ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್‌ ಸಮೀಕ್ಷೆ – ಮಲ್ಲೇಶ್ವರ: ಅಶ್ವತ್ಥ್, ಅನೂಪ್ ಹಣಾಹಣಿ: ಒಲವು ಯಾರಿಗೆ

Published 5 ಮೇ 2023, 22:35 IST
Last Updated 5 ಮೇ 2023, 22:35 IST
ಅಕ್ಷರ ಗಾತ್ರ

ಎಸ್‌. ರವಿಪ್ರಕಾಶ್

ಬೆಂಗಳೂರು: ಮಧ್ಯಮವರ್ಗ ಮತ್ತು ವಿದ್ಯಾವಂತ ಮತದಾರರೇ ಹೆಚ್ಚಾಗಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲ ಕೆರಳಿಸಿದೆ. ಸಾಕಷ್ಟು ಅಭಿವೃದ್ಧಿ ಹೊಂದಿರುವ ಕ್ಷೇತ್ರವೆಂದು ಹೇಳಲಾಗಿದ್ದರೂ ಇಲ್ಲಿ ಸಮಸ್ಯೆಗಳಿಗೆ ಕೊರತೆ ಇಲ್ಲ. ಈಗ ಕ್ಷೇತ್ರದಲ್ಲಿ ಇದೇ ಚರ್ಚೆಯ ವಸ್ತು.

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್‌ ಪಕ್ಷ ಯುವ ಉದ್ಯಮಿ ಅನೂಪ್‌ ಅಯ್ಯಂಗಾರ್‌ ಅವರನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್‌ನಿಂದ ಉತ್ಕರ್ಷ ಸ್ಪರ್ಧಿಸಿದ್ದಾರೆ. ಇಬ್ಬರೂ ಕ್ಷೇತ್ರಕ್ಕೆ ಹೊಸ ಮುಖಗಳು. ನಾಲ್ಕು ಬಾರಿ ಗೆದ್ದು, ಉಪಮುಖ್ಯಮಂತ್ರಿಯೂ ಆಗಿದ್ದ ಅಶ್ವತ್ಥನಾರಾಯಣ ಅವರನ್ನು ಮಣಿಸಲು ಕಾಂಗ್ರೆಸ್‌ನ ಅನೂಪ್ ತುರುಸಿನ ಸ್ಪರ್ಧೆ ನೀಡಿದ್ದಾರೆ.

ಬಿಎಸ್‌ಪಿಯಿಂದ ಅಬ್ದುಲ್‌ ಸುಹೇಲ್ ಅಹಮದ್‌, ಕರ್ನಾಟಕ ರಾಷ್ಟ್ರ ಸಮಿತಿಯಿಂದ ರಾಜೇಶ್‌ ಬಿ; ಆಮ್‌ ಆದ್ಮಿ ಪಾರ್ಟಿಯಿಂದ ಸುಮನ್‌ ಸ್ಪರ್ಧಿಸಿದ್ದಾರೆ. 

ಅಶ್ವತ್ಥನಾರಾಯಣ ಅವರು ತಾವು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಮತ್ತು ಮುಂದೆ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಬಳಿ ಹೇಳಿಕೊಂಡು ಮತಯಾಚಿಸುತ್ತಿದ್ದರೆ, ಅನೂಪ್‌ ಅವರು ತಾವು ಗೆದ್ದರೆ ಮಾಡಲಿರುವ ವಿನೂತನ ಅಭಿವೃದ್ಧಿ ಕಾರ್ಯಗಳ ‘ಮಾರ್ವಲೆಸ್‌ ಮಲ್ಲೇಶ್ವರ’, ಪಕ್ಷದ ‘ಗ್ಯಾರಂಟಿ’ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಪಕ್ಷದ ‘ಪಂಚರತ್ನ’ ಕಾರ್ಯಕ್ರಮದ ಹೆಸರಿನಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ.

‘ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಅಕ್ರಮಗಳು ನಡೆದಿದೆ ಮತ್ತು ಕಾಮಗಾರಿಗಳೂ ಕಳಪೆ ಮಟ್ಟದ್ದಾಗಿವೆ. ಸ್ಯಾಂಕಿ ಕೆರೆ ಅಭಿವೃದ್ಧಿ ಹೆಸರಲ್ಲಂತೂ ಹಲವು ವರ್ಷಗಳಿಂದ ಕಾಮಗಾರಿಗಳು ನಡೆಯುತ್ತಲೇ ಇವೆ. ಇದಕ್ಕೆ ಕೊನೆ ಎಂಬುದು ಇಲ್ಲವೇ’ ಎಂದು  ಅನೂಪ್‌ ಅವರು ಮತದಾರರ ಮುಂದೆ ಪ್ರಶ್ನಿಸುತ್ತಿದ್ದಾರೆ.

ಅಲ್ಲದೇ, ಸ್ಯಾಂಕಿ ಕೆರೆಯ ಬಳಿ ಫ್ಲೈಓವರ್‌ ನಿರ್ಮಿಸುವ ಬಿಬಿಎಂಪಿ ನಿರ್ಧಾರಕ್ಕೆ ಕ್ಷೇತ್ರದಲ್ಲಿ ವ್ಯಾಪಕ ವಿರೋಧವಿದೆ. ಮಲ್ಲೇಶ್ವರಕ್ಕೆ ಅಗತ್ಯವೇ ಇಲ್ಲದ ಫ್ಲೈಓವರ್‌ನಿಂದ ಬಡಾವಣೆಯ ಸಾಂಪ್ರದಾಯಿಕ ಸೌಂದರ್ಯವೂ ಕೆಟ್ಟು ಹೋಗುವುದರ ಜತೆಗೆ ಇನ್ನಷ್ಟು ಸಮಸ್ಯೆಗಳಿಗೂ ಕಾರಣವಾಗಲಿದೆ. ಸಂಚಾರದ ಒತ್ತಡ ಇಲ್ಲದಿದ್ದರೂ, ಫ್ಲೈಓವರ್‌ ನಿರ್ಮಾಣದ ಹಟವೇಕೆ? ಫ್ಲೈಓವರ್‌ ನಿರ್ಮಾಣ ಆದರೆ ನೂರಾರು ವರ್ಷಗಳಿಂದ ಇರುವ ಮರಗಳು ನಾಶವಾಗಲಿವೆ ಎಂಬುದು ಸ್ಯಾಂಕಿ ಕೆರೆ ಉಳಿಸಿ ಹೋರಾಟಗಾರರ ವಾದ. ಕಳೆದ ಚುನಾವಣೆ ಸಂದರ್ಭದಲ್ಲೂ ಫ್ಲೈಓವರ್‌ ವಿಷಯ ಜೀವಂತಾಗಿತ್ತು. ಸಾಕಷ್ಟು ವಿರೋಧವಿದ್ದರೂ ಫ್ಲೈಓವರ್‌ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿರುವುದರಿಂದ ಪರಿಸರ ಪ್ರಿಯರಲ್ಲಿ ಬೇಸರ ಉಂಟು ಮಾಡಿದೆ.

‘ಕ್ಷೇತ್ರದಲ್ಲಿ ರಸ್ತೆಗಳ ಸ್ಥಿತಿಗತಿ ಬಗ್ಗೆ ಜನರಲ್ಲಿ ಆಕ್ರೋಶವಿದೆ. ರಸ್ತೆ ಗುಂಡಿಗಳನ್ನು ಬಹಳ ಕಾಲ ಮುಚ್ಚಿರಲಿಲ್ಲ. ಇದರಿಂದ ಸಾಕಷ್ಟು ಅಪಘಾತಗಳೂ ಆಗಿವೆ. ರಸ್ತೆಗೆ ಹಾಕುತ್ತಿದ್ದ ಡಾಂಬರ್‌ ಬಹು ಉಳಿಯದೇ ಬೇಗನೇ ಕಿತ್ತು ಹೋಗುತ್ತಿತ್ತು. ಆಗ ನಮ್ಮ ದೂರುಗಳಿಗೆ ಸ್ಪಂದಿಸುವವರೂ ಇರಲಿಲ್ಲ. ಚುನಾವಣೆ ಹತ್ತಿರ ಬಂದಾಗ ಎಲ್ಲವೂ ಸರಿಯಾಗಿವೆ’ ಎನ್ನುತ್ತಾರೆ ಅರಮನೆ ವಾರ್ಡ್‌ನ ವೆಂಕಟೇಶ್‌.

ಅಶ್ವತ್ಥನಾರಾಯಣ ಅವರು 2008 ರಿಂದ ಸತತವಾಗಿ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. 2008 ರಲ್ಲಿ ಎಂ.ಆರ್.ಸೀತಾರಾಮ್‌, 2013 ರಲ್ಲಿ ಬಿ.ಕೆ.ಶಿವರಾಮ್‌, 2018 ರಲ್ಲಿ ಕೆಂಗಲ್‌ ಶ್ರೀಪಾದರೇಣು ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದ್ದರು.

ಈ ಬಾರಿ ಮೇಲ್ನೋಟಕ್ಕೆ ಅಶ್ವತ್ಥನಾರಾಯಣ ಅವರಿಗೆ ಗೆಲುವು ಸುಲಭದ ತುತ್ತು ಎನಿಸಿದರೂ, ಕ್ಷೇತ್ರದ ಮತದಾರರಲ್ಲಿ ಶಾಸಕರ ಬಗ್ಗೆ ಅಸಮಾಧಾನವೂ ಇದೆ. ಶಾಸಕರು ಹಿಂದೆಲ್ಲ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಸಚಿವರಾದ ಬಳಿಕವಂತೂ ಅವರು ಸುಲಭವಾಗಿ ಯಾರ ಕೈಗೆ ಸಿಗುವುದಿಲ್ಲ ಎಂಬ ಭಾವನೆ ಸಾಮಾನ್ಯವಾಗಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ನೆಲೆ ಇದ್ದರೂ ಆ ಪಕ್ಷದ ಯಾವುದೇ ನಾಯಕರೂ ಪಟ್ಟಾಗಿ ಕುಳಿತು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುವ ಕೆಲಸ ಮಾಡಿಲ್ಲ. ಹೀಗಾಗಿ ಚುನಾವಣೆ ಬಂದಾಗಲಷ್ಟೇ ಸಕ್ರಿಯರಾಗುತ್ತಾರೆ. ನಂತರ ಮರೆತು ಬಿಡುತ್ತಾರೆ. ಪ್ರತಿ ಬಾರಿಯೂ ಹೊಸ ಮುಖಗಳನ್ನು ಕಣಕ್ಕೆ ಇಳಿಸುತ್ತಾರೆ. ಚುನಾವಣೆ ಮುಗಿದ ಬಳಿಕ ಅವರು ನೇಪಥ್ಯಕ್ಕೆ ಸರಿದುಬಿಡುತ್ತಾರೆ. ಪಕ್ಷವೂ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುತ್ತಲೂ ಇಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್ ಕಾರ್ಯಕರ್ತರದು.

ಅನೂಪ್ ಅಯ್ಯಂಗಾರ್‌ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ಒಕ್ಕಲಿಗ ಮತ ಗಣನೀಯ ಸಂಖ್ಯೆಯಲ್ಲಿದೆ. ಬ್ರಾಹ್ಮಣರಲ್ಲೂ ಅಯ್ಯಂಗಾರ್‌ಗಳ ಸಂಖ್ಯೆ ಅಧಿಕ. ಇವರು ಕಾಂಗ್ರೆಸ್ ಅಭ್ಯರ್ಥಿಯ ಕೈ ಹಿಡಿಯುವರೋ ಕಾದು ನೋಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT