ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನಹಳ್ಳಿಯ 32 ಎಕರೆ ಜಮೀನು: ಆಸ್ತಿ ಕೊಳ್ಳೆಗೆ ಅಪ್ಪನೇ ಬದಲು!

Last Updated 5 ಏಪ್ರಿಲ್ 2021, 20:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ₹200 ಕೋಟಿ ಮೌಲ್ಯದ ಜಮೀನು ಕಬಳಿಸಲು ಅರ್ಜಿದಾರರ ಸಂಬಂಧವೇ ಅದಲು ಬದಲು ಆಗುತ್ತದೆ. ಸರ್ಕಾರಿ ಜಮೀನಿನ ಮೇಲೆ ಕಣ್ಣಿಟ್ಟ ಮೂರನೇ ವ್ಯಕ್ತಿಯೊಬ್ಬ ಮೂಲ ಅರ್ಜಿದಾರರಿಗೆ ಅಪ್ಪನಾಗುತ್ತಾನೆ. ಈ ಮೂರನೇ ವ್ಯಕ್ತಿಯ ಸಾವಿನ ಬಗ್ಗೆ ಅವರ ಪುತ್ರನೇ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸುತ್ತಾನೆ!

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಮಾದಪ್ಪನಹಳ್ಳಿಯ ಸರ್ವೆ ನಂಬರ್‌ 62ರಲ್ಲಿ 32 ಎಕರೆ 4 ಗುಂಟೆ ಜಮೀನು ಕಬಳಿಸಲು ‘ಪ್ರಭಾವಿ’ಗಳು ಮಾಡಿರುವ ಕರಾಮತ್ತುಗಳಿವು.

ಇದನ್ನು ಪತ್ತೆ ಹಚ್ಚಿರುವ ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್‌ ಅವರು, ಈ ಜಾಗವನ್ನು ‘ಸರ್ಕಾರಿ ಜಾಗ’ ಎಂದು ನಮೂದಿಸಿ ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆಯುವಂತೆ ಯಲಹಂಕ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಮಾದಪ್ಪನಹಳ್ಳಿಯಲ್ಲಿ ಎಕರೆಗೆ ₹6 ಕೋಟಿ ಮಾರುಕಟ್ಟೆ ಮೌಲ್ಯ ಇದೆ.

ಈ ಪ್ರಕರಣದ ಒಂಬತ್ತು ಪ್ರತಿವಾದಿಗಳ ಪೈಕಿ ನರಸಿಂಹಯ್ಯ ಎಂಬುವರು ಮೃತಪಟ್ಟಿದ್ದು, ಒಂಬತ್ತನೇ ಪ್ರತಿವಾದಿಯಾದ ಚರಣ್‌ ರೆಡ್ಡಿ ಎಂಬುವರು ಆಂಧ್ರ ಪ್ರದೇಶದ ಶಾಸಕರೊಬ್ಬರ ಹತ್ತಿರದ ಸಂಬಂಧಿ ಎಂದು ಗೊತ್ತಾಗಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ ಆರೋಪದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಎಂ.ಕೆ.ಅಯ್ಯಪ್ಪ ಹಾಗೂ ಇತರ ಮೂವರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು 2013ರ ಮಾರ್ಚ್‌ನಲ್ಲಿ ಬಂಧಿಸಿದ್ದರು. ಈ ಪ್ರಕರಣದಲ್ಲಿ ನಗರದ ಶಾಸಕರೊಬ್ಬರು ಭಾಗಿಯಾಗಿದ್ದಾರೆ ಎಂದು ದೂರುದಾರರು ಹೇಳಿದ್ದರು.

ಏನಿದು ಪ್ರಕರಣ: ಮಾದಪ್ಪನಹಳ್ಳಿಯ 32 ಎಕರೆ 4 ಗುಂಟೆ ಜಾಗವು ‘ದಾಳಬೈಲಪ್ಪ ಬಿನ್‌ ನರಸಿಂಹಯ್ಯ’ ಎಂಬುವವರಿಗೆ ಮಂಜೂರಾದ ಬಗ್ಗೆ ಕಂದಾಯ ರಿಜಿಸ್ಟರ್‌ಗಳಲ್ಲಿ ಉಲ್ಲೇಖ ಇತ್ತು. ಈ ಜಾಗ ತಮಗೆ ಸೇರಿದ್ದು ಎಂದು ‘ನರಸಿಂಹಯ್ಯ ಬಿನ್‌ ದಾಳಬೈಲಪ‍್ಪ’ ಎಂಬ ಹೆಸರಿನವರು 2009–10ರಲ್ಲಿ ಸಲ್ಲಿಸಿದ ಅರ್ಜಿ ಆಧರಿಸಿ ಅಂದಿನ ನಗರ ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ, ಈ ಜಾಗ ನರಸಿಂಹಯ್ಯ ಅವರಿಗೆ ಸೇರಿದ್ದು ಎಂದು ಆದೇಶ ಹೊರಡಿಸಿದರು. ಈ ಮಧ್ಯೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ ಅದೇ ಗ್ರಾಮದ ಅನಿಲ್‌ ಕುಮಾರ್‌, ಹರೀಶ್‌ ಹಾಗೂ ಮುನಿವೀರಪ್ಪ ಎಂಬುವರು ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ಇದು ಸರ್ಕಾರಿ ಜಮೀನು ಎಂದು ಎಂ.ಕೆ.ಅಯ್ಯ‍ಪ್ಪ ಮತ್ತೆ ಆದೇಶಿಸಿದರು. ಇದನ್ನು ಪ್ರಶ್ನಿಸಿ ಪ್ರತಿವಾದಿಗಳು ಹೈಕೋರ್ಟ್‌ ಮೆಟ್ಟಿಲೇರಿದರು. ಜಿಲ್ಲಾಧಿಕಾರಿಯವರ ಮೊದಲ ಆದೇಶವೇ ಸರಿಯಾಗಿದ್ದು, ಪ್ರತಿವಾದಿಗಳಿಗೆ ಖಾತೆ ಮಾಡಿಕೊಡಬೇಕು ಎಂದು ಹೈಕೋರ್ಟ್‌ ಆದೇಶಿಸಿತು. ಜಿಲ್ಲಾಡಳಿತ ದ್ವಿಸದಸ್ಯ ಪೀಠದ ಮೆಟ್ಟಿಲೇರಿತು. ಅಲ್ಲಿಯೂ ಪ್ರತಿವಾದಿಗಳ ಪರ ಆದೇಶ ಬಂತು.

ಖಾತೆ ಮಾಡಿಕೊಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಪ್ರತಿವಾದಿಗಳು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದರು. ಪ್ರತಿವಾದಿಗಳ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು 2018ರಲ್ಲಿ ಹೈಕೋರ್ಟ್‌ ನಿರ್ದೇಶನ ನೀಡಿದ್ದರಿಂದಾಗಿ, ಜಿಲ್ಲಾಡಳಿತದ ಅಧಿಕಾರಿಗಳು ಖಾತೆಯನ್ನೂ ಮಾಡಿಕೊಟ್ಟರು. ನ್ಯಾಯಾಂಗ ನಿಂದನೆ ಪ್ರಕರಣ ಇತ್ಯರ್ಥವಾದ ಕೂಡಲೇ ಅಂದು ಉಪವಿಭಾಗಾಧಿಕಾರಿಯಾಗಿದ್ದ ಎಂ.ಕೆ. ಜಗದೀಶ್‌ , ಪಹಣಿ ಮಾಡುವುದಕ್ಕೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್‌ 67ರ ಅಡಿಯಲ್ಲಿ ತಡೆಯಾಜ್ಞೆ ವಿಧಿಸಿದರು.

ನಂತರ ಈ ಹುದ್ದೆಗೆ ಬಂದ ದಯಾನಂದ ಭಂಡಾರಿ, ಭೂಕಂದಾಯ ಕಾಯ್ದೆಯಡಿ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ತಮಗೆ ಇಲ್ಲ ಎಂದು ಪ್ರತಿಪಾದಿಸಿ 2020ರ ಜನವರಿ 29ರಂದು ಪ್ರಕರಣವನ್ನೇ ಕೈಬಿಟ್ಟರು.

‘ಉಲ್ಟಾ ಪಲ್ಟಾ’ ಪತ್ತೆಯಾಗಿದ್ದು ಹೇಗೆ?
ಉಪವಿಭಾಗಾಧಿಕಾರಿ ಹುದ್ದೆಯಿಂದ ವಿಶೇಷ ಜಿಲ್ಲಾಧಿಕಾರಿ ಹುದ್ದೆಗೆ 2020ರಲ್ಲಿ ನಿಯುಕ್ತಿಗೊಂಡ ಎಂ.ಕೆ. ಜಗದೀಶ್ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು ’ಉಲ್ಟಾ ಪಲ್ಟಾ‘ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

ಅವರು ಪ್ರತಿವಾದಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಿದರು. ಈ ಬಗ್ಗೆ ವರದಿ ಹಾಗೂ ಪ್ರಕರಣದ ವಿವರಗಳನ್ನು ಸಲ್ಲಿಸುವಂತೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಹಾಗೂ ಯಲಹಂಕ ತಹಶೀಲ್ದಾರ್‌ಗೆ ಸೂಚಿಸಿದರು. ಆದರೆ, ಅಧಿಕಾರಿಗಳಿಬ್ಬರು ಅಗತ್ಯ ದಾಖಲೆಗಳನ್ನು ಒದಗಿಸಲಿಲ್ಲ.

ವಿಶೇಷ ಜಿಲ್ಲಾಧಿಕಾರಿ ಅವರು ಈ ಹಿಂದಿನ ಆದೇಶಗಳು, ದಾಖಲೆಗಳನ್ನು ಪರಿಶೀಲಿಸಿದಾಗ ನರಸಿಂಹಯ್ಯ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರ ಪ್ರವೇಶವಾಗಿರುವುದು ಗಮನಕ್ಕೆ ಬಂದಿದೆ. ಒಂದು ಕಡೆ ‘ದಾಳಬೈಲಪ್ಪ ಬಿನ್‌ ನರಸಿಂಹಯ್ಯ’ ಇದ್ದರೆ, ಮತ್ತೊಂದು ಕಡೆ ‘ನರಸಿಂಹಯ್ಯ ಬಿನ್‌ ದಾಳಬೈಲಪ್ಪ’ ಎಂಬ ಹೆಸರು ಉಲ್ಲೇಖವಾಗಿತ್ತು. ಭೂಗಳ್ಳರು ನರಸಿಂಹಯ್ಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಖಚಿತವಾಯಿತು. ನರಸಿಂಹಯ್ಯ ಮೃತಪಟ್ಟ ವೇಳೆ ಅವರ ಪುತ್ರ ಸಲ್ಲಿಸಿದ ಮರಣ ಪ್ರಮಾಣಪತ್ರವೂ ನಕಲಿ ಎಂಬುದೂ ದಾಖಲೆಗಳಿಂದ ಮನದಟ್ಟಾಗಿದೆ. ಇಷ್ಟೆಲ್ಲ ಆದರೂ ದಾಳಬೈಲಪ್ಪ ಬಿನ್‌ ನರಸಿಂಹಯ್ಯ ವಾರಸುದಾರರು ಜಿಲ್ಲಾಡಳಿತ ಅಥವಾ ಕೋರ್ಟ್‌ ಮೆಟ್ಟಿಲೇರಿಲ್ಲ. ನರಸಿಂಹಯ್ಯ ಮೂಲ ಹಕ್ಕುದಾರರಲ್ಲ ಎಂಬುದನ್ನು ಗಮನಿಸಿ ಎಂ.ಕೆ.ಜಗದೀಶ್ ಈ ಆದೇಶ ಹೊರಡಿಸಿದ್ದಾರೆ.

*
ಇದು ಬಂಜರು ಭೂಮಿ. ಮೂಲ ಅರ್ಜಿದಾರರಿಗೆ ಸಂಬಂಧಪಡದ ವ್ಯಕ್ತಿಯೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಸಲು ಪ್ರಯತ್ನಿಸಿರುವುದನ್ನು ಪತ್ತೆ ಹಚ್ಚಲಾಗಿದೆ.
-ಎಂ.ಕೆ.ಜಗದೀಶ್‌, ವಿಶೇಷ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT