ಗುರುವಾರ , ಆಗಸ್ಟ್ 11, 2022
21 °C
ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದಿದ್ದ ಬಿಬಿಎಂಪಿ

ಮಾಹೆ ಕ್ಯಾಂಪಸ್‌ ಕಟ್ಟಡ: ನಿಬಂಧನೆಯಿಂದ ವಿನಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಮಾಹೆ) ಸಂಸ್ಥೆಯು ಯಲಹಂಕ ಹೋಬಳಿಯಲ್ಲಿ ವಿಭಾಗೀಯ ಕ್ಯಾಂಪಸ್‌ ನಿರ್ಮಿಸುವ ಯೋಜನೆಗೆ ವಲಯ ನಿಬಂಧನೆಯಿಂದ ವಿನಾಯಿತಿ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ಸಂಪುಟ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವಾಸುದೇವಪುರ, ಗೋವಿಂದಪುರ ಹಾಗೂ ಕೆಂಚನಹಳ್ಳಿ ಗ್ರಾಮಗಳಲ್ಲಿ 80 ಎಕರೆ 4.32 ಗುಂಟೆ ಪ್ರದೇಶದಲ್ಲಿ ವಿಭಾಗೀಯ ಕ್ಯಾಂಪಸ್‌ ಸ್ಥಾಪಿಸಲು ಮಾಹೆ ಉದ್ದೇಶಿಸಿತ್ತು. ವಸತಿಯೇತರ (ಶೈಕ್ಷಣಿಕ) ಅಭಿವೃದ್ಧಿ ಯೋಜನೆಗಾಗಿ ನಗರ ಮೂಲಸೌಕರ್ಯ ಅಡಿಯಲ್ಲಿ ಮಾಹೆ ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಾಂಗಣ ನಿರ್ಮಿಸುವ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  (ಬಿಡಿಎ) 2020ರ
ಆ. 24ರಂದು ಅನುಮೋದನೆ ನೀಡಿತ್ತು. ಬಳಿಕ ಕಟ್ಟಡದ ಯೋಜನಾ ನಕ್ಷೆಯ ಮಂಜೂರಾತಿಗಾಗಿ ಸಂಸ್ಥೆಯು ಬಿಬಿಎಂಪಿಗೆ ಅರ್ಜಿ ಸಲ್ಲಿಸಿತ್ತು.

ಶೈಕ್ಷಣಿಕ ಪ್ರಾಂಗಣ ನಿರ್ಮಿಸಲು ಅದಕ್ಕೆ 18 ಮೀ ಅಗಲದ ರಸ್ತೆಯನ್ನು ಹೊಂದಿರುವುದು 2015ರ ಪರಿಷ್ಕೃತ ನಗರ ಮಹಾ ಯೋಜನೆ (ಆರ್‌ಎಂಪಿ 2015) ವಲಯ ನಿಬಂಧನೆಗಳ ಪ್ರಕಾರ ಕಡ್ಡಾಯ. ಮಾಹೆಯು ವಿಭಾಗೀಯ ಪ್ರಾಂಗಣ ನಿರ್ಮಿಸಲು ಉದ್ದೇಶಿಸಿರುವ ಜಮೀನಿನ ಮುಂಭಾಗದಲ್ಲಿ 2031ರ ನಗರ ಮಹಾಯೋಜನೆಯ (ಆರ್‌ಎಂಪಿ) ಕರಡಿನಲ್ಲಿ 100 ಮೀ ಅಗಲದ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ, ಪಾಲಿಕೆಯು ಅನುಮೋದನೆ ನೀಡುವಾಗ ಈಗ ಇರುವ ರಸ್ತೆಯ ಅಗಲವನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಆದರೆ ಕ್ಯಾಂಪಸ್‌ನ ಸಂಪರ್ಕ ರಸ್ತೆಗಳು 10.60 ಮೀ ಹಾಗೂ 12.60 ಮೀ ಅಗಲ ಇವೆ. ಹಾಗಾಗಿ ಈ ಪ್ರಾಂಗಣದ ಕಟ್ಟಡ ನಕ್ಷೆಗೆ ಅನುಮೋದನೆ ನೀಡಬೇಕೇ ಬೇಡವೇ ಎಂಬ ಬಗ್ಗೆ ನಿರ್ದೇಶನ ಕೋರಿ ಬಿಬಿಎಂಪಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರವು ಆರ್‌ಎಂಪಿ 2015ರ ಬಿಡಿಎ ಬಡಾವಣೆ ಯೋಜನೆಗಳ ನಿಯಮಗಳಿಂದ ಒಂದು ಬಾರಿ ವಿನಾಯಿತಿ ನೀಡಿದೆ.

‘ದೇಶದಲ್ಲಿ ಉನ್ನತ ಶಿಕ್ಷಣ ನೀಡುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಉತ್ಕೃಷ್ಟ ಸಂಸ್ಥೆಗಳನ್ನು (ಇನ್‌ಸ್ಟಿಟ್ಯೂಟ್‌ ಆಫ್‌ ಎಮಿನನ್ಸ್) ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪಟ್ಟಿ ಮಾಡಿದ್ದು, ಅದರಲ್ಲಿ ಮಾಹೆಯು ಸ್ಥಾನ ಪಡೆದಿದೆ. ಈ ಸಂಸ್ಥೆಯು ನಿರ್ಮಿಸಲು ಹೊರಟಿರುವ ವಿಭಾಗೀಯ ಪ್ರಾಂಗಣಕ್ಕೆ ಸಂಸ್ಥೆಯು ₹ 1 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ. ಇದರಿಂದ 1500 ಮಂದಿಗೆ ಉದ್ಯೋಗ ಲಭಿಸಲಿದೆ ಎಂದು ಸಂಸ್ಥೆ ಹೇಳಿದೆ.

ಹಾಗಾಗಿ ವಿಭಾಗೀಯ ಪ್ರಾಂಗಣ ನಿರ್ಮಾಣದ ಯೋಜನೆ ಸಲುವಾಗಿ ವಲಯ ನಿಬಂಧನೆಯ ನಿಯಮದಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ ಸಮಿತಿ ಅನುಮೋದನೆ
ಮಾಹೆಯ ವಿಭಾಗೀಯ ಪ್ರಾಂಗಣದ ಅಭಿವೃದ್ಧಿ ನಕ್ಷೆಗೆ ವಲಯ ನಿಬಂಧನೆಗಳಿಂದ ವಿನಾಯಿತಿ ನೀಡಿ  ಅನುಮೋದನೆ ನೀಡುವ ಬಗ್ಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ 2019ರ ಮಾ.30ರಂದು ನಡೆದಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ಮಾಹೆಗೆ ಉಡುಪಿ ಜಿಲ್ಲೆಯ ಶಿವಳ್ಳಿ, ಹೆರ್ಗ ಹಾಗೂ 80 ಬಡಗಬೆಟ್ಟು ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಸರ್ಕಾರ 50 ವರ್ಷಗಳ ಹಿಂದೆ ಶೈಕ್ಷಣಿಕ ಉದ್ದೇಶಕ್ಕಾಗಿ 266.27 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಸಂಸ್ಥೆಯು ಸರ್ಕಾರದ ಪೂರ್ವಾನುಮತಿ ಪಡೆಯದೆ ಮಂಜೂರಾತಿ ಷರತ್ತನ್ನು ಉಲ್ಲಂಘಿಸಿದ್ದಕ್ಕೆ 2015ರ ಜೂನ್ 5ರಂದು ಸರ್ಕಾರ ₹ 1123.63 ಕೋಟಿ ದಂಡ ವಿಧಿಸಲು ತೀರ್ಮಾನಿಸಿತ್ತು. ದಂಡ ಪಾವತಿಸುವಂತೆ ಉಡುಪಿ ಜಿಲ್ಲಾಧಿಕಾರಿ ಅವರು 2015ರ ಜೂನ್‌ 25ರಂದು ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದ್ದರು. ಇದನ್ನು ಸಂಸ್ಥೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ದಂಡ ವಸೂಲಿ ಕುರಿತ ಸರ್ಕಾರದ ಆದೇಶವನ್ನು ಹಾಗೂ ಜಿಲ್ಲಾಧಿಕಾರಿ ನೀಡಿದ್ದ ನೋಟಿಸ್‌ ಅನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಈ ಕುರಿತೂ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು