ಮಂಗಳವಾರ, ಫೆಬ್ರವರಿ 18, 2020
27 °C

ಮಾರುಕಟ್ಟೆಗೆ ಬಗೆಬಗೆ ಸೇವಂತಿಗೆ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಕೆ.ಆರ್‌.ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿಗಳ ಮಾರಾಟ ಭರದಿಂದ ಸಾಗಿದೆ. ಮಾರುಕಟ್ಟೆಗೆ ಬಗೆಬಗೆಯ ಸೇವಂತಿಗೆ ಹೂಗಳು ಲಗ್ಗೆ ಇಟ್ಟಿವೆ.

ಗಣೇಶನ ಹಬ್ಬಕ್ಕೆ ಹೆಚ್ಚಾಗಿ ಸೇವಂತಿಗೆ ಹೂವನ್ನು ಬಳಸುತ್ತಾರೆ. ಹಳದಿ, ಬಿಳಿ ಹಾಗೂ ಕೇಸರಿ ಬಣ್ಣದ ಸೇವಂತಿಗೆ ಹೂಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ₹100ರಿಂದ ₹200ರವರೆಗೆ ಮಾರಾಟವಾಗುತ್ತಿದೆ. ಇದರಲ್ಲಿ ಬಿಳಿ ಸೇವಂತಿಗೆಯ ಬೆಲೆ ಅಧಿಕವಾಗಿದೆ. 

ಸತತ ಮಳೆಯಿಂದ ನೆಲಕಚ್ಚಿದ್ದ ಹೂವು ಮತ್ತು ತರಕಾರಿ ದರಗಳು ಕೊಂಚ ಚೇತರಿಕೆ ಕಂಡುಕೊಂಡಿದ್ದು, ಮಂಗಳವಾರ ಕನಕಾಂಬರ ಕೆ.ಜಿಗೆ ₹600ರಂತೆ ಮಾರಾಟವಾಯಿತು. ಮಲ್ಲಿಗೆ ₹400, ಮಳ್ಳೆ ಹೂ ಬೆಲೆ ₹160 ಇತ್ತು.

ತರಕಾರಿ ಅಗ್ಗ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ನೂರರ ಗಡಿ ದಾಟಿಲ್ಲ. ತರಕಾರಿ ಬೆಲೆ ಸಾಮಾನ್ಯ ದರಕ್ಕಿಂತ ಕಡಿಮೆ ಆದ ಕಾರಣ ಖರೀದಿ ವೇಳೆ ಗ್ರಾಹಕರಲ್ಲಿ ಸಂತಸ ಮೂಡಿದೆ. ಬೆಳ್ಳುಳ್ಳಿ ಪ್ರತಿ ಕೆ.ಜಿಗೆ ₹100, ಬೀನ್ಸ್‌ ₹40, ಬೆಂಡೆಕಾಯಿ ₹40, ಹೀರೆಕಾಯಿ ₹70, ಹಾಗಲಕಾಯಿ ₹40, ಟೊಮೆಟೊ ₹20ರಂತೆ ಮಾರಾಟವಾಯಿತು.

ಹಣ್ಣುಗಳಲ್ಲಿ ದ್ರಾಕ್ಷಿ ದರ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹200ರಷ್ಟಿದೆ. ಸೇಬು ₹80ರಿಂದ ₹100, ಸೀಬೆಕಾಯಿ ₹70, ದಾಳಿಂಬೆ ₹70, ಮೂಸಂಬಿ ₹50 ಬೆಲೆ ಇತ್ತು.

‘ಗಣೇಶನ ಹಬ್ಬ ಸಮೀಪಿಸುತ್ತಿರುವುದರಿಂದ ವ್ಯಾಪಾರ ಚೇತರಿಕೆಯಾಗಿದೆ. ಮಳೆ ನಿಂತ ಕಾರಣ ಕುಗ್ಗಿದ್ದ ತರಕಾರಿ ದರ ಕೊಂಚ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ವೆಂಕಟೇಶ್‌ ತಿಳಿಸಿದರು. 

‘ಪ್ರತಿ ಹಬ್ಬಕ್ಕೂ ಕೆಲ ದಿನಗಳ ಮುನ್ನವೇ ತರಕಾರಿ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ. ಅದರಂತೆ ಗಣೇಶ ಚತುರ್ಥಿಗೆ ತರಕಾರಿ ಖರೀದಿಸಲು ಬಂದೆ. ಹೂಗಳ ದರಕ್ಕೆ ಹೋಲಿಸಿದರೆ ತರಕಾರಿ ಬೆಲೆ ಕಡಿಮೆ ಇದೆ’ ಎಂದು ಗ್ರಾಹಕಿ ನವಜಾಕ್ಷಿ ಸಂತಸ
ವ್ಯಕ್ತಪಡಿಸಿದರು. 

ಹೂವಿಗೆ ತಿಂಗಳಿಡೀ ಬೇಡಿಕೆ

‘ಗಣೇಶನ ಹಬ್ಬ ಬೇರೆ ಹಬ್ಬಗಳಂತಲ್ಲ. ಹಬ್ಬ ಆರಂಭವಾದ ದಿನದಿಂದ ತಿಂಗಳಿಡೀ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ಗಣೇಶನ ವಿಸರ್ಜನೆ ವೇಳೆ ಅಲಂಕಾರಕ್ಕಾಗಿ ಹೂಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಹೀಗಾಗಿ ಹೊರರಾಜ್ಯಗಳಿಂದಲೂ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಮುಂಬೈ, ಕೋಲ್ಕತ್ತ, ಹೈದರಾಬಾದ್‌, ಚೆನ್ನೈಗೆ ಹೂ 
ರವಾನೆಯಾಗುತ್ತದೆ. ಹೀಗಾಗಿ ಸೆಪ್ಟೆಂಬರ್‌ ತಿಂಗಳ ಪೂರ್ತಿ ಹೂಗಳಿಗೆ ಬೇಡಿಕೆ ಇರುತ್ತದೆ’ ಎಂದು ಹೂವಿನ ವ್ಯಾಪಾರಿ ಮನೋಜ್‌ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು