ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ | ಲಾಲ್‌ಬಾಗ್‌ನಲ್ಲಿ ಕಳೆಗಟ್ಟಿದ ಮಾವು, ಹಲಸು ಮಾರಾಟ ಮೇಳ

ತಾಜಾ ಹಣ್ಣಿನ ರುಚಿಗೆ ಮಾರುಹೋದ ಗ್ರಾಹಕರು
Last Updated 4 ಜೂನ್ 2019, 3:12 IST
ಅಕ್ಷರ ಗಾತ್ರ

ಮಾವು–ಹಲಸು ರಾಜ್ಯದ ಜನತೆಇಷ್ಟಪಡುವಹಣ್ಣುಗಳು.ಇನ್ನೊಬ್ಬರು ಚಪ್ಪರಿಸಿ ತಿನ್ನುವುದು ನೋಡಿದಾಗ ನಾವೇ ತಿಂದಿದ್ದು ನೆನಪಾಗಿ ಬಾಯಿ ನೀರೂರುವುದಿಲ್ಲವೇ? ಹೌದು, ನಿಮಗೆ ಹೀಗೆ ನೀರೂರಬೇಕು, ತಿನ್ನುವ ಆಸೆಯಾಗಬೇಕುಎಂದೇ ನಾವು ಈ ವಿಡಿಯೊ ಸ್ಟೋರಿ ಮಾಡಿದ್ದೇವೆ. ವಿಡಿಯೊ ನೋಡಿ, ಸ್ಟೋರಿ ಓದಿ. ಅಷ್ಟಕ್ಕೇ ಸುಮ್ಮನಾಗಬೇಡಿ.ಬೆಂಗಳೂರಿನಲ್ಲಿದ್ದವರು ಲಾಲ್‌ಬಾಗ್‌ಗೆ ಹೋಗಿ ಹಣ್ಣು ಖರೀದಿಸಿ ಖುಷಿಪಡಿ. ‘ನಮ್ಮದು ಬೇರೆ ಊರು ಅಂದ್ರಾ’ ಹಾಗಿದ್ರೆ ಮೊದಲು ಬ್ಯಾಗ್‌ ತಗೊಂಡುಮಾರುಕಟ್ಟೆಗೆ ಹೊರಡಿ.

ಬೆಂಗಳೂರು: ತಾಜಾ ಮಾವಿನ ಹಣ್ಣಿನ ರುಚಿ ಸವಿಯುತ್ತಿರುವ ಯುವಕರು, ಗ್ರಾಹಕರನ್ನು ಕೂಗಿ ಕರೆದು ತಮ್ಮ ಬಳಿ ಇರುವ ವಿವಿಧ ತಳಿಯ ಹಣ್ಣುಗಳ ವಿಶೇಷ, ರುಚಿಯ ಬಗ್ಗೆ ವರ್ಣಿಸುತ್ತಿರುವ ರೈತರು, ‘ಸಕ್ಕರೆಗುತ್ತಿ’ಯ ಸಿಹಿ ಸವಿಯುತ್ತಿರುವ ಪುಟಾಣಿಗಳು, ಬಿರುಬಿಸಿಲನ್ನೂ ಲೆಕ್ಕಿಸದೆ ಮಳಿಗೆಗಳತ್ತ ಧಾವಿಸುತ್ತಿರುವ ಜನರು...

– ಈ ದೃಶ್ಯ ಕಂಡುಬಂದದ್ದು ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಆಯೋಜಿಸಿರುವ ರಾಜ್ಯಮಟ್ಟದ‘ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ’ದಲ್ಲಿ.

ರಾಸಾಯನಿಕ ಮುಕ್ತ, ಉತ್ತಮ ಗುಣಮಟ್ಟದ ಮಾವಿನಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಗೆ ನ್ಯಾಯಬೆಲೆ ದೊರಕಿಸಿ ಕೊಡುವ ಉದ್ದೇಶದಿಂದ ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷ ಮಾವು ಮೇಳವನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಮೇಳವು ಮೇ 30ರಂದು ಆರಂಭಗೊಂಡಿದ್ದು ಜೂನ್ 24ರವರೆಗೆ ನಡೆಯಲಿದೆ.

ಇದನ್ನೂ ಓದಿ:ಮಾವು, ಹಲಸು ಮೇಳ

ನೂರಕ್ಕೂ ಹೆಚ್ಚು ಮಳಿಗೆ:ಕೋಲಾರ, ತುಮಕೂರು, ಮಂಡ್ಯ, ರಾಮನಗರ ಮತ್ತಿತರ ಜಿಲ್ಲೆಗಳ ನೂರಕ್ಕೂ ಹೆಚ್ಚು ರೈತರು ಮಳಿಗೆಗಳನ್ನು ತೆರೆದಿದ್ದಾರೆ. ಸುಮಾರು 112 ಮಾವು ಮಳಿಗೆಗಳು, 10 ಹಲಸಿನ ಮಳಿಗೆಗಳನ್ನು ತೆರೆಯಲಾಗಿದೆ. ಮಾವು, ಹಲಸಿನ ಹಣ್ಣು ಮಾತ್ರವಲ್ಲದೆ ಅವುಗಳಿಂದ ತಯಾರಿಸಿ ಸಂಸ್ಕರಿಸಿದ ಆಹಾರವಸ್ತುಗಳನ್ನೂ ಮಾರಾಟ ಮಾಡಲಾಗುತ್ತಿದ್ದು, ಇದಕ್ಕಾಗಿ 9ಮಳಿಗೆಗಳನ್ನು ತೆರೆಯಲಾಗಿದೆ.

ಹತ್ತಾರು ತಳಿಗಳ ಸಮಾಗಮ...

ಮಲ್ಲಿಕಾ, ರಸಪುರಿ, ಬಾದಾಮಿ, ಸಕ್ಕರೆಗುತ್ತಿ, ತೋತಾಪುರಿ, ಆಲ್ಫೋನ್ಸೊ, ಮಲಗೋಬಾ, ಸೆಂಧೂರ, ಬಗನಪಲ್ಲಿ... ಹೀಗೆ ಸುಮಾರು 50ರಷ್ಟು ತಳಿಗಳ ಮಾವಿನಹಣ್ಣುಗಳು ಇಲ್ಲಿ ಲಭ್ಯವಿವೆ. ಜತೆಗೆ 10ಕ್ಕೂ ಹೆಚ್ಚು ತಳಿಗಳ ಹಲಸಿನ ಹಣ್ಣುಗಳೂ ಲಭ್ಯವಿವೆ.

ಮಾವು ಮಳಿಗೆಗಳ ಪಕ್ಕ ತೆರಳುತ್ತಿರುವವರನ್ನು ‘ಬನ್ನಿ ಮೇಡಂ, ಬನ್ನಿ ಸರ್, ರುಚಿಯಾದ ಮಲ್ಲಿಕಾ ತೆಗೆದುಕೊಳ್ಳಿ. ತಿಂದು ನೋಡಿ ಆಮೇಲೆ ಖರೀದಿಸಿ’ ಎಂದು ಮಾರಾಟಗಾರರು ಸೆಳೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಹಣ್ಣಾದ ತಾಜಾ ಮಾವನ್ನು ಅಲ್ಲಿಯೇ ತಿಂದು ನೋಡಿ ಖರೀದಿಸಲೂ ಗ್ರಾಹಕರಿಗೆ ಅವಕಾಶ ನೀಡಲಾಗುತ್ತಿದೆ.

ದರ ಎಷ್ಟು?

ಕಿಲೋವೊಂದಕ್ಕೆ ₹25ರಿಂದ ತೊಡಗಿ ₹100ರವರೆಗಿನ ದರದಲ್ಲಿ ವಿವಿಧ ತಳಿಯ ಮಾವಿನಹಣ್ಣುಗಳು ಲಭ್ಯವಿವೆ. ಸಕ್ಕರೆಗುತ್ತಿ ಪ್ರತಿ ಕಿಲೋಗೆ ₹50ರಿಂದ ₹80ರವರೆಗೂ ಮಾರಾಟವಾಗುತ್ತಿದೆ. ಮಲ್ಲಿಕಾ ₹70ರಿಂದ ₹80,ಆಲ್ಫೋನ್ಸೊ ₹60ರಿಂದ ₹70, ನೀಲಂ ₹50, ಬಂಗನಪಲ್ಲಿ ₹60 ದರದಲ್ಲಿ ಮಾರಾಟವಾಗುತ್ತಿದೆ.

ಉತ್ತಮ ಪ್ರತಿಕ್ರಿಯೆ

ಮಾವು ಮೇಳಕ್ಕೆ ರೈತರಿಂದ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞರಾಗಿದ್ದೇವೆ ಎನ್ನುತ್ತಾರೆ ಮೇಳದಲ್ಲಿ ಮಳಿಗೆ ಇಟ್ಟಿರುವ ಶ್ರೀನಿವಾಸಪುರದ ರೈತ ಮಂಜುನಾಥ್ ಪಿ.ಪಿ.

‘ಸಾಮಾನ್ಯವಾಗಿ ಮಾರಾಟದ ಸಂದರ್ಭ ₹100ರ ಮಾವಿಗೆ ₹10ರಂತೆ ನಾವು ಮಧ್ಯವರ್ತಿಗಳಿಗೆ ನೀಡಬೇಕಾಗುತ್ತದೆ. ಆದರೆ ಸರ್ಕಾರ ಇಲ್ಲಿ ನೇರವಾಗಿ ಮಾರಾಟ ಮಾಡಲು ಅವಕಾಶ ಒದಗಿಸಿರುವುದರಿಂದ ಬೆಳೆಯ ಹಣ ನೇರ ನಮ್ಮ ಕೈಸೇರುತ್ತದೆ. ಆದರೆ, ಪ್ರತಿ ದಿನ ಮಳಿಗೆಗಳ ಎದುರು ರಾಶಿ ಹಾಕಿರುವ ಮಾವಿನ ಹಣ್ಣುಗಳು ಬಿಸಿಲಿನಿಂದ ಬಾಡಿಹೋಗುತ್ತಿದ್ದು, ನಷ್ಟವಾಗುತ್ತಿದೆ. ಇದಕ್ಕೆ ನೆರಳು ಒದಗಿಸಲು ತೋಟಗಾರಿಕೆ ಇಲಾಖೆ ಏನಾದರೂ ಕ್ರಮ ಕೈಗೊಂಡರೆ ಉತ್ತಮ’ ಎಂದಿದ್ದಾರೆ ಮಂಜುನಾಥ್.

‘ನಮ್ಮಲ್ಲಿ ಮಲ್ಲಿಕಾ, ತೋತಾಪುರಿ, ಮಲಗೋಬಾ ಸೇರಿ ಸುಮಾರು 12 ವಿಧದ ಮಾವುಗಳಿವೆ. ಶ್ರೀನಿವಾಸಪುರದಲ್ಲಿ ಬೆಳೆಯುವ ಮಾವಿಗೆ ಭಾರಿ ಬೇಡಿಕೆಯಿದೆ. ಈ ಬಾರಿ ಫಸಲು ಕಡಿಮೆಯಾಗಿದೆ. ಮೇಳವನ್ನು ಇನ್ನೂ ಸ್ವಲ್ಪ ಮೊದಲೇ ಆಯೋಜಿಸಿದ್ದರೆ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಖರೀದಿಸಲು ಅವಕಾಶವಾಗುತ್ತಿತ್ತು. ಈಗಲೂ ಚೆನ್ನಾಗಿ ಮಾರಾಟವಾಗುತ್ತಿದೆ’ ಎಂದಿದ್ದಾರೆ ಶ್ರೀನಿವಾಸಪುರದ ರೈತ ಶ್ರೀನಿವಾಸ ರೆಡ್ಡಿ.

₹6 ಕೋಟಿ ವಹಿವಾಟು ನಿರೀಕ್ಷೆ

‘ಕಳೆದ ವರ್ಷದ ಮಾವು ಮೇಳದಲ್ಲಿ ಸುಮಾರು ₹8 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ₹6ಕೋಟಿ ವಹಿವಾಟು ನಿರೀಕ್ಷಿಸಲಾಗಿದೆ. ಇಳುವರಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಈ ಬಾರಿ 14 ಲಕ್ಷ ಟನ್‌ಗಳಷ್ಟು ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಆದರೆ ಬರಗಾಲದ ಪರಿಸ್ಥಿತಿ ಇರುವ ಕಾರಣ 4 ಲಕ್ಷ ಟನ್‌ಗಳಷ್ಟು ಇಳುವರಿ ಕಡಿಮೆಯಾಗಿದೆ’ ಎಂದುತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ವಿ.ವೆಂಕಟೇಶ್‌ ಮಾಹಿತಿ ನೀಡಿದ್ದಾರೆ.

***

‘ಮಧ್ಯವರ್ತಿಗಳ ಹಂಗಿಲ್ಲ’

‘ನಾವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಒಳ್ಳೆಯ ಬೆಲೆಯೂ ಸಿಗುತ್ತಿದೆ. ಮಧ್ಯವರ್ತಿಗಳ ಕಾಟವೂ ತಪ್ಪಿದೆ. ಮಾರಾಟ ಮೇಳಕ್ಕೆ ಗ್ರಾಹಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಸಂತಸದ ವಿಚಾರ. ಇಮಾಮ್ ಪಸಂದ್ ಎಂಬ ತಳಿ ನಮ್ಮಲ್ಲಿ ವಿಶೇಷವಾಗಿದ್ದು, ದೇಶ–ವಿದೇಶಗಳಲ್ಲಿ ಇದಕ್ಕೆ ಬೇಡಿಕೆ ಇದೆ.’

– ನೀಲಟೂರು ಚಿನ್ನಪ್ಪ ರೆಡ್ಡಿ,ಕೋಲಾರ ಮಾವು ಬೆಳೆಗಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT