ಗುರುವಾರ , ಅಕ್ಟೋಬರ್ 21, 2021
29 °C
ಮನೆ ಬಾಡಿಗೆ– ಶಾಲಾ ಶುಲ್ಕ ಕಟ್ಟಲೂ ಹರಸಾಹಸ

ಕೋವಿಡ್: ‘ಮದುವೆ’ ನಂಬಿ ಬದುಕುತ್ತಿದ್ದವರ ಬದುಕು ದುಸ್ತರ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೊಲೀಸರಿಂದ ಪರ್ಮಿಷನ್‌ ಸಿಕ್ಕಿದೆ. ಏನೂ ಪ್ರಾಬ್ಲಂ ಇಲ್ಲ. ನಾಡಿದ್ದು ಮದುವೆ. ನಾಳೆ ಬೆಳಿಗ್ಗೆಯೇ ತರಕಾರಿ– ಹೂವು ಎಲ್ಲ ತಂದ್ಬಿಡಿ ಎಂದು ಫೋನ್ ಬಂತು. ಎಷ್ಟೋ ದಿನಗಳ ನಂತರ ವ್ಯಾಪಾರ ಸಿಕ್ತು ಎಂಬ ಖುಷಿಯಲ್ಲಿ, ಅಕ್ಕ–ಪಕ್ಕದ ರೈತರಿಂದ 30 ಸಾವಿರ ರೂಪಾಯಿಯ ತರಕಾರಿ, 20 ಸಾವಿರ ರೂಪಾಯಿ ಹೂವು ತೆಗೆದುಕೊಂಡು, ಬಾಡಿಗೆ ಗಾಡಿಯಲ್ಲಿ ಹಾಕಿಕೊಂಡು ಸ್ಥಳಕ್ಕೆ ಹೋದೆ. ಮದುವೆ ರದ್ದಾಗಿತ್ತು. ಫೋನ್‌ ಮಾಡಿದವರಿಗೆ ಕರೆ ಮಾಡಿದರೆ ಅವರ ಫೋನ್‌ ಸ್ವಿಚ್ಡ್‌ ಆಫ್ ! ಯಾರೊಬ್ಬರೂ ಕರೆ ಸ್ವೀಕರಿಸಲಿಲ್ಲ. ಒಯ್ದಿದ್ದ ಟೊಮೆಟೊ, ಹೂವು ಎಲ್ಲವನ್ನೂ ಬೀದಿಗೆ ಎಸೆದು ಬಂದೆ. ಬಾಡಿಗೆ ಕೊಡಲು ಆಗದಿದ್ದ ಮೇಲೆ ಗಾಡಿ ಯಾಕ್ರಿ ಬುಕ್ ಮಾಡ್ತೀರಾ... ಇಂಥ ಬದುಕು ಬಾಳೋ ಬದಲು ಭಿಕ್ಷೆಯಾದರೂ ಬೇಡಿ ಎಂದು ಗಾಡಿಯವನು ರೇಗಿದ...’ ಹೀಗೆ ಹೇಳುತ್ತಾ ಕಣ್ಣೀರಾದರು ದೊಡ್ಡಬಳ್ಳಾಪುರದ ರೈತ ನರಸಿಂಹರಾಜು.

‘12 ವರ್ಷದವನಿದ್ದಾಗಿನಿಂದ ಅಡುಗೆ ಕೆಲಸ ಮಾಡುತ್ತಿದ್ದೇನೆ. 25 ವರ್ಷ ದುಡಿದರೂ ನೆಲೆ ನಿಲ್ಲಲು ಆಗಿಲ್ಲ. ಒಂದೂವರೆ ವರ್ಷದಿಂದ ಕೆಲಸವೇ ಸಿಗಲಿಲ್ಲ. ಅಡುಗೆ ಕೆಲಸ ಮಾಡುವುದು ಬಿಟ್ಟು ನನಗೆ ಬೇರೆನೂ ಗೊತ್ತಿಲ್ಲ. ಈಗ ಕೆಲಸ ಇಲ್ಲದೆ ಮನೆಗೆ ಹೋಗಿದ್ದೇನೆ. ಈ ವಯಸ್ಸಿನಲ್ಲಿ ತಂದೆ–ತಾಯಿಗೆ ಭಾರವಾಗಿ ಇರಬೇಕಾಗಿದೆ’ ಎಂದು ಅಳಲು ತೋಡಿಕೊಂಡರು ವಿಶ್ವನಾಥ್. 

‘ಮದುವೆ’ಗಳನ್ನೇ ನಂಬಿ ಜೀವನ ನಡೆಸುವ ಒಂದು ವರ್ಗವೇ ಇದೆ. ಕಲ್ಯಾಣ ಮಂಟಪದವರು, ಪುರೋಹಿತರು, ಅಡುಗೆಯವರು, ಹೂವು–ತರಕಾರಿ ಮಾರುವವರು, ಪಾತ್ರೆ ತೊಳೆಯುವವರು, ವಾಲಗದವರು... ಇಂತಹ ಒಂದು ಸಮೂಹವನ್ನೇ ಅಲ್ಲೋಲ–ಕಲ್ಲೋಲಗೊಳಿಸಿದ್ದು ಕೋವಿಡ್‌ ಬಿಕ್ಕಟ್ಟು. 

ಬ್ಯಾಂಕ್‌ ಸಾಲದ ಕಂತು ಕಟ್ಟಲಾಗದೆ ಕಲ್ಯಾಣ ಮಂಟಪಗಳನ್ನು ಮಾರಿದವರು ಒಂದೆಡೆಯಾದರೆ, ಬೆಂಗಳೂರು ಬಿಟ್ಟು ಸ್ವಂತ ಊರ ಹಾದಿ ಹಿಡಿದವರು ಅನೇಕರು. ಮನೆಯ ಬಾಡಿಗೆ ಕಟ್ಟಲಾಗದೆ, ಮಕ್ಕಳ ಶಾಲಾ ಶುಲ್ಕವನ್ನೂ ಭರಿಸಲಾಗದೆ ಪರಿತಪಿಸುತ್ತಿರುವವರಿಗೆ ಲೆಕ್ಕವಿಲ್ಲ. 

ಕಲ್ಯಾಣಮಂಟಪಗಳು ಸ್ಥಗಿತಗೊಂಡ ಒಂದೂವರೆ ವರ್ಷದ ನಂತರ, ಸೆ.1ರಿಂದ, ಮದುವೆ ಕಾರ್ಯಕ್ರಮಗಳಲ್ಲಿ 400 ಜನ ಅಥವಾ ಸಭಾಂಗಣ ಸಾಮರ್ಥ್ಯದ ಶೇ 50ರಷ್ಟು ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲಾಯಿತು. ಕಲ್ಯಾಣಮಂಟಪಗಳ ಮಾಲೀಕರು ನಿಟ್ಟುಸಿರು ಬಿಟ್ಟರು.

ಆದರೆ, ಮತ್ತೆ ಮುಹೂರ್ತ ನೋಡಿ ಮದುವೆ ನಿಗದಿ ಆಗುವುದಕ್ಕೆ ಒಂದೂವರೆ, ಎರಡು ತಿಂಗಳುಗಳು ಬೇಕು. ಈಗ, ಪಿತೃ ಪಕ್ಷವಿದೆ. ಮುಂದಿನ ಮಹಾಲಯ ಅಮಾವಾಸ್ಯೆಯವರೆಗೂ ಯಾವುದೇ ಮದುವೆ–ಶುಭ ಸಮಾರಂಭಗಳು ನಡೆಯುವುದಿಲ್ಲ. ನಮ್ಮ ಕಷ್ಟ ನೀಗುವುದಿಲ್ಲ ಎನ್ನುತ್ತಾರೆ ಕಲ್ಯಾಣ ಮಂಟಪಗಳ ಮಾಲೀಕರು. 

‘ಆಲಂಕಾರಿಕ ವಸ್ತುಗಳನ್ನೆಲ್ಲ ಕೊಂಡು ತಂದು ಗೋದಾಮಿನಲ್ಲಿ ಇಟ್ಟಿದ್ದೇವೆ. ಮದುವೆ ಸಮಾರಂಭ ನಡೆಯದೆ ಎಲ್ಲವೂ ಹಾಳಾಗುತ್ತಿವೆ. ಗೋದಾಮಿನ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗುತ್ತಿದೆ’ ಎಂದು ‘ಫ್ಲವರ್‌ ಡೆಕೊರೇಷನ್‌’ನ ನಾಗೇಂದ್ರ ಅಳಲು ತೋಡಿಕೊಂಡರು. 

‘ನನ್ನ ಬಳಿ 200 ಹುಡುಗರು ಕೆಲಸ ಮಾಡುತ್ತಿದ್ದರು. ಈಗ ಬಹಳಷ್ಟು ಜನ ಕೆಲಸ ಬಿಟ್ಟು ಹೋಗಿದ್ದಾರೆ. ಅವರಿಗೆ ಅರ್ಧ ಸಂಬಳ ಕೊಡಲೂ ಆಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸರ್ಕಾರದಿಂದ ದಿನಸಿ ಕಿಟ್‌ ಕೂಡ ಅವರಿಗೆ ಸಿಕ್ಕಿಲ್ಲ. ನಮ್ಮ ಅಸಹಾಯಕತೆ ಮತ್ತು ಅವರ ಕಷ್ಟ ನೆನೆದರೆ ಕಣ್ಣೀರು ಬರುತ್ತದೆ’ ಎಂದರು ಎಸ್‌ಬಿಆರ್ ಕೆಟರರ್ಸ್‌ನ ರಘು. ‌

‘ಉದ್ಯಮವೆಂದೇ ಪರಿಗಣಿಸುತ್ತಿಲ್ಲ’
‘ಕಲ್ಯಾಣ ಮಂಟಪಗಳೂ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಡಿ (ಎಂಎಸ್‌ಎಂಇ) ನೋಂದಣಿಯಾಗಿವೆ. ಆದರೆ, ಆ ಉದ್ಯಮಗಳಿಗೆ ಸಿಗುತ್ತಿರುವ ಯಾವುದೇ ಸೌಲಭ್ಯಗಳು ಕಲ್ಯಾಣ ಮಂಟಪಗಳಿಗೆ ಸಿಗುತ್ತಿಲ್ಲ’ ಎಂದು ಕರ್ನಾಟಕ ಮ್ಯಾರೇಜ್ ಹಾಲ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ರಮೇಶ್‌ ರೆಡ್ಡಿ ‌‌ಹೇಳಿದರು. 

‘ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಕಲ್ಯಾಣ ಮಂಟಪಗಳಿಗೆ ವಿದ್ಯುತ್‌ ನಿಶ್ಚಿತ ಶುಲ್ಕ (ಫಿಕ್ಸ್ಡ್‌ ಚಾರ್ಜಸ್‌), ಬಿಬಿಎಂಪಿ ಉದ್ದಿಮೆ ಪರವಾನಗಿ ಶುಲ್ಕ ಮನ್ನಾ ಮಾಡಬೇಕು. ಜಿಎಸ್‌ಟಿ ಹಾಗೂ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು. ಕಲ್ಯಾಣ ಮಂಟಪಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರ್ಥಿಕ ನೆರವು ನೀಡಬೇಕು ಎಂದು ಹಲವು ಬಾರಿ ಬೇಡಿಕೆ ಸಲ್ಲಿಸಿದ್ದೇವೆ. ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ’ ಎಂದು ಹೇಳಿದರು.

***

ತಿಂಗಳಿಗೆ ₹15 ಸಾವಿರ ದುಡಿಯುತ್ತಿದ್ದೆ. ಈಗ ₹5 ಸಾವಿರವೂ ಸಿಗುತ್ತಿಲ್ಲ. ಮೂರು ಲಕ್ಷ ಸಾ ಲ ಮಾಡಿದ್ದೇನೆ. ಹೆಂಡತಿ ತಾಳಿ ಅಡ ಇಟ್ಟು ಸಾಲ ತೀರಿಸಬೇಕಾದ ಸ್ಥಿತಿ ಇದೆ.
-ಗುರುರಾಜ್, ಅಡುಗೆಯವರು

***

ಒಂದು ಮದುವೆಗೆ 10 ರಿಂದ 15 ಜನ ವಾಲಗದವರು ಇರುತ್ತಿದ್ದರು. ಈಗ 3 ಅಥವಾ ನಾಲ್ಕು ಜನ ಸಾಕು ಎನ್ನುತ್ತಾರೆ. ಮೊದಲಿಗಿಂತ ಅರ್ಧದಷ್ಟು ದುಡ್ಡು ಕೊಡಲು ಸಿದ್ದರಿಲ್ಲ.
-ಎನ್. ಮಂಜುನಾಥ್, ನಾದಸ್ವರ ವಾದಕ

ಅಂಕಿ– ಅಂಶ
2,500: ರಾಜ್ಯದಲ್ಲಿರುವ ಕಲ್ಯಾಣಮಂಟಪಗಳ ಅಂದಾಜು ಸಂಖ್ಯೆ
700: ಬೆಂಗಳೂರಿನಲ್ಲಿರುವ ಕಲ್ಯಾಣಮಂಟಪಗಳ ಅಂದಾಜು ಸಂಖ್ಯೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು