ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: 297 ದಿನಗಳಿಂದ ಪ್ರತಿಭಟನೆ !

ವೆಲ್ಲಾರ ಜಂಕ್ಷನ್‌ ನಿಲ್ದಾಣಕ್ಕಾಗಿ ಚರ್ಚ್‌ ಜಾಗ ಸ್ವಾಧೀನಕ್ಕೆ ವಿರೋಧ
Last Updated 12 ಮಾರ್ಚ್ 2020, 22:27 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಮಾರ್ಗ ನಿರ್ಮಾಣಕ್ಕಾಗಿ ವೆಲ್ಲಾರ ಜಂಕ್ಷನ್‌ ಬಳಿಯ ಆಲ್‌ ಸೇಂಟ್ಸ್‌ ಚರ್ಚ್‌ ಆವರಣದಲ್ಲಿ ಸುರಂಗ ಕೊರೆಯಲು ನಿರ್ಧರಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವಿರುದ್ಧ ಚರ್ಚ್‌ನ ಸದಸ್ಯರು ನಡೆಸಿರುವ ಪ್ರತಿಭಟನೆ ಮುಂದುವರಿದಿದೆ. ಮೌನ ಪ್ರತಿಭಟನೆಯು ಗುರುವಾರ 297ನೇ ದಿನಕ್ಕೆ ಕಾಲಿಟ್ಟರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.

ಚರ್ಚ್‌ನ 20ಕ್ಕೂ ಹೆಚ್ಚು ಸದಸ್ಯರು ಅಂದಿನಿಂದ ನಿತ್ಯವೂ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಜಾಗ ತನಗೆ ಸೇರಿದ್ದು, ಮಾರಾಟ ಮಾಡಲು ಚರ್ಚ್‌ಗೂ ಯಾವುದೇ ಹಕ್ಕು ಇಲ್ಲ ಎಂದು ರಕ್ಷಣಾ ಇಲಾಖೆ ಹೇಳುತ್ತಿದೆ.

ನಾಗವಾರ–ಗೊಟ್ಟಿಗೆರೆ ಮಾರ್ಗದ ಈ ವೆಲ್ಲಾರ ಜಂಕ್ಷನ್‌ನಲ್ಲಿ ಬರುವ ಈ ಚರ್ಚ್‌ ಜಾಗದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ನಿಗಮವು ಮುಂದಾಗಿದೆ. 2011ರಲ್ಲಿ ರೂಪಿಸಲಾಗಿರುವ ಮೂಲ ಸಮಗ್ರ ಯೋಜನಾ ವರದಿಯಲ್ಲಿ (ಡಿಪಿಆರ್‌) ಚರ್ಚ್‌ ಆಸ್ತಿಗೆ ಹಾನಿಯಾಗುವ ಯಾವುದೇ ಪ್ರಸ್ತಾವ ಇರಲಿಲ್ಲ. ಆದರೆ, 2019ರ ಜೂನ್‌ನಲ್ಲಿ ತನ್ನ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಂಡ ಬಿಎಂಆರ್‌ಸಿಎಲ್, ಚರ್ಚ್‌ ಆಸ್ತಿಯನ್ನು ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವುದಕ್ಕೆ ಚರ್ಚ್‌ನ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

‘ವೆಲ್ಲಾರ ಜಂಕ್ಷನ್‌ ನಿರ್ಮಾಣಕ್ಕಾಗಿಚರ್ಚ್‌ನ 3,618 ಚದರ ಮೀಟರ್‌ನಷ್ಟು ಭೂಮಿಯನ್ನು ನಿಗಮವು ಸ್ವಾಧೀನ ಪಡಿಸಿಕೊಂಡಿದೆ. ನಿರ್ಮಾಣ ಚಟುವಟಿಕೆ ಕೈಗೆತ್ತಿಕೊಳ್ಳಲು ಹೆಚ್ಚುವರಿಯಾಗಿ 3,797 ಚದರ ಮೀಟರ್‌ ಭೂಮಿ ವಶಪಡಿಸಿಕೊಳ್ಳಲು ನಿಗಮವು ಪ್ರಸ್ತಾವ ಸಲ್ಲಿಸಿದೆ. ಇದರಿಂದ 150 ವರ್ಷಗಳ ಹಳೆಯ ಚರ್ಚ್‌ ಅನ್ನು ನೆಲಸಮ ಮಾಡಬೇಕಾಗುತ್ತದೆ. ಅಲ್ಲದೆ, ಚರ್ಚ್‌ ಆಚರಣದಲ್ಲಿ
ರುವ 100ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಬೇಕಾಗುತ್ತದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದು ಚರ್ಚ್‌ನ ಸದಸ್ಯ ರೊನಾಲ್ಡ್‌ ಫರ್ನಾಂಡಿಸ್‌ ಹೇಳುತ್ತಾರೆ.

‘ಚರ್ಚ್‌ ಕಟ್ಟಡವನ್ನು ಸ್ಥಳಾಂತರಿಸಿ, ಸುರಂಗ ನಿಲ್ದಾಣ ನಿರ್ಮಾಣ ಮಾಡಿದ ನಂತರ, ಅದರ ಮೇಲೆ ಮತ್ತೆ ಚರ್ಚ್‌ ನಿರ್ಮಾಣ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಹೇಳುತ್ತಿದೆ. ಇದು ಸಾಧ್ಯವಾಗದ ಮಾತು. ಚರ್ಚ್‌ ಜಾಗ ಹೊರತು ಪಡಿಸಿ, ರಕ್ಷಣಾ ಇಲಾಖೆಯಲ್ಲಿನ ಜಾಗದಲ್ಲಿ ನಿಲ್ದಾಣ ನಿರ್ಮಾಣ ಮಾಡಲು ಅವಕಾಶವಿದೆ.ನಿಗಮ ಈ ನಿಟ್ಟಿನಲ್ಲಿ ಯೋಚಿಸಬೇಕು. ನಿಗಮ ತನ್ನ ನಿರ್ಧಾರ ಬದಲಿಸುವವರೆಗೆ ನಮ್ಮ ಮೌನ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.

‘ಸಂಧಾನ ನಡೆಯುತ್ತಿದೆ’
‘ವೆಲ್ಲಾರ ಜಂಕ್ಷನ್‌ನಲ್ಲಿ ನಿಲ್ದಾಣ ನಿರ್ಮಿಸಬೇಕೆಂದರೆ ಚರ್ಚ್‌ ಜಾಗ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಹೆಚ್ಚುವರಿಯಾಗಿ 3,797 ಚದರ ಮೀಟರ್‌ ಬೇಕಾಗಿತ್ತು. ಈಗ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. 1,140 ಚದರ ಮೀಟರ್‌ ಜಾಗ ಬೇಕಾಗುತ್ತದೆ. ಇದಕ್ಕೂ ಚರ್ಚ್‌ನ ಕೆಲವು ಸದಸ್ಯರು ಒಪ್ಪುತ್ತಿಲ್ಲ. ಸಂಧಾನ ಮಾತುಕತೆ ನಡೆಯುತ್ತಿದೆ’ ಎಂದು ಬಿಎಂಆರ್‌ಸಿಎಲ್‌ನ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚೆನ್ನಪ್ಪಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT