ಸೋಮವಾರ, ಆಗಸ್ಟ್ 26, 2019
21 °C
ಮೇಯರ್‌ ಗಂಗಾಂಬಿಕೆ ಸೂಚನೆ

ಮೆಜೆಸ್ಟಿಕ್‌: ಟೆಂಡರ್ ಶ್ಯೂರ್ ಕಾಮಗಾರಿ ಶೀಘ್ರ ಮುಗಿಸಿ

Published:
Updated:
Prajavani

ಬೆಂಗಳೂರು: ಮೆಜೆಸ್ಟಿಕ್‌ನ ಸುಬೇದಾರ್ ಛತ್ರ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ನಡೆಯುತ್ತಿರುವ ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಮೇಯರ್‌ ಗಂಗಾಂಬಿಕೆ ಸೂಚನೆ ನೀಡಿದರು.

ಧನ್ವಂತರಿ ಮುಖ್ಯ ರಸ್ತೆ ಹಾಗೂ 11 ಅಡ್ಡ ರಸ್ತೆಗಳ ಕಾಮಗಾರಿಗಳು ಈಗಾಗಲೇ ‍ಪೂರ್ಣಗೊಂಡಿವೆ. ಇನ್ನುಳಿದ 5 ಮುಖ್ಯರಸ್ತೆಗಳು ಹಾಗೂ 6 ಅಡ್ಡರಸ್ತೆಗಳ ಕಾಮಗಾರಿಗಳು ಪ್ರಗತಿ ಯಲ್ಲಿವೆ. 600 ಮೀಟರ್ ಉದ್ದದ ಸುಬೇದಾರ್ ಛತ್ರ ರಸ್ತೆಯಲ್ಲಿ ಸುಮಾರು 400 ಮೀಟರ್‌ಗಳಷ್ಟು ಕಾಮಗಾರಿ ಪೂರ್ಣಗೊಂಡಿದೆ. 200 ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

ಈ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಮೇಯರ್‌ ಗುರುವಾರ ತಪಾಸಣೆ ನಡೆಸಿದರು. 

‘ಗಾಂಧಿನಗರ ವಾರ್ಡ್ ನಗರದ ಹೃದಯ ಭಾಗದಲ್ಲಿದ್ದು, ಇಲ್ಲಿ ಸದಾ ವಾಹನ ದಟ್ಟಣೆ ಹೆಚ್ಚಿರುತ್ತದೆ. ಇಲ್ಲಿನ ಎಲ್ಲಾ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ಕೈಗೆತ್ತಿಕೊಂಡರೆ ಸಂಚಾರ ದಟ್ಟಣೆ ಮತ್ತಷ್ಟು ಉಲ್ಬಣವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಹಂತ ಹಂತವಾಗಿ ಕಾಮಗಾರಿ ನಡೆಸುವಂತೆ  ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. 

‘ಒಳಚರಂಡಿ ಕೊಳವೆ ಅಳವಡಿಸುವ ಕೆಲಸ ವಿಳಂಬವಾದ ಕಾರಣ ರಸ್ತೆ ಕಾಮಗಾರಿಗೂ ಅಡ್ಡಿ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಒಂದು ಪಾರ್ಶ್ವದ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ, ಅಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೊಂದು ಭಾಗದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.

ಕಾಮಗಾರಿ ನಡೆಯುತ್ತಿರುವ ಕಡೆ ಕುಡಿಯುವ ನೀರಿನ ಪೈಪ್ ಲೈನ್, ಒಳಚರಂಡಿ, ಮಳೆ ನೀರು ಕಾಲುವೆ ಹಾಗೂ ಕೇಬಲ್ ಅಳವಡಿಕೆಗೆ ಅಗೆದಿರುವ ಗುಂಡಿಗಳ ಬಳಿ ಬ್ಯಾರಿಕೇಡ್ ಅಳವಡಿಸುವಂತೆ ಅಧಿಕಾರಿಗಳಿಗೆ ಮೇಯರ್‌ ಸೂಚಿಸಿದರು.

ರಸ್ತೆ ಮೇಲೆ ಕೊಳಚೆನೀರು

ಗಾಂಧಿನಗರದ ವಾರ್ಡ್‌ನ ಹಿಮಾಲಯ ಬಡಾವಣೆಯಲ್ಲಿ ರಸ್ತೆ ಮೇಲೆ ಒಳಚರಂಡಿಯ ಕೊಳಚೆನೀರು ಹರಿಯುತ್ತಿದೆ. ಇಲ್ಲಿಗೆ ಕುಡಿಯುವ ನೀರಿನ ಪೂರೈಕೆಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಮೇಯರ್‌ ಬಳಿ ಅಳಲು ತೋಡಿಕೊಂಡರು.  

ತಕ್ಷಣವೇ ಜಲಮಂಡಳಿ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ ಮೇಯರ್‌, ‘ಕೊಳಚೆ ನೀರು ರಸ್ತೆಯಲ್ಲೇ ಹರಿಯುವ ಸಮಸ್ಯೆ ಬಗೆಹರಿಸಬೇಕು. ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

 ಶಂಕುಸ್ಥಾಪನೆ, ಉದ್ಘಾಟನೆ ಮುಂದೂಡಿಕೆ

ಇದೇ 9 ರಂದು ಸಂಜೆ 5 ಗಂಟೆಗೆ ಜಯನಗರ ವಾರ್ಡ್‌ (153) ವ್ಯಾಪ್ತಿಯಲ್ಲಿ ನಿರ್ಮಿಸಿರುವ ಶಿವಕುಮಾರ ಸ್ವಾಮೀಜಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ, ಸ್ವಾಮೀಜಿಯ ಕಂಚಿನ ಪ್ರತಿಮೆ ಅನಾವರಣ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ, ಮುಖ್ಯಮಂತ್ರಿ ಅವರು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿರುವ ಕಾರಣ ಈ ಕಾರ್ಯಕ್ರಮವನ್ನು ಪಾಲಿಕೆ ತಾತ್ಕಾಲಿಕವಾಗಿ ಮುಂದೂಡಿದೆ.

ಅಂಕಿ ಅಂಶ

9.73 ಕಿ.ಮೀ: ಮೆಜೆಸ್ಟಿಕ್‌ ಬಳಿ ಟೆಂಡರ್‌ ಶ್ಯೂರ್‌ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿರುವ ರಸ್ತೆಗಳ ಉದ್ದ

₹ 129 ಕೋಟಿ: ಈ ಯೋಜನೆಯ ಅಂದಾಜು ವೆಚ್ಚ

6: ಮುಖ್ಯರಸ್ತೆಗಳನ್ನು ಈ ಯೋಜನೆ ಅಡಿ ಮೇಲ್ದರ್ಜೆಗೇರಿಸಲಾಗುತ್ತಿದೆ

17: ಅಡ್ಡ ರಸ್ತೆಗಳನ್ನು ಅಭಿವೃದ್ಧಿಪಡಿಲಾಗುತ್ತಿದೆ

 

Post Comments (+)