿಸಿ ಸಾಂಸ್ಕೃತಿಕ ಲೋಕಕ್ಕೂ ತಟ್ಟಿದೆ. ರವೀಂದ್ರ ಕಲಾಕ್ಷೇತ್ರ ಸೇರಿ ನಗರದ ವಿವಿಧ ಸರ್ಕಾರಿ ರಂಗಮಂದಿರಗಳಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮಗಳು ರದ್ದಾಗುತ್ತಿದ್ದರೆ, ಹೊಸದಾಗಿ ಕಾಯ್ದಿರಿಸಲು ಸಂಘ–ಸಂಸ್ಥೆಗಳು ನಿರಾಸಕ್ತಿ ತೋರುತ್ತಿವೆ.  

ಏಪ್ರಿಲ್–ಮೇ ತಿಂಗಳು ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಪ್ರತಿ ವರ್ಷ ಈ ಅವಧಿಯಲ್ಲಿ ತಿಂಗಳು ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದರಿಂದಾಗಿ ಇಲ್ಲಿನ ಸರ್ಕಾರಿ ರಂಗಮಂದಿರಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಿರಲಿದೆ.

ಆದರೆ, ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ರಾಜಕಾರಣಿಗಳಿಗೆ ಆಹ್ವಾನ ನೀಡದೆ ಕಾರ್ಯಕ್ರಮ ನಡೆಸಲು ಇಲಾಖೆ ಸಂಘ–ಸಂಸ್ಥೆಗಳಿಗೆ ಸೂಚಿಸಿದೆ. ಬ್ಯಾನರ್ ಅಳವಡಿಕೆಗೆ ಅವಕಾಶ ನಿರಾಕರಣೆ ಸೇರಿ ಕೆಲ ನಿರ್ಬಂಧ ವಿಧಿಸಲಾಗಿದೆ. ನೀತಿ ಸಂಹಿತೆಯು ಏಪ್ರಿಲ್ ತಿಂಗಳ ಜತೆಗೆ ಮೇ ತಿಂಗಳೂ ಜಾರಿಯಲ್ಲಿ ಇರುವುದರಿಂದ ಖಾಲಿ ಇರುವ ದಿನಗಳನ್ನು ಕಾಯ್ದಿರಿಸಲೂ ಸಂಘ–ಸಂಸ್ಥೆಗಳು ನಿರಾಸಕ್ತಿ ತೋರುತ್ತಿವೆ. 

ನಗರದಲ್ಲಿ ಸುಸಜ್ಜಿತ ರಂಗಮಂದಿರಗಳ ಕೊರತೆ, ಖಾಸಗಿ ರಂಗಮಂದಿರಗಳಿಗೆ ಹೆಚ್ಚಿನ ಬಾಡಿಗೆ ಸೇರಿ ವಿವಿಧ ಕಾರಣಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯ ರಂಗಮಂದಿರಗಳಿಗೆ ಸದಾ ಬೇಡಿಕೆ ಇರಲಿದೆ. ರವೀಂದ್ರ ಕಲಾಕ್ಷೇತ್ರ ಸೇರಿ ಹಲವು ರಂಗಮಂದಿರಗಳು ವರ್ಷದ ಬಹುತೇಕ ದಿನಗಳು ಕಾಯ್ದಿರಿಸಲ್ಪಟ್ಟಿರುತ್ತವೆ. ಇಲಾಖೆಯು ರಂಗಮಂದಿರಗಳ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪೋರ್ಟಲ್ ರೂಪಿಸಿ, ಅವಕಾಶ ಕಲ್ಪಿಸಿದೆ. ಈ ಪೋರ್ಟಲ್‌ನಲ್ಲಿ ಮುಂದಿನ ಎರಡು ತಿಂಗಳು ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಏಪ್ರಿಲ್‌ ಹಾಗೂ ಮೇ ತಿಂಗಳಿಗೂ ಕೆಲ ದಿನಗಳು ಸಂಘ–ಸಂಸ್ಥೆಗಳು ಕಾಯ್ದಿರಿಸಿದ್ದವು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಕಾರ್ಯಕ್ರಮಗಳನ್ನು ಮುಂದೂಡಿ, ಕಾಯ್ದಿರಿಸುವಿಕೆ ರದ್ದುಗೊಳಿಸಲಾಗುತ್ತಿದೆ.

ಕಳೆದ ವರ್ಷವೂ ಈ ವೇಳೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಕೆಲ ಪೂರ್ವನಿಯೋಜಿತ ಕಾರ್ಯಕ್ರಮಗಳು ರದ್ದಾಗಿದ್ದವು. ಇದರಿಂದಾಗಿ ಕಲಾವಿದರು ಪ್ರದರ್ಶನಗಳಿಲ್ಲದೆಯೇ ಸಮಸ್ಯೆ ಎದುರಿಸಿದ್ದರು. 

ಗೊಂದಲದಲ್ಲಿ ಆಯೋಜಕರು: ರವೀಂದ್ರ ಕಲಾಕ್ಷೇತ್ರ ಒಳಗೊಂಡಂತೆ ನಗರದ ಏಳು ರಂಗ ಮಂದಿರಗಳನ್ನು ಸಂಸ್ಕೃತಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರವೀಂದ್ರ ಕಲಾಕ್ಷೇತ್ರವು ಕ್ರಮವಾಗಿ 24 ಹಾಗೂ 18 ದಿನಗಳು ಕಾಯ್ದಿರಿಸಲ್ಪಟ್ಟಿದ್ದವು. ಪೂರ್ವ ನಿಗದಿತ ಇಲಾಖೆ ಕಾರ್ಯಕ್ರಮಗಳಿಗೂ ಕೆಲ ದಿನ ಕಲಾಕ್ಷೇತ್ರವನ್ನು ಮೀಸಲಿಡಲಾಗಿತ್ತು. 

ಏಪ್ರಿಲ್ ತಿಂಗಳಲ್ಲಿ ದೇವರ ದಾಸಿಮಯ್ಯ ಜಯಂತಿ, ಭಗವಾನ್ ಮಹಾವೀರ ಜಯಂತಿ, ಅಕ್ಕಮಹಾದೇವಿ ಜಯಂತಿ, ಮೇ ತಿಂಗಳಲ್ಲಿ ಬಸವ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ, ಶಂಕರಾಚಾರ್ಯ ಜಯಂತಿ ಹಾಗೂ ಭಗೀರಥ ಜಯಂತಿ ನಿಗದಿಯಾಗಿದ್ದವು. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜಯಂತಿಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲು ಇಲಾಖೆ ನಿರ್ಧರಿಸಿದೆ.

ನಯನ ಸಭಾಂಗಣವು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕ್ರಮವಾಗಿ 22, 14, ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯವು 14, 17, ಸಂಸ ಬಯಲು ರಂಗಮಂದಿರವು 5, 7 ದಿನಗಳು ಮುಂಚಿತವಾಗಿ ಬುಕ್ಕಿಂಗ್ ಆಗಿವೆ. ಪುಸ್ತಕ ಬಿಡುಗಡೆ ಸೇರಿ ವಿವಿಧ ಕಾರ್ಯಕ್ರಮಗಳಿಗೆ ದಿನ ಕಾಯ್ದಿರಿಸಿದ್ದವರೂ ನೀತಿ ಸಂಹಿತೆ ನಿರ್ಬಂಧಗಳಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ಈಗಾಗಲೇ 5ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಕರು ರದ್ದುಗೊಳಿಸಿದ್ದಾರೆ.

‘ಠೇವಣಿ ಮಾತ್ರ ವಾಪಸ್’

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈಗ ಕಾರ್ಯಕ್ರಮಗಳಿಗೆ ಅಷ್ಟಾಗಿ ಜನ ಬರುತ್ತಿಲ್ಲ. ಕೆಲವರು ಕಾರ್ಯಕ್ರಮ ರದ್ದು ಪಡಿಸುತ್ತಿದ್ದಾರೆ. ಮುಂಗಡವಾಗಿ ಕಾಯ್ದಿರಿಸಿದ ಕಾರ್ಯಕ್ರಮ ರದ್ದುಪಡಿಸಿದಲ್ಲಿ ಠೇವಣಿ ಹಣ ಮಾತ್ರ ವಾಪಸ್ ನೀಡಲಾಗುತ್ತದೆ’ ಎಂದು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.  ‘ರಂಗಮಂದಿರ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಹಣವನ್ನು ಪಾವತಿಸಿಕೊಳ್ಳಲಾಗುತ್ತದೆ. ಆ ಹಣವನ್ನು ಸರ್ಕಾರಕ್ಕೆ ಜಮಾ ಮಾಡಲಾಗುತ್ತದೆ. ಇಲಾಖೆ ವತಿಯಿಂದಲೇ ಕಾರ್ಯಕ್ರಮ ರದ್ದುಗೊಳಿಸಿದರೆ ಠೇವಣಿ ಜತೆಗೆ ಬಾಡಿಗೆ ಹಣ ಜಿಎಸ್‌ಟಿ ಮೊತ್ತವನ್ನೂ ಮರಳಿಸುತ್ತೇವೆ’ ಎಂದು ಹೇಳಿದರು.

ಆನ್‌ಲೈನ್ ವ್ಯವಸ್ಥೆ

ಸರ್ಕಾರಿ ರಂಗಮಂದಿರಗಳ ಕಾಯ್ದಿರಿಸುವಿಕೆಯಲ್ಲಿ ಪಾರದರ್ಶಕತೆ ತರಲು ಇಲಾಖೆಯು 2022ರ ಏ.1ರಿಂದ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದೆ. ಸರ್ಕಾರಿ ನಿಯಮಗಳ ಅನುಸಾರ ನಿಗದಿಯಾದ ಕಾರ್ಯಕ್ರಮ ನಿಂತಲ್ಲಿ ಹಣ ಹಿಂತಿರುಗಿಸುವ ಬದಲು ಮತ್ತೊಂದು ದಿನಾಂಕ ಆಯ್ಕೆಗೆ ಅವಕಾಶ ನೀಡಲಾಗುತ್ತಿದೆ. ಮೂರು ದಿನಗಳಿಗಿಂತಲೂ ಹೆಚ್ಚಿನ ಅವಧಿ ಸತತವಾಗಿ ಸಭಾಂಗಣ ಕಾಯ್ದಿರಿಸಲು ಅವಕಾಶವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT