ಶುಕ್ರವಾರ, ಜುಲೈ 30, 2021
20 °C

ರಾಜಕೀಯದ ಸುವರ್ಣಾವಕಾಶ ಕೈಚೆಲ್ಲಿದ ಪ್ರಕಾಶ್‌: ಪ್ರೊ.ಎಸ್.ಜಿ. ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ರಾದೇಶಿಕ ಪಕ್ಷವೊಂದನ್ನು ಪ್ರಬಲವಾಗಿಸುವ, ರಾಜಕೀಯವಾಗಿ ತಾವೂ ಪ್ರಬಲವಾಗುವ ಅವಕಾಶ ಎಂ.ಪಿ. ಪ್ರಕಾಶ್‌ ಮುಂದಿತ್ತು. ಆದರೆ, ಅವರು ಆ ಸಂದರ್ಭದಲ್ಲಿ ಹಿಂಜರಿದ ಕಾರಣ ರಾಜ್ಯದಲ್ಲಿ ರಾಜಕೀಯದ ಹೊಸ ಯುಗಾರಂಭ ಆಗುವುದು ಕೈತಪ್ಪಿತು’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಚಿಂತಕ ಎಂ.ಪಿ.ಪ್ರಕಾಶ್ ಅವರ ಜನ್ಮದಿನದ ಅಂಗವಾಗಿ ರಂಗ ವಿಜಯಾ ಮತ್ತು ರಂಗಚಂದಿರ ತಂಡಗಳು ಸೋಮವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ‘ಈಗ ನಮ್ಮ ಜೊತೆ ಎಂ.ಪಿ.ಪ್ರಕಾಶ್ ಇರಬೇಕಿತ್ತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನತಾದಳದಿಂದ ಸಿದ್ದರಾಮಯ್ಯ ಅವರನ್ನು ಹೊರಹಾಕಿದಾಗ, ಅವರು ಅಖಿಲ ಭಾರತ ಪ್ರಗತಿಪರ ಜನತಾದಳ (ಎಬಿಪಿಜೆಡಿ) ಪಕ್ಷ ರಚಿಸಿದ್ದರು. ಜನತಾದಳದಲ್ಲಿನ ಕುಟುಂಬ ರಾಜಕಾರಣದ ಮುಜುಗರವನ್ನು ಅನುಭವಿಸುವುದಕ್ಕೆ ಬದಲಾಗಿ, ಎಂ.ಪಿ. ಪ್ರಕಾಶ್‌ ಮತ್ತು ಪಿ.ಜಿ.ಆರ್. ಸಿಂಧ್ ಅವರೂ ಸಿದ್ದರಾಮಯ್ಯ ಅವರ ಜೊತೆ ಕೈಜೋಡಿಸಿದ್ದರೆ ಎಬಿಪಿಜೆಡಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯುತ್ತಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಆಗ ಪಕ್ಷ ತೊರೆಯದ್ದಕ್ಕೆ ಪ್ರಕಾಶ್‌ ಮತ್ತು ಸಿಂಧ್ಯ ಅವರು ಬಳಿಕ ಪರಿತಪಿಸಿದ್ದನ್ನು ಕಂಡಿದ್ದೇನೆ. ಕೊನೆಗೂ ಪ್ರಕಾಶ್  ಜನತಾದಳದಲ್ಲೂ ಇರದೆ ಕಾಂಗ್ರೆಸ್‌ ಸೇರಿದರು. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ಅವರು ಪರಾಭವಗೊಳ್ಳಬೇಕಾಯಿತು’ ಎಂದು ನೆನಪಿಸಿಕೊಂಡರು.

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಪ್ರಕಾಶ್‌ ಅವರು, ರಾಜಕೀಯ ಮತ್ತು ಸಾಮಾಜಿಕ ಗಟ್ಟಿತನವನ್ನು ಮೈಗೂಡಿಸಿಕೊಂಡು ಸಂಸ್ಕೃತಿಯ ನಿಜ ಚಿಂತಕರಾಗಿ ಬೆಳೆದ ವ್ಯಕ್ತಿಯಾಗಿದ್ದರು. ರಂಗಭೂಮಿಯ ಸಮಸ್ಯೆಗಳಿಗೆ ಬಹುಬೇಗ ಸ್ಪಂದಿಸಿ ಕಲಾವಿದರ ಕಷ್ಟ ನಿವಾರಿಸಲು ನೆರವಾಗುತ್ತಿದ್ದರು’ ಎಂದು ಸ್ಮರಿಸಿದರು. 

ಕಲಾವಿದ ಎಂ.ಎಸ್. ಮೂರ್ತಿ, ‘ರಾಜಕಾರಣಿಗಳು ರಾಜಕೀಯದಲ್ಲಿ ಗೆಲ್ಲುತ್ತಾರೆ, ಸೋಲುತ್ತಾರೆ. ಅತ್ಯುತ್ತಮ ಕೆಲಸ ಮಾಡಿದ ಎಂ.ಪಿ. ಪ್ರಕಾಶ್ ರಾಜಕಾರಣದಲ್ಲಿ ಸೋತರೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ’ ಎಂದರು.

ಕಾಂಗ್ರೆಸ್‌ ಮುಖಂಡ ವಿ.ಆರ್. ಸುದರ್ಶನ್, ‘ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಪ್ರಕಾಶ್‌ ಅವರು ಬರಹಗಾರರಾಗಿ, ಕಲಾವಿದರಾಗಿ ಅನೇಕ ಸಾಧನೆಗಳನ್ನು ಮಾಡಿದವರು. ಸದನದಲ್ಲಿ ಅವರಾಡುತ್ತಿದ್ದ ಮಾತುಗಳಲ್ಲೂ ತಾರ್ಕಿಕ ನೆಲೆಗಟ್ಟು ಇರುತ್ತಿತ್ತು’ ಎಂದರು.

ಗಾಯಕ ಟಿ. ಲಕ್ಷ್ಮೀನಾರಾಯಣ ರಂಗಗೀತೆ ಹಾಡಿದರು. ಪ್ರಕಾಶ್‌ ಅವರ ಪುತ್ರಿ ಎಂ.ಪಿ. ಸುಮಾ, ಜಿಪಿಒ ಚಂದ್ರು, ಹಿರಿಯ ಕಲಾವಿದ ಶ್ರೀನಿವಾಸ್ ಜಿ. ಕಪ್ಪಣ್ಣ ಭಾಗವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು