ಮಂಗಳವಾರ, ಸೆಪ್ಟೆಂಬರ್ 21, 2021
21 °C

2022ರ ಮೇ ಒಳಗೆ ಸಜ್ಜಾಗಲಿದೆ ಮಲ್ಲೇಶ್ವರ ಮಾರುಕಟ್ಟೆ: ಶಾಸಕ ಅಶ್ವತ್ಥನಾರಾಯಣ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಲ್ಲೇಶ್ವರ ಮಾರುಕಟ್ಟೆ ನಿರ್ಮಾಣ ಯೋಜನೆಯನ್ನು 2022ರ ಮೇ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದರು.

ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಕೈಗೆತ್ತಿಕೊಳ್ಳಲಾದ ವಿವಿಧ ಯೋಜನೆಗಳ ಕುರಿತು ಶನಿವಾರ ಅವರು ಪ್ರಗತಿ ಪರಿಶೀಲನೆ ನಡೆಸಿದರು.

‘ಮಲ್ಲೇಶ್ವರ ಪ್ರದೇಶದ ಜನರಿಗೆ ಈ ಮಾರುಕಟ್ಟೆ ಬಹಳ ಪ್ರಾಮುಖ್ಯವಾದುದು. ಕಾರಣಾಂತರಗಳಿಂದ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಅತ್ಯಂತ ವೈಜ್ಞಾನಿಕವಾಗಿ ಇದರ ಮರುವಿನ್ಯಾಸ ರೂಪಿಸಲಾಗುತ್ತಿದೆ. ಈ ಮಾರುಕಟ್ಟೆ ಸಂಕೀರ್ಣದ ತಳ ಮಹಡಿ ಮತ್ತು ಐದನೇ ಮಹಡಿಗಳಲ್ಲಿ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟು 421 ಕಾರುಗಳು ಮತ್ತು 350 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಷ್ಟು ಸೌಕರ್ಯ ಇಲ್ಲಿ ಲಭ್ಯವಾಗಲಿದೆ’ ಎಂದು ಅವರು ವಿವರಿಸಿದರು.

ಬಿಡಿಎ ಸಂಕೀರ್ಣ ಪುನರುಜ್ಜೀವನ:

ಸದಾಶಿವನಗರದಲ್ಲಿ ಆಯಕಟ್ಟಿನ ಜಾಗದಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣವು 1958ರಲ್ಲಿ ನಿರ್ಮಾಣವಾಗಿದೆ. ಈ ಕಟ್ಟಡದಲ್ಲಿ ಸದ್ಯಕ್ಕೆ 21 ಮಳಿಗೆಗಳಿವೆ. ಅವುಗಳಿಂದ ತಿಂಗಳಿಗೆ ಕೇವಲ ₹ 5 ಲಕ್ಷ ವರಮಾನ ಬರುತ್ತಿದೆ.

‘ನಗರದ ಹೃದಯ ಭಾಗದಲ್ಲಿರುವ ಈ ಜಾಗದಿಂದ ಪ್ರಾಧಿಕಾರಕ್ಕೆ ಇನ್ನೂ ಹೆಚ್ಚಿನ ವರಮಾನ ಬರುವಂತಾಗಬೇಕು’ ಎಂದು ಅಶ್ವತ್ಥನಾರಾಯಣ ಸಲಹೆ ನೀಡಿದರು.

‘ಈ ವಾಣಿಜ್ಯ ಸಂಕೀರ್ಣವನ್ನು ತೆರವುಗೊಳಿಸಲಿದ್ದೇವೆ. ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಮಾದರಿಯ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುತ್ತದೆ’ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ತಿಳಿಸಿದರು.

‘ಈ ಕಟ್ಟಡದ ಅಭಿವೃದ್ಧಿಗೆ ಈ ಹಿಂದೆಯೂ ಪ್ರಯತ್ನಗಳು ನಡೆದಿದ್ದವು. ಈ ಬಗ್ಗೆ ಖಾಸಗಿ ಸಂಸ್ಥೆಗಳ ಜೊತೆ ಒಪ್ಪಂದವೂ ನಡೆದಿತ್ತು. ಕಾರಣಾಂತರಗಳಿಂದಾಗಿ ಅದು ಜಾರಿಗೆ ಬರಲಿಲ್ಲ. ಈಗ ಹೊಸದಾಗಿ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಪಿಪಿಪಿ ಯೋಜನೆ ಅನುಷ್ಠಾನಕ್ಕೆ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಹೊಸ ಷರತ್ತುಗಳನ್ನು ರೂಪಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಬಿಡಿಎ ಆಯುಕ್ತ ರಾಜೇಶ್ ಗೌಡ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.