ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ 3ನೇ ಹಂತ: ಕೇಂದ್ರಕ್ಕೆ ಪ್ರಸ್ತಾವನೆ

31 ನಿಲ್ದಾಣಗಳ ಪೈಕಿ ಬಹು ಮಾದರಿ 10 ಇಂಟರ್‌ಚೇಂಜ್ ನಿಲ್ದಾಣ
Last Updated 18 ನವೆಂಬರ್ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ಮೂರನೇ ಹಂತದ ಮೆಟ್ರೊ ರೈಲು ಕಾಮಗಾರಿಗೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, ಕೇಂದ್ರದ ಒಪ್ಪಿಗೆ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಈ ಮಾರ್ಗದಲ್ಲಿ ಬಹು ಮಾದರಿಯ ನಿಲ್ದಾಣಗಳೂ ಸೇರಿ 10 ಇಂಟರ್‌ಚೇಂಜ್ ನಿಲುಗಡೆ ತಾಣಗಳು ನಿರ್ಮಾಣವಾಗಲಿವೆ.

ಅಂದಾಜು ₹ 16,328 ಕೋಟಿ ಮೊತ್ತದ ಯೋಜನೆಯ ಎರಡು ಕಾರಿಡಾರ್‌ಗಳಲ್ಲಿ ಒಟ್ಟು 44.65 ಕಿಲೋ ಮೀಟರ್‌ನಷ್ಟು ಮೆಟ್ರೊ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. 31 ನಿಲ್ದಾಣಗಳು ನಿರ್ಮಾಣವಾಗಲಿದ್ದು, ಸರಾಸರಿ ಮೂರರಿಂದ ನಾಲ್ಕು ಕಿಲೋ ಮೀಟರ್ ವ್ಯಾಪ್ತಿಗೊಂದು ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣವಾಗಲಿದೆ.

ಕಾಮಾಕ್ಯ ವೃತ್ತದಲ್ಲಿ ಈಗಾಗಲೇ ಬಿಎಂಟಿಸಿ ಬಸ್ ಟರ್ಮಿನಲ್ ಇದೆ. ಇದಕ್ಕೆ ಹೊಂದಿಕೊಂಡಂತೆ ಮೆಟ್ರೊ ನಿಲ್ದಾಣ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ಸಿದ್ಧಪಡಿಸಿರುವ ಸಮಗ್ರ ಯೋಜನಾ ವರದಿಯಲ್ಲಿ(ಡಿಪಿಆರ್‌) ಉದ್ದೇಶಿಸಿದೆ. ಬಿಇಎಲ್ ವೃತ್ತದ ಬಳಿ ಈಗಾಗಲೇ ಲೊಟ್ಟೆಗೊಲ್ಲಹಳ್ಳಿ ರೈಲು ನಿಲ್ದಾಣವಿದ್ದು, ಇಲ್ಲಿ ಉಪನಗರ ರೈಲು ಕಾರಿಡಾರ್ ಹಾದು ಹೋಗಲಿದೆ. ಇದರ ಜತೆಗೆ ಬಿಇಎಲ್ ವೃತ್ತದಲ್ಲಿ 3ನೇ ಹಂತದ ಮೆಟ್ರೊ ರೈಲು ಯೋಜನೆಯಲ್ಲಿ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೂ ಪ್ರಸ್ತಾಪಿಸಲಾಗಿದೆ.

ಹೆಬ್ಬಾಳ ರೈಲು ನಿಲ್ದಾಣದ ಮೂಲಕವೇ ಉಪನಗರ ರೈಲು ಕಾರಿಡಾರ್ ಹಾದು ಹೋಗಲಿದೆ. ಇದಕ್ಕೆ ಹೊಂದಿಕೊಂಡಂತೆ ಮೆಟ್ರೊ ರೈಲು ನಿಲ್ದಾಣ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಉಳಿದಂತೆ ಎಲ್ಲಾ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಮೆಟ್ರೊ ರೈಲು ಬದಲಾವಣೆಗೆ ಅವಕಾಶವಾಗಲಿದೆ. ಇದರೊಂದಿಗೆ ಅತಿ ಹೆಚ್ಚು ಮಾರ್ಗ ಬದಲಾವಣೆಗೆ ಅವಕಾಶ ಇರುವ ಕಾರಿಡಾರ್‌ ಇದಾಗಲಿದೆ. ಕ್ರಮವಾಗಿ 42 ಕಿ.ಮೀ ಮತ್ತು 72 ಕಿ.ಮೀ ಜಾಲದ ಮೊದಲೆರಡು ಹಂತಗಳು ಸೇರಿ ಕೇವಲ ಮೂರು ಇಂಟರ್‌ಚೇಂಜ್‌ಗಳಿವೆ.

1ನೇ ಕಾರಿಡಾರ್ ಜೆ.ಪಿ. ನಗರ 4ನೇ ಹಂತದಿಂದ ಆರಂಭವಾಗಿ ಪಶ್ಚಿಮ ಹೊರ ವರ್ತುಲ ರಸ್ತೆ ಮಾರ್ಗದಲ್ಲಿ ಹಾದು ಕೆಂಪಾಪುರ ತಲುಪಲಿದ್ದು, ಸುಮಾರು 32.15 ಕಿ.ಮೀ ಮಾರ್ಗ ಇದಾಗಲಿದೆ. 2ನೇ ಕಾರಿಡಾರ್ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮೂಲಕ ಕಡಬಗೆರೆ ತನಕ 12.5 ಕಿ.ಮೀ ಮಾರ್ಗ ಇದಾಗಿದೆ. ಎರಡೂ ಎತ್ತರಿಸಿದ ಮಾರ್ಗಗಳಾಗಿದ್ದು, ಇವುಗಳ ನಿರ್ವಹಣೆಗೆ ಸುಂಕದಕಟ್ಟೆಯಲ್ಲಿ ಡಿಪೊ ತಲೆ ಎತ್ತಲಿದೆ. ಒಟ್ಟಾರೆ ಈ ಯೋಜನೆಗೆ 110 ಎಕರೆ ಭೂಮಿ ಸ್ವಾಧೀನವಾಗಲಿದ್ದು, ಇದರಲ್ಲಿ ಶೇ 15ರಷ್ಟು ಖಾಸಗಿ ಮಾಲಿಕತ್ವದ ಜಾಗವೂ ಸೇರಿದೆ.

ಈ ಯೋಜನೆಗೆ ಶೇ 20ರಷ್ಟು ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಉಳಿದ ಮೊತ್ತವನ್ನು ವಿವಿಧ ಹಣಕಾಸು ಸಂಸ್ಥೆ, ಮಹಡಿ ವಿಸ್ತೀರ್ಣ ಅನುಪಾತ (ಎಫ್‌ಎಆರ್) ಹೆಚ್ಚಳ, ಜಾಹೀರಾತು, ಆಸ್ತಿ ಅಭಿವೃದ್ಧಿ ಸೇರಿ ವಿವಿಧ ಕ್ರಮಗಳ ಮೂಲಕ ಕೂಡಿಸಲು ಉದ್ದೇಶಿಸಲಾಗಿದೆ. ನಗರ ಸಾರಿಗೆ ನಿಧಿ (ಎಸ್‌ಯುಟಿಎಫ್), ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್), ಮೆಗಾ ಸಿಟಿ ರಿವಾಲ್ವಿಂಗ್ ನಿಧಿ ಮೂಲಕವೂ ಅನುದಾನ ಪಡೆದುಕೊಳ್ಳಲು ಉದ್ದೇಶಿಸಲಾಗಿದೆ.

ಮೆಟ್ರೊ ಯೋಜನೆಗಳು ಈಗ ಕೇಂದ್ರ ಸರ್ಕಾರದ ‘ಗತಿಶಕ್ತಿ’ ಯೋಜನೆಯಡಿ ಸೇರಿಕೊಂಡಿವೆ. ಆದ್ದರಿಂದ ಮೂರನೇ ಹಂತದ ಮೆಟ್ರೊ ರೈಲು ಯೋಜನೆಗೆ ಈ ಯೋಜನೆಯಡಿಯೂ ಹೆಚ್ಚಿನ ಅನುದಾನ ನೀಡಿದರೆ ಸಾಲದ ಹೊರೆ ತಗ್ಗಲಿದೆ ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ಉದ್ದೇಶಿತ ಮಾರ್ಗದಲ್ಲಿ ಬರುವ ರಸ್ತೆ ಮೇಲ್ಸೇತುವೆ ಮತ್ತು ಇತರ ರಸ್ತೆಗಳ ಅಭಿವೃದ್ಧಿಗೂ ₹507.29 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಈ ಮೊತ್ತವನ್ನು ಬಿಎಂಆರ್‌ಸಿಎಲ್ ಮತ್ತು ಬಿಬಿಎಂಪಿ ಕ್ರಮವಾಗಿ 75:25ರ ಅನುಪಾತದಲ್ಲಿ ಭರಿಸಲಿವೆ. ಕನಕಪುರ ರಸ್ತೆ ಜಂಕ್ಷನ್ ಬಳಿ 1.366 ಕಿ.ಮೀ ಹಾಗೂ ಕಾಮಾಕ್ಯ- ಇಟ್ಟಮಡು- ಹೊಸಕೆರೆಹಳ್ಳಿ ಜಂಕ್ಷನ್ ಬಳಿ 1.563 ಕಿ.ಮೀ ಉದ್ದದ ಎರಡು ಮೇಲ್ಸೇತುವೆಗಳನ್ನು ಮೆಟ್ರೊ ರೈಲು ನಿಲ್ದಾಾಣಗಳ ಜತೆ ಇಂಟಿಗ್ರೇಟ್ ಮಾಡಲು ಉದ್ದೇಶಿಸಲಾಗಿದೆ.

ಎಲ್ಲೆಲ್ಲಿ ಮೆಟ್ರೊ ನಿಲ್ದಾಣ?
1ನೇ ಕಾರಿಡಾರ್‌ನಲ್ಲಿ 22 ನಿಲ್ದಾಣಗಳನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಡಿಪಿಆರ್‌ನಲ್ಲಿ ಪ್ರಸ್ತಾಪಿಸಿದೆ. ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಜೆ.ಪಿ.ನಗರ, ಕದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್, ಹೊಸಕೆರೆಹಳ್ಳಿ, ದ್ವಾರಕನಗರ, ಮೈಸೂರು ರಸ್ತೆ, ನಾಗರಬಾವಿ ವೃತ್ತ, ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್, ಸುಮನಹಳ್ಳಿ ಕ್ರಾಸ್, ಚೌಡೇಶ್ವರಿನಗರ, ಸ್ವಾತಂತ್ರ್ಯ ಯೋಧರ ಕಾಲೊನಿ, ಕಂಠೀರವನಗರ, ಪೀಣ್ಯ, ಮುತ್ಯಾಲನಗರ, ಬಿಇಎಲ್ ಸರ್ಕಲ್, ನಾಗಶೆಟ್ಟಿಹಳ್ಳಿ, ಹೆಬ್ಬಾಳ ರೈಲು ನಿಲ್ದಾಣ, ಕೆಂಪಾಪುರದಲ್ಲಿ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಿದೆ.

ಕಾರಿಡಾರ್–2ರಲ್ಲಿ 9 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದ್ದು, ಹೊಸಹಳ್ಳಿ, ಕೆ.ಎಚ್‌.ಬಿ. ಕಾಲೊನಿ, ಕಾಮಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್, ಕಡಬಗೆರೆಯಲ್ಲಿ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆ ಇದೆ.

ಪೈಕಿ ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ, ಕಾಮಕ್ಯ ಜಂಕ್ಷನ್, ಮೈಸೂರು ರಸ್ತೆ, ಸುಮನಹಳ್ಳಿ ಕ್ರಾಸ್, ಪೀಣ್ಯ, ಬಿಇಎಲ್ ಸರ್ಕಲ್, ಹೆಬ್ಬಾಳ ರೈಲು ನಿಲ್ದಾಣ, ಕೆಂಪಾಪುರ, ಹೊಸಹಳ್ಳಿ ನಿಲ್ದಾಣಗಳು ಮಾರ್ಗ ಬದಲಾಯಿಸುವ ನಿಲ್ದಾಣಗಳಾಗಲಿವೆ ಎಂದು ಡಿಪಿಆರ್‌ನಲ್ಲಿ ವಿವರಿಸಿದೆ.

ಒಳಾಂಗಣ ಜಾಹೀರಾತು ಅಳವಡಿಕೆಗೆ ಸಮ್ಮತಿ
ಮೆಟ್ರೊ ನಿಲ್ದಾಣಗಳ ಒಳಾಂಗಣದಲ್ಲಿ ಜಾಹಿರಾತು ಫಲಕಗಳ ಅಳವಡಿಕೆಗೆ ಸರ್ಕಾರ ಅನುಮತಿ ನೀಡಿದೆ.

‌ಹೊರಾಂಗಣ ಜಾಹೀರಾತು ಫಲಕ ಅಳವಡಿಕೆಗೆ ಬಿಬಿಎಂಪಿ ನಿಷೇಧ ಹೇರಿದ ಬಳಿಕ ಮೆಟ್ರೊ ರೈಲು ಮಾರ್ಗದ ಕಂಬಗಳಿಗೆ ಅಳವಡಿಸಿದ್ದ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಗಿತ್ತು. ಇದರಿಂದ ನಿಗಮಕ್ಕೆ ವರಮಾನದಲ್ಲಿ ಖೋತಾ ಆಗಿತ್ತು.

ಮೆಟ್ರೊ ರೈಲು ನಿಲ್ದಾಣಗಳ ಒಳಾಂಗಣ ಮತ್ತು ರೈಲುಗಳಲ್ಲಿ ಜಾಹೀರಾತು ಫಲಕ ಅಳವಡಿಕೆಗೆ ನಿಷೇಧ ಇಲ್ಲದಿರುವುದರಿಂದ ಅನುಮತಿ ನೀಡುವಂತೆ ಸರ್ಕಾರಕ್ಕೆ ಇತ್ತೀಚೆಗೆ ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿತ್ತು.

ಹಣಕಾಸಿನ ಮೂಲ ಮತ್ತು ಹಂಚಿಕೆ
* ಮೂರನೇ ಹಂತದ ಎರಡು ಕಾರಿಡಾರ್‌ಗೆ ಒಟ್ಟು ಮೊತ್ತ ₹16,328 ಕೋಟಿ
* ಕೇಂದ್ರ ಸರ್ಕಾರದ ಪಾಲು ₹2526 ಕೋಟಿ(ಶೇ 20)
* ರಾಜ್ಯ ಸರ್ಕಾರದ ಪಾಲು ₹2526 ಕೋಟಿ(ಶೇ 20)
* ಇತರ ಮೂಲಗಳಿಂದ ₹3699 ಕೋಟಿ

ದಿನದ ನಿರೀಕ್ಷಿತ ಪ್ರಯಾಣಿಕರ ಸಂಖ್ಯೆ(ಲಕ್ಷಗಳಲ್ಲಿ)
ವರ್ಷ
; 2028; 2031; 2041; 2051
ಕಾರಿಡಾರ್ –1; 4.63; 4.89; 5.91; 6.66
ಕಾರಿಡಾರ್–2; 1.72; 1.81; 2.18; 2.46
ಒಟ್ಟು; 6.35; 6.70; 8.10; 9.12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT